ಶಿವಾನಂದ ಗೊಂಬಿ
ವಿಷಯುಕ್ತ ಪುಣ್ಯಸ್ನಾನ ಬಿಡಿ; ಕಡಲೆ ಹಿಟ್ಟು ಬಳಸಿ ಜಲಮೂಲಗಳ ರಕ್ಷಿಸಿ!
ಇದು ಇಲ್ಲಿನ ವರದಶ್ರೀ ಫೌಂಡೇಷನ್ ವತಿಯಿಂದ ಸಂಕ್ರಾಂತಿ ಹಬ್ಬದಂದು ವಿಷಮುಕ್ತ ಪುಣ್ಯ ಸ್ನಾನಕ್ಕಾಗಿ ನಡೆಸುತ್ತಿರುವ ಜಾಗೃತಿ ಅಭಿಯಾನದ ಉದ್ಘೋಷ.ಹಿಂದೂಗಳ ಪಾಲಿನ ಪ್ರಮುಖ ಹಬ್ಬಗಳಲ್ಲೊಂದಾದ ಸಂಕ್ರಾಂತಿ ವರ್ಷದ ಮೊದಲ ಹಬ್ಬ. ಸೂರ್ಯ ತನ್ನ ಪಥ ಬದಲಿಸುವ ಶುಭ ಘಳಿಗೆ. ಈ ಹಿನ್ನೆಲೆಯಲ್ಲಿ ಮಕರ ಸಂಕ್ರಾಂತಿಯಂದು ತೀರ್ಥ ಕ್ಷೇತ್ರಗಳಿಗೆ ಕುಟುಂಬಸ್ಥರು, ನೆಂಟರಿಷ್ಠರೊಂದಿಗೆ ತೆರಳಿ ಪುಣ್ಯಸ್ನಾನ ಮಾಡುವುದು ವಾಡಿಕೆ.
7 ಕೋಟಿ ಜನಸಂಖ್ಯೆ ಹೊಂದಿರುವ ಕರ್ನಾಟಕದಲ್ಲಿ ಅಂದಾಜಿನಂತೆ 2.5 ಕೋಟಿಗೂ ಅಧಿಕ ಜನರು ತೀರ್ಥ ಕ್ಷೇತ್ರಗಳಿಗೆ ತೆರಳಿ ಪುಣ್ಯಸ್ನಾನ ಮಾಡುತ್ತಾರೆ. ಹೀಗೆ ಪುಣ್ಯಸ್ನಾನ ಮಾಡುವ ಜನರು ತಮಗರಿವಿಲ್ಲದಂತೆ ಸೋಪು, ಶಾಂಪು, ಟೂತ್ ಫೆಸ್ಟ್ ಬಳಸುವ ಮೂಲಕ ಜಲಮೂಲ ಮಲೀನಗೊಳಿಸುತ್ತಿದ್ದಾರೆ. ಒಬ್ಬ ಮನುಷ್ಯ ಕನಿಷ್ಠವೆಂದರೂ 25ರಿಂದ 30 ಎಂಎಲ್ ಶಾಂಪು ಬಳಸುತ್ತಾನೆ. ಅದರ ಲೆಕ್ಕದ ಮೇಲೆ ಸಾವಿರಾರು ಟ್ಯಾಂಕರ್‌ನಷ್ಟು ಶಾಂಪು, 40-50 ಲಾರಿಗಳಷ್ಟೇ ಸೋಪು ಜಲಮೂಲ ಸೇರುತ್ತದೆಯಂತೆ. ಟೂತ್ ಫೆಸ್ಟ್ ಕೂಡ ಭಾರೀ ಪ್ರಮಾಣದಲ್ಲಿ ನೀರನ್ನು ಸೇರುತ್ತದೆಯಂತೆ. ಇನ್ನು ಶಾಂಪು, ಸೋಪಿನ ಪ್ಲಾಸ್ಟಿಕ್ ರ್‍ಯಾಪರ್ ಬಿಸಾಡಲಾಗುತ್ತದೆ. ಅದು ಕೂಡ ನದಿ ಸೇರುತ್ತಿದೆ. ಇವೆಲ್ಲವುಗಳಿಂದ ಜಲಮೂಲಗಳ ನೀರು ಮಲೀನವಾಗಿ ವಿಷಯುಕ್ತವಾಗುತ್ತಿದೆ. ಜತೆಗೆ ಜಲಚರಗಳಿಗೂ ಸಂಕಷ್ಟ ತಂದೊಡ್ಡುತ್ತಿದೆ.ಕಡಲೆ ಹಿಟ್ಟು ವಿತರಣೆ:
ರಾಸಾಯನಿಕ ಮುಕ್ತ, ವಿಷಮುಕ್ತ ಪುಣ್ಯಸ್ನಾನಕ್ಕಾಗಿ ಹುಬ್ಬಳ್ಳಿಯ ವರದಶ್ರೀ ಫೌಂಡೇಷನ್ ಮೂರು ವರ್ಷದಿಂದ ಜಾಗೃತಿ ಮೂಡಿಸುತ್ತಿದೆ. ಈ ಅಭಿಯಾನದಡಿ ಜ. 15ರಂದು ನಾಡಿನ ನೂರಾರು ತೀರ್ಥ ಕ್ಷೇತ್ರಗಳಲ್ಲಿ 25 ಲಕ್ಷ್ಕೂ ಅಧಿಕ ಕಡಲೆ ಹಿಟ್ಟಿನ ಪ್ಯಾಕೆಟ್ ವಿತರಿಸುತ್ತಿದೆ.ನೀವು ತಂದಿರುವ ಸೋಪು, ಶಾಂಪು ವಾಪಸ್ ತೆಗೆದುಕೊಂಡು ಹೋಗಿ ನಾವು ಕೊಡುವ ಕಡಲೆ ಹಿಟ್ಟು ಬಳಸಿ ಪುಣ್ಯಸ್ನಾನ ಮಾಡಿ ಎಂದು ಜಾಗೃತಿ ನಡೆಸುತ್ತಿದೆ. ಕಡಲೆ ಹಿಟ್ಟಿನಿಂದ ನೀರು ಮಲೀನ ಆಗುವುದಿಲ್ಲ. ಜತೆಗೆ ಜಲಚರಗಳಿಗೆ ಆಹಾರವೂ ಆಗುತ್ತದೆ ಎಂಬುದು ಘೋಷವಾಕ್ಯ.
ಧರ್ಮಸ್ಥಳ, ಕೂಡಲಸಂಗಮ, ಹುಲಗಿ, ಹಂಪಿ, ಬಾದಾಮಿ, ಬನಶಂಕರಿ ಸೇರಿದಂತೆ ವಿವಿಧೆಡೆ ಈ ಕಡಲೆ ಹಿಟ್ಟಿನ ಪ್ಯಾಕೆಟ್ ವಿತರಿಸಲಿದೆ. ಈ ಕೆಲಸಕ್ಕೆ ರಾಜ್ಯದ 300ಕ್ಕೂ ಅಧಿಕ ಖಾಸಗಿ ಸಂಘ-ಸಂಸ್ಥೆಗಳು ಕೈ ಜೋಡಿಸಿದ್ದು, ವರದಶ್ರೀ ಫೌಂಡೇಷನ್ ನೀಡುವ ಕಡಲೆ ಹಿಟ್ಟಿನ ಪ್ಯಾಕೆಟ್‌ಗಳನ್ನು ತೀರ್ಥ ಕ್ಷೇತ್ರಗಳಲ್ಲಿ ವಿತರಿಸಲಿವೆ. ಕಡಲೆ ಹಿಟ್ಟು ಬಳಸಿ ಸ್ನಾನ ಮಾಡಿ ಪುಣ್ಯಸ್ನಾನಕ್ಕೆ ನೈಜ ಅರ್ಥ ಕಲ್ಪಿಸಿ ಎಂಬುದು ಪೌಂಡೇಷನ್‌ನ ಆಶಯ.ಪುಣ್ಯಸ್ನಾನದ ಹೆಸರಲ್ಲಿ ಜಲಮೂಲಗಳನ್ನು ಮಲೀನಗೊಳಿಸಲಾಗುತ್ತದೆ. ಅದನ್ನು ತಪ್ಪಿಸಲು ಜಾಗೃತಿ ನಡೆಸಲಾಗುತ್ತಿದೆ. ತೀರ್ಥಕ್ಷೇತ್ರಗಳಲ್ಲಿ ಜ. 15ರಂದು 25 ಲಕ್ಷ ಕಡಲೆ ಹಿಟ್ಟಿನ ಪ್ಯಾಕೆಟ್ ವಿತರಿಸಲಾಗುತ್ತಿದೆ. ಈ ಕಾರ್ಯಕ್ಕೆ 300ಕ್ಕೂ ಅಧಿಕ ಸಂಘ-ಸಂಸ್ಥೆಗಳು ಕೈ ಜೋಡಿಸಿವೆ.ಮಲ್ಲಿಕಾರ್ಜುನ ರೆಡ್ಡರ, ಸಂಸ್ಥಾಪಕರು, ವರದಶ್ರೀ ಫೌಂಡೇಷನ್