ಬರಪೀಡಿತ ಘೋಷಣೆ: ಕಿತ್ತೂರ ಕರ್ನಾಟಕ ಮರೆತ ಸರ್ಕಾರ

KannadaprabhaNewsNetwork |  
Published : Aug 28, 2026, 02:15 AM IST
ಬೆಳೆ ಬಾರದ ಕಾರಣ ಬಿತ್ತಿದ ಬೆಳೆಯನ್ನು ಇತ್ತೀಚಿಗೆ ಹರಗಿದ್ದ ರೈತ | Kannada Prabha

ಸಾರಾಂಶ

ರಾಜ್ಯದಲ್ಲಿ ಮಳೆ ಕೊರತೆಯುಂಟಾಗಿ ಎಲ್ಲೆಡೆ ಬಿತ್ತಿದ ಬೆಳೆಗಳು ನೆಲಬಿಟ್ಟು ಏಳುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ 101 ತಾಲೂಕುಗಳನ್ನು ಬರಪೀಡಿತ ಎಂದು ಗುರುವಾರ ಘೋಷಿಸಿದೆ. ಆದರೆ, ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕಿತ್ತೂರ ಕರ್ನಾಟಕವನ್ನು ಮರೆತಿದ್ದು ರೈತರ ಆಕ್ರೋಶಕ್ಕೆ ಸರ್ಕಾರ ತುತ್ತಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ರಾಜ್ಯದಲ್ಲಿ ಮಳೆ ಕೊರತೆಯುಂಟಾಗಿ ಎಲ್ಲೆಡೆ ಬಿತ್ತಿದ ಬೆಳೆಗಳು ನೆಲಬಿಟ್ಟು ಏಳುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ 101 ತಾಲೂಕುಗಳನ್ನು ಬರಪೀಡಿತ ಎಂದು ಗುರುವಾರ ಘೋಷಿಸಿದೆ. ಆದರೆ, ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕಿತ್ತೂರ ಕರ್ನಾಟಕವನ್ನು ಮರೆತಿದ್ದು ರೈತರ ಆಕ್ರೋಶಕ್ಕೆ ಸರ್ಕಾರ ತುತ್ತಾಗಿದೆ.

ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಿದ್ದರಿಂದ ಸಾಲ ಮಾಡಿ ರೈತರು ಬಿತ್ತನೆ ಮಾಡಿದ್ದರು. ಆದರೆ, ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟ ಪರಿಣಾಮ ಬಿತ್ತಿದ ಬೆಳೆ ಭೂಮಿಯಲ್ಲಿಯೇ ಕಮರಿತು. ಅಳಿದುಳಿದ ಬೆಳೆ ಬಂದರೂ ಇಳುವರಿಯಲ್ಲಿ ಭಾರೀ ಕುಸಿತವಾದ ಪರಿಣಾಮ ರೈತರಿಗೆ ಆರ್ಥಿಕ ನಷ್ಟ ಅನುಭವಿಸಿದರು.ಕಣ್ಣೀರು ಸುರಿಸಿದ್ದ ರೈತರು:

ಡಿ.ಕೆ. ಶಿವಕುಮಾರ ಸರ್ಕಾರದ ಸಂಪುಟದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿದ ಮೊದಲೇ ವಾರದಲ್ಲಿಯೇ ಧಾರವಾಡ ಜಿಲ್ಲೆಯಲ್ಲಿ ಬರಪರಿಸ್ಥಿತಿ ಅಧ್ಯಯನ ಕೈಗೊಂಡಾಗ ರೈತರು ಮಳೆ ಇಲ್ಲದೆ ಹಾಳಾದ ಬೆಳೆಯನ್ನು ಕೈಯಲ್ಲಿ ಹಿಡಿದು ಕಣ್ಣೀರು ಸುರಿಸಿದ್ದರು. ಆಗ ಸಚಿವರು ನಿಮ್ಮ ನೆರವಿಗೆ ಸರ್ಕಾರವಿದೆ. ಬೆಳೆ ಹಾನಿ ಪರಿಹಾರಕ್ಕೆ ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದ್ದರೂ. ಆದರೆ, ಗುರುವಾರ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಘೋಷಿಸಿದ ತಾಲೂಕು ಪಟ್ಟಿಯಲ್ಲಿ ಧಾರವಾಡ ಹಾಗೂ ಹಾವೇರಿಯ ಜಿಲ್ಲೆಯ ಒಂದೇ ಒಂದು ಹೆಸರು ಇಲ್ಲ. ಗದಗ ತಾಲೂಕಿನ ಗಜೇಂದ್ರಗಡ, ಉತ್ತರಕನ್ನಡದ ಮುಂಡಗೋಡ ಹಾಗೂ ಯಲ್ಲಾಪುರ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಲಾಗಿದೆ. ಮಳೆ ಇಲ್ಲದೆ ಸಾಕಷ್ಟು ನಷ್ಟ ಅನುಭವಿಸಿರುವುದು ಕಣ್ಣುಂದೆ ಇದ್ದರೂ ಸರ್ಕಾರ ನಮ್ಮನ್ನೇಕೆ ಕಡೆಗಣಿಸಿದೆ ಎಂದು ರೈತರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.ನಾವೇನು ಮಲತಾಯಿ ಮಕ್ಕಳೇ:

ಇದೀಗ ರೈತರು ನಾವೇನು ಮಲತಾಯಿ ಮಕ್ಕಳೇ?. ಧಾರವಾಡ, ಹಾವೇರಿ, ಗದಗ ಸೇರಿದಂತೆ ಕಿತ್ತೂರ ಕರ್ನಾಟಕ ಜಿಲ್ಲೆಗಳಲ್ಲಿನ ಬರ ಪರಿಸ್ಥಿತಿ ಸರ್ಕಾರದ ಕಣ್ಣಿಗೆ ಕಾಣಲಿಲ್ಲವೇ? ಬರೀ ದಕ್ಷಿಣ ಕರ್ನಾಟಕದಲ್ಲಷ್ಟೇ ಬರ ಪರಿಸ್ಥಿತಿ ಇದೆಯೇ? ಬರ ಪೀಡಿತ ಘೋಷಣೆಯಲ್ಲೂ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದು ತಾರತಮ್ಯ ಮಾಡುವುದೇ? ಈ ಮಲತಾಯಿ ಧೋರಣೆ ಏಕೆ? ಉಸ್ತುವಾರಿ ಸಚಿವರು ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಸರ್ಕಾರ ನಿಮ್ಮ ಪರವಾಗಿದೆ ಎಂದು ಭರವಸೆ ಮಾತುಗಳನ್ನು ಆಡಿದ್ದಾದರೂ ಏಕೆ? ಎಂಬೆಲ್ಲ ಪ್ರಶ್ನೆಗಳು ರೈತರದ್ದು.ಈಗಲೂ ಕಾಲ ಮಿಂಚಿಲ್ಲ. ಕೂಡಲೇ ಕಿತ್ತೂರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿನ ಪರಿಸ್ಥಿತಿ ಸರಿಯಾಗಿ ಅರ್ಥೈಸಿಕೊಂಡು ಬರಪೀಡಿತ ಎಂದು ಘೋಷಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂಬುದು ಅನ್ನದಾತನ ಆಕ್ರೋಶದ ನುಡಿ.

ಧಾರವಾಡ ಜಿಲ್ಲೆಯ ಪರಿಸ್ಥಿತಿ

ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 381.5 ಮಿಮಿ ವಾಡಿಕೆ ಮಳೆ ಸುರಿಯಬೇಕಿದ್ದರೂ ಆಗಿದ್ದು 232.8 ಮಿಮಿ ಮಳೆ. ಮುಂಗಾರು ಹಂಗಾಮಿನಲ್ಲಿ ಶೇ.39ರಷ್ಟು ಮಳೆ ಕೊರತೆಯಾಗಿದ್ದರೆ, ಆಗಸ್ಟ್‌ನಲ್ಲಿ ಶೇ. 49ರಷ್ಟು ಮಳೆ ಕೊರತೆಯಾಗಿದೆ. 2.82 ಲಕ್ಷ ಹೆಕ್ಟೇರ್‌ ಪ್ರದೇಶ ಬಿತ್ತನೆಯ ಗುರಿ ಇದ್ದರೂ 2.28 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇದರಲ್ಲಿ ಶೇ.60ರಷ್ಟು ಪ್ರದೇಶದಲ್ಲಿ ಬಿತ್ತಿದ ಬೆಳೆಯನ್ನು ರೈತರು ಪುನಃ ಹರಗಿದ್ದಾರೆ ಎಂದು ಮೂಲಗಳು ತಿಳಿಸುತ್ತವೆ.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಜಮೀನಿಗೆ ಭೇಟಿ ನೀಡಿ ಪರಿಹಾರ ಕೊಡಿಸುವ ಭರವಸೆಯ ಮಾತುಗಳನ್ನು ಆಡಿದ್ದರು. ಸಚಿವರ ಮಾತುಗಳಿಂದ ನಮಗೂ ಪರಿಹಾರ ಸಿಗುವ ವಿಶ್ವಾಸ ಇತ್ತು. ಆದರೆ, ಇದೀಗ ಬರ ಪೀಡಿತ ತಾಲೂಕುಗಳ ಘೋಷಣೆಯಲ್ಲಿ ನಮ್ಮ ಜಿಲ್ಲೆಯೇ ಇಲ್ಲ. ಕೂಡಲೇ ಸರ್ಕಾರ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು.

ರಮೇಶ ಸೋಮನಕೊಪ್ಪ, ರೈತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣ ಕ್ಷೇತ್ರಕ್ಕೆ ಶಿರಸಂಗಿ ಲಿಂಗರಾಜರ ಕೊಡುಗೆ ಅಪಾರ: ಡಾ. ನಿಂಗು ಸೊಲಗಿ
ಪು.ಬಡ್ನಿ ಗ್ರಾಮದಲ್ಲಿ ಅನೈತಿಕ ಸಂಬಂಧ: ಯುವಕನ ಕೊಲೆ