ಎಫ್‌ಐಡಿ ಆದೇಶ ಕೈಬಿಟ್ಟು, ಸಮರ್ಪಕ ಬೀಜ, ರಸಗೊಬ್ಬರ ಪೂರೈಸಿ

KannadaprabhaNewsNetwork |  
Published : May 06, 2026, 01:30 AM IST
5ಕೆಡಿವಿಜಿ3-ದಾವಣಗೆರೆಯಲ್ಲಿ ಮಂಗಳವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ನೀಡಲು ವಿಧಿಸಿರುವ ಎಫ್ಐಡಿ ತರುವ ‍ಆದೇಶವನ್ನು ಕೈಬಿಡುವ ಜೊತೆಗೆ ಸಬ್ಸಿಡಿ ರೂಪದಲ್ಲಿ ಗುಣಮಟ್ಟದ ಬೀಜ, ರಸಗೊಬ್ಬರವನ್ನು ಸಕಾಲಕ್ಕೆ ರೈತರಿಗೆ ಪೂರೈಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ವಾದುಸೇವ ಮೇಟಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

- ರೈತರ ಮೇಲೆ ಲಾಠಿ ಬೀಸುವ ದುಸ್ಸಾಹಸ ಬೇಡ: ರಾಜ್ಯ ಸರ್ಕಾರಕ್ಕೆ ವಾಸುದೇವ ಮೇಟಿ ಎಚ್ಚರಿಕೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ನೀಡಲು ವಿಧಿಸಿರುವ ಎಫ್ಐಡಿ ತರುವ ‍ಆದೇಶವನ್ನು ಕೈಬಿಡುವ ಜೊತೆಗೆ ಸಬ್ಸಿಡಿ ರೂಪದಲ್ಲಿ ಗುಣಮಟ್ಟದ ಬೀಜ, ರಸಗೊಬ್ಬರವನ್ನು ಸಕಾಲಕ್ಕೆ ರೈತರಿಗೆ ಪೂರೈಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರಿಗೆ ರಸಗೊಬ್ಬರ ಎಫ್‌ಐಡಿ ತರುವಂತೆ ಆದೇಶಿಸಿದೆ. ಈ ಕೂಡಲೇ ಎಫ್‌ಐಡಿ ರದ್ದುಪಡಿಸುವ ಜೊತೆಗೆ ಸಬ್ಸಿಡಿ ರೂಪದಲ್ಲಿ ಗುಣಮಟ್ಟದ ಬೀಜ ಮತ್ತು ರಸಗೊಬ್ಬರವನ್ನು ಸಕಾಲದಲ್ಲಿ ಪೂರೈಸಲಿ ಎಂದರು.

1 ಎಕರೆಗೆ 1 ಕ್ವಿಂಟಲ್ ರಸಗೊಬ್ಬರ ನೀಡುವುದಾಗಿ ಹೇಳಿರುವುದು ಖಂಡನೀಯ. ದಾವಣಗೆರೆ ಜಿಲ್ಲೆಯಲ್ಲಿ 3.29 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ 1,59,520 ಮೆಟ್ರಕ್ ಟನ್ ರಸಗೊಬ್ಬರದ ಅಗತ್ಯವಿದೆ. 1 ಎಕರೆಗೆ 1 ಕ್ವಿಂಟಲ್ ಗೊಬ್ಬರ ನೀಡಿದರೆ ಎಲ್ಲಿಗೆ ಹಾಕಬೇಕು? ಇಷ್ಟು ಕಡಿಮೆ ಪ್ರಮಾಣದ ರಸಗೊಬ್ಬರ ಯಾವುದಕ್ಕೂ ಸಾಲದು. ಹಾಗಾಗಿ, ಸರ್ಕಾರ ಕೂಡಲೇ ಎಫ್‌ಐಡಿ ಆದೇಶ ಕೈ ಬಿಡಬೇಕು ಎಂದು ಹೇಳಿದರು.

ಹಾವೇರಿಯಲ್ಲಿ ರಸಗೊಬ್ಬರಕ್ಕಾಗಿ ರೈತರು ಸರದಿಯಲ್ಲಿ ನಿಲ್ಲುತ್ತಿದ್ದಾರೆ. ರಸಗೊಬ್ಬರ ಪಡೆಯಲು ಬಂದ ರೈತರ ಮೇಲೆ ಲಾಠಿ ಬೀಸಲಾಗಿದೆ. ಆ ಮೂಲಕ ಇಡೀ ರೈತರನ್ನು ಕತ್ತಲಲ್ಲಿಡುವ ಕೆಲಸ ಸರ್ಕಾರ ಮಾಡುತ್ತಿದೆ. ಇನ್ನು ಮುಂದೆ ಎಲ್ಲಿಯಾದರೂ ರೈತರ ಮೇಲೆ ಲಾಠಿ ಬೀಸಿದರೆ ಮುಖ್ಯಮಂತ್ರಿ, ಸಚಿವರ ವಿರುದ್ಧ ಕಪ್ಪುಬಟ್ಟೆ ಪ್ರದರ್ಶನ, ಘೇರಾವ್ ಮಾಡುವುದೂ ಸೇರಿದಂತೆ ವಿವಿಧ ರೀತಿಯ ಹೋರಾಟ ನಡೆಸಬೇಕಾದೀತು ಎಂದು ಅವರು ಎಚ್ಚರಿಸಿದರು.

ಸರ್ಕಾರ ರಸಗೊಬ್ಬರ ಪೂರೈಕೆ ಬದಲಿಗೆ ಕಳೆದ ವರ್ಷ ನ್ಯಾನೊ ಬಳಸುವಂತೆ ಹೇಳಿತ್ತು. ಅದರಿಂದ ರೈತರಿಗೆ ನಷ್ಟವಾಯಿತೇ ಹೊರತು, ಯಾವುದೇ ಅನುಕೂಲ ಆಗಲಿಲ್ಲ. ಈ ಬಾರಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆದಿದ್ದರೂ ಕ್ವಿಂಟಲ್‌ಗೆ ₹1700ರಿಂದ ₹1800 ದರ ಇದೆ. ರೈತರಿಗೆ ಇದರಿಂದ ಘೋರ ಅನ್ಯಾಯವಾಗುತ್ತಿದೆ. ಕಾಂಗ್ರೆಸ್ ಸರ್ಕಾರ ರೈತರ ಪಾಲಿಗೆ ಅತ್ಯಂತ ಕಳಪೆ, ಅಯೋಗ್ಯ ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾ.ನಾಗಮೋಹನ ದಾಸ್‌ ಅವರನ್ನು ನೀರಾವರಿ ಆಯೋಗ ಅಧ್ಯಕ್ಷರಾಗಿ ಸರ್ಕಾರ ನೇಮಿಸಿದೆ. ಅಧ್ಯಕ್ಷರ ಪ್ರಕಾರ ಕಳೆದ 15 ವರ್ಷದಲ್ಲಿ ಯಾವುದೇ ಸರ್ಕಾರ ರಾಜ್ಯದ ನೀರಾವರಿ ಯೋಜನೆ ಬಗ್ಗೆ ಚರ್ಚಿಸಲು ಕೇಂದ್ರದ ಬಳಿ ಒಂದೇ ಒಂದು ಕಡತ ಕೊಂಡೊಯ್ದಿಲ್ಲ. ಆಯೋಗದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ನ್ಯಾ.ನಾಗಮೋಹನ ದಾಸ್ ಹೇಳಿದ ನಂತರ ಡಿಸಿಎಂ ಡಿ.ಕೆ.ಶಿವಕುಮಾರ ಇತರರು ಕಡತಗಳೊಂದಿಗೆ ದೆಹಲಿಗೆ ತೆರಳಿದ್ದಾರೆ. ಈ ಸರ್ಕಾರ ರೈತರ ಪಾಲಿಗೆ ದುರಾದೃಷ್ಟದ ಸರ್ಕಾರವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ತಾನು ಅಧಿಕಾರಕ್ಕೆ ಬಂದ ತಕ್ಷಣ ರೈತರಿಗೆ ಮಾರಕವಾದ ಮೂರೂ ಕೃಷಿ ತಿದ್ದುಪಡಿ ಕಾಯ್ದೆ ರದ್ದುಪಡಿಸುವುದಾಗಿ ಹೇಳಿತ್ತು. ಈವರೆಗೂ ರದ್ದುಪಡಿಸಿಲ್ಲ. ನೀರಾವರಿ ಯೋಜನೆ ಬಗ್ಗೆ ಗಮನಹರಿಸುತ್ತಿಲ್ಲ. ಗ್ರಾಮೀಣ ಭಾಗದ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಕೃಷಿ ಪಂಪ್‌ಸೆಟ್‌ಗೆ ಡಿಜಿಟಲ್ ಮೀಟರ್ ಅಳವಡಿಕೆ, ಮೊಬೈಲ್ ಮಾದರಿಯಲ್ಲಿ ವಿದ್ಯುತ್ ರಿಚಾರ್ಜ್ ವ್ಯವಸ್ಥೆಗೆ ಮುಂದಾಗಿದೆ. ಒಟ್ಟಾರೆಯಾಗಿ ರೈತರಿಗೆ ಸರ್ಕಾರ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.

ಭರಮಸಮುದ್ರ ಕುಮಾರ ಮಾತನಾಡಿ, ದಾವಣಗೆರೆ ಜಿಲ್ಲಾಡಳಿತ ಕೂಡಲೇ ಬತ್ತ ಖರೀದಿ ಕೇಂದ್ರಗಳನ್ನು ಪ್ರಾರಂಭ ಮಾಡಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕುವ ಮೂಲಕ ರೈತರು ಹಳೆಯ ಹೋರಾಟಕ್ಕೆ ಮರಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಘದ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ, ಕೆಂಚಮ್ಮನಹಳ್ಳಿ ಹನುಮಂತಪ್ಪ, ಕಿತ್ತೂರು ಹನುಮಂತಪ್ಪ, ಸುನಿಲ್, ಕೋಲ್ಕುಂಟೆ ಉಚ್ಚೆಂಗೆಪ್ಪ, ಗುಂಡಪ್ಪ, ಭರತ್, ಏಕಾಂತಪ್ಪ, ಪಾಲಣ್ಣ , ಜಗದೀಶ, ಮಂಜುನಾಥ, ಮಲ್ಲಿಕಾರ್ಜುನ, ಮಧು ಇತರರು ಇದ್ದರು.

- - -

(ಕೋಟ್‌) ಬಗರ್‌ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಬೇಕು. ಕೂಡಲೇ ಸಮಿತಿ ರಚನೆ ಮಾಡಿ, ಅರ್ಹ ರೈತರಿಗೆ ಸಾಗುವಳಿ ಚೀಟಿ ಕೊಡಬೇಕು. ಫಸಲ್ ವಿಮಾ ಯೋಜನೆಯಡಿ ತಕ್ಷಣ ರೈತರ ಖಾತೆಗೆ ಹಣ ಜಮಾ ಮಾಡಬೇಕು. ದಾವಣಗೆರೆ ಜಿಲ್ಲೆಯ ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದ್ದು, ಕೂಡಲೇ ನೀರಿನ ಸಮಸ್ಯೆ ನಿವಾರಿಸಲು ಜಿಲ್ಲಾಧಿಕಾರಿ ಗಮನಹರಿಸಿ, ನೀರಿನ ಬವಣೆ ನೀಗಿಸಬೇಕು.

- ಗುಮ್ಮನೂರು ಬಸವರಾಜ, ಜಿಲ್ಲಾಧ್ಯಕ್ಷ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ.

- - -

-5ಕೆಡಿವಿಜಿ3: ದಾವಣಗೆರೆಯಲ್ಲಿ ಮಂಗಳವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀಗ ಪ್ರಕರಣ ತನಿಖೆಗೆ ಕಠಿಣ ಕ್ರಮಕ್ಕೆ ಶಿವಕುಮಾರಪ್ಪ ಒತ್ತಾಯ
ದಕ್ಷಿಣ ಕ್ಷೇತ್ರ ಸೋಲಿಗೆ ಬಿಜೆಪಿ ಕಾರ್ಯಕರ್ತರು ಎದೆಗುಂದಬೇಡಿ