ಕೇಂದ್ರದ ಮಾರ್ಗಸೂಚಿಯಂತೆ ಬರ ಘೋಷಣೆ: ಸಿಎಂ

KannadaprabhaNewsNetwork |  
Published : Sep 02, 2026, 03:15 AM IST
 | Kannada Prabha

ಸಾರಾಂಶ

ಮಳೆ ಕೈಕೊಟ್ಟು ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ಗದಗ ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಿದರು.

ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಸ್ಥಿತಿಗತಿ ಪರಿಶೀಲನೆಕನ್ನಡಪ್ರಭ ವಾರ್ತೆ ಗದಗ

ಮಳೆ ಕೈಕೊಟ್ಟು ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ಗದಗ ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಿದರು.

ಜಿಲ್ಲೆಯ ಮುಂಡರಗಿ ತಾಲೂಕಿನ ಕದಾಂಪೂರ, ಗದಗ ತಾಲೂಕಿನ ಹುಲಕೋಟಿ, ಕುರ್ತಕೋಟಿ ಗ್ರಾಮಗಳಿಗೆ ಭೇಟಿ ನೀಡಿ ರೈತರ ಜಮೀನುಗಳಿಗೆ ತೆರಳಿ ಸೂರ್ಯಕಾಂತಿ, ಜೋಳ, ಹತ್ತಿ, ಕಡಲೆಕಾಯಿ ಸೇರಿದಂತೆ ವಿವಿಧ ಬೆಳೆಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು.

ಗದಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಬರದ ಪರಿಸ್ಥಿತಿ ಉಂಟಾಗಿದ್ದು, ಈಗಾಗಲೇ ಒಂದು ತಾಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಉಳಿದ ಆರು ತಾಲೂಕುಗಳನ್ನೂ ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ರೈತರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ರೈತರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬರ ಪರಿಸ್ಥಿತಿ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಇನ್ನಷ್ಟು ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಲಾಗುವುದು. ಬಳಿಕ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ವರದಿ ಸಿದ್ಧಪಡಿಸಿ, ಅರ್ಹ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಜಮೀನುಗಳಿಗೆ ಭೇಟಿ:

ಮುಖ್ಯಮಂತ್ರಿ ಅವರು ರೈತರ ಜಮೀನುಗಳಿಗೆ ತೆರಳಿ ಮಳೆ ಕೊರತೆಯಿಂದ ಬೆಳೆಗಳ ಮೇಲೆ ಉಂಟಾಗಿರುವ ಪರಿಣಾಮವನ್ನು ಪರಿಶೀಲಿಸಿದರು. ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸಿ ಬಿತ್ತನೆ, ಮಳೆ ಪ್ರಮಾಣ, ಬೆಳೆಗಳ ಬೆಳವಣಿಗೆ ಹಾಗೂ ನಷ್ಟದ ಕುರಿತು ಮಾಹಿತಿ ಪಡೆದರು.

ಕುರ್ತಕೋಟಿಯಲ್ಲಿ ರೈತ ಜಿ.ಎನ್. ಪಾಟೀಲ ಅವರ ಜಮೀನಿಗೆ ಭೇಟಿ ನೀಡಿದ ಮುಖ್ಯಮಂತ್ರಿ, ಜಮೀನಿನ ಬದುಗಳಲ್ಲಿ ಬೆಳೆಸಲಾಗುತ್ತಿರುವ ತೇಗದ ಮರಗಳನ್ನು ಪರಿಶೀಲಿಸಿದರು. ಸರ್ಕಾರದ ತೇಗದ ಸಿರಿ ಯೋಜನೆಯ ಬಗ್ಗೆಯೂ ರೈತರೊಂದಿಗೆ ಚರ್ಚಿಸಿದರು.ವಿಬಿ ಗ್ರಾಮ್ ಜಿ ಕೆಲಸ ಹೆಚ್ಚಿಸಿ:

ಕುರ್ತಕೋಟಿಯಲ್ಲಿ ಕೃಷಿ ಕೂಲಿ ಕಾರ್ಮಿಕರೊಂದಿಗೆ ಮುಖ್ಯಮಂತ್ರಿ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರು, ನರೇಗಾ ಯೋಜನೆಯಡಿ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ದೊರೆಯುತ್ತಿತ್ತು. ಇದೀಗ ವಿಬಿ ಗ್ರಾಮ್ ಜಿ ಯೋಜನೆಯಡಿ ಹೆಚ್ಚಿನ ದಿನಗಳ ಕೆಲಸ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕುಂಠಿತಗೊಂಡಿರುವ ಸಂದರ್ಭದಲ್ಲಿ ಕೂಲಿ ಕೆಲಸದ ಕೊರತೆಯಿಂದ ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂದು ಸಿಎಂ ಗಮನಕ್ಕೆ ತಂದರು.

ಗ್ಯಾರಂಟಿ ತಲುಪುತ್ತಿವೆಯೇ?:

ಕೃಷಿ ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಮುಖ್ಯಮಂತ್ರಿ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿವೆಯೇ ಎಂಬುದನ್ನು ವಿಚಾರಿಸಿದರು.

ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳ ಪ್ರಯೋಜನ ಪಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಅವರು, ಗ್ಯಾರಂಟಿ ಯೋಜನೆಗಳ ಮರುಪರಿಶೀಲನೆ ಸಂದರ್ಭದಲ್ಲಿ ಫಲಾನುಭವಿಗಳು ತಮ್ಮದೇ ದೂರವಾಣಿ ಸಂಖ್ಯೆಯನ್ನು ನೀಡಬೇಕು. ಮೂರನೇ ವ್ಯಕ್ತಿಯ ದೂರವಾಣಿ ಸಂಖ್ಯೆ ಅಥವಾ ಬ್ಯಾಂಕ್ ಖಾತೆಯನ್ನು ಜೋಡಣೆ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಕಾರ್ಮಿಕರು, ಗ್ಯಾರಂಟಿ ಯೋಜನೆಗಳಿಂದ ತಮ್ಮ ಕುಟುಂಬಗಳಿಗೆ ನೆರವಾಗುತ್ತಿದೆ. ಪ್ರತಿ ತಿಂಗಳು 10 ಕೆ.ಜಿ. ಅಕ್ಕಿ ದೊರೆಯುತ್ತಿದ್ದು, ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿದೆ. ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸಿಗುತ್ತಿರುವುದರಿಂದ ಕೂಲಿ ಕೆಲಸ ದೊರೆಯದ ಸಂದರ್ಭದಲ್ಲೂ ಕುಟುಂಬ ನಿರ್ವಹಣೆಗೆ ಕೊಂಚ ನೆಮ್ಮದಿ ದೊರೆಯುತ್ತಿದೆ ಎಂದು ಸಿಎಂ ಗೆ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದಲ್ಲಿ 21 ಕೆಪಿಎಸ್ ಶಾಲೆಗಳ ಮಂಜೂರು-ಶಾಸಕ ಪಠಾಣ
ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆಗೆ ಶಾಸ್ತ್ರೋಕ್ತ ಚಾಲನೆ