ಉತ್ತರ ಕರ್ನಾಟಕದಲ್ಲಿ ಹಿಂಗಾರು ಬಿತ್ತನೆಗೆ ಬರದ ಬರೆ!

KannadaprabhaNewsNetwork |  
Published : Sep 29, 2026, 02:00 AM IST
ಧಾರವಾಡದ ಕೃಷಿ ಮೇಳದ ಬೀಜ ಮೇಳದಲ್ಲಿ ಬರ ಎದುರಿಸುವ ಜೋಳದ ಬೀಜ ಖರೀದಿಸುತ್ತಿರುವ ರೈತರು.  | Kannada Prabha

ಸಾರಾಂಶ

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಬೀಜ ಮೇಳದಲ್ಲಿ ರೈತರ ಪ್ರತಿಕ್ರಿಯೆ ಈ ಬಾರಿ ಗಣನೀಯವಾಗಿ ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,000 ಕ್ವಿಂಟಲ್‌ಗೂ ಅಧಿಕ ಹಿಂಗಾರು ಬೀಜ ಮಾರಾಟವಾಗಿದ್ದರೆ, ಈ ಬಾರಿ ಶೇ.50ಕ್ಕೂ ಕಡಿಮೆ 983 ಕ್ವಿಂಟಲ್‌ ಮಾತ್ರ ಮಾರಾಟವಾಗಿದೆ.

ಬಸವರಾಜ ಹಿರೇಮಠ

ಧಾರವಾಡ:

ದೀರ್ಘಕಾಲ ಮಳೆಯು ಕೈಕೊಟ್ಟ ಪರಿಣಾಮ ಉತ್ತರ ಕರ್ನಾಟಕದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆಗೆ ಬರದ ಬಿಸಿ ತೀವ್ರವಾಗಿಯೇ ತಟ್ಟಿದೆ. ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿರುವ ರೈತರು ಇದೀಗ ಹಿಂಗಾರು ಬೆಳೆಗಳಿಗೆ ಮತ್ತೆ ವೆಚ್ಚ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಬೀಜ ಮೇಳದಲ್ಲಿ ರೈತರ ಪ್ರತಿಕ್ರಿಯೆ ಈ ಬಾರಿ ಗಣನೀಯವಾಗಿ ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,000 ಕ್ವಿಂಟಲ್‌ಗೂ ಅಧಿಕ ಹಿಂಗಾರು ಬೀಜ ಮಾರಾಟವಾಗಿದ್ದರೆ, ಈ ಬಾರಿ ಶೇ.50ಕ್ಕೂ ಕಡಿಮೆ 983 ಕ್ವಿಂಟಲ್‌ ಮಾತ್ರ ಮಾರಾಟವಾಗಿದೆ.

ಕಡಲೆಗೆ ಬಿತ್ತು ಪೆಟ್ಟು:

ಉತ್ತರ ಕರ್ನಾಟಕದ ಪ್ರಮುಖ ಹಿಂಗಾರು ಬೆಳೆಯಾದ ಕಡಲೆಗೆ ಈ ಬಾರಿ ರೈತರ ಒಲವು ತೀವ್ರವಾಗಿ ಕಡಿಮೆಯಾಗಿದೆ. ಉತ್ತರ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 10 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆಯುವ ಕಡಲೆಯು ಮಣ್ಣಿನ ತೇವಾಂಶವನ್ನೇ ಹೆಚ್ಚಾಗಿ ಅವಲಂಬಿಸಿದೆ. ಆದರೆ, ಈ ಬಾರಿ ತೇವಾಂಶದ ಕೊರತೆ ಬಿತ್ತನೆಗೆ ಅಡ್ಡಿಯಾಗಿದೆ. ಕಳೆದ ಐದು ವರ್ಷಗಳಲ್ಲೇ ಕಡಲೆ ಬೀಜಕ್ಕೆ ಈ ಬಾರಿ ಅತ್ಯಂತ ಕಡಿಮೆ ಬೇಡಿಕೆ ಕಂಡುಬಂದಿದ್ದು, ಬೀಜ ಮೇಳದಲ್ಲಿ ಬರೀ 263 ಕ್ವಿಂಟಲ್‌ ಮಾತ್ರ ಮಾರಾಟವಾಗಿದೆ. ಗೋಧಿ, ಕುಸುಬೆ, ರಾಗಿ ಮತ್ತು ಅಲಸಂದೆ ಬೀಜಗಳಿಗೂ ಬೇಡಿಕೆ ಮಂದಗತಿಯಲ್ಲಿದೆ.

ಜೋಳದತ್ತ ರೈತರ ಚಿತ್ತ:

ಮತ್ತೊಂದೆಡೆ, ಬರ ಪರಿಸ್ಥಿತಿಯಲ್ಲಿ ಜೋಳ ಮಾತ್ರ ಕೈ ಹಿಡಿಯಬಹುದು ಎಂದು ಹೆಚ್ಚಿನ ರೈತರು ಜೋಳದ ಬೀಜ ಖರೀದಿಸಿದ್ದಾರೆ. ಅದರಲ್ಲೂ ಮಾಲದಂಡಿ ತಳಿಗೆ ರೈತರ ಒಲವು ಹೆಚ್ಚಾಗಿದೆ. ಬೀಜ ಮೇಳದಲ್ಲಿ ಅತೀ ಹೆಚ್ಚು 422 ಕ್ವಿಂಟಲ್‌ ಜೋಳದ ಬೀಜ ಮಾರಾಟವಾಗಿದೆ. ಕರ್ನಾಟಕ ಬೀಜ ನಿಗಮದ ಅಧಿಕಾರಿ ಗಿರೀಶ ಶೆಟ್ಟಣ್ಣವರ, ಹಿಂಗಾರು ಬೆಳೆ ಆಯ್ಕೆಯಲ್ಲಿ ಈ ಬಾರಿ ಗಮನಾರ್ಹ ಬದಲಾವಣೆಯಾಗಿದೆ. ಕಡಲೆಯಿಂದ ದೂರ ಸರಿದಿರುವ ರೈತರು ಜೋಳದತ್ತ ಮುಖ ಮಾಡುತ್ತಿದ್ದಾರೆ. ಬರದಿಂದ ಇಳುವರಿ ಕಡಿಮೆಯಾದರೂ ಜಾನುವಾರುಗಳ ಮೇವಾಗಿ ಬಳಸಬಹುದು ಎಂಬ ಕಾರಣಕ್ಕೆ ಜೋಳಕ್ಕೆ ಬೇಡಿಕೆ ಹೆಚ್ಚಿದೆ ಎಂದರು.

ಈರುಳ್ಳಿ ಬೀಜಕ್ಕೂ ಬೇಡಿಕೆ ಕುಸಿತ:

ಬರದ ಪರಿಣಾಮ ತರಕಾರಿ ಬೆಳೆಗಳ ಮೇಲೂ ಬೀರಿದೆ. ವಿಶೇಷವಾಗಿ ಈರುಳ್ಳಿ ಬೀಜ ಖರೀದಿಗೆ ರೈತರು ಹಿಂದೇಟು ಹಾಕುತ್ತಿದ್ದಾರೆ. ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಧಿಕಾರಿ ಧನಂಜಯ ದೇಸಾಯಿ ಪ್ರಕಾರ, ಕಳೆದ ಮೂರು ದಿನಗಳಲ್ಲಿ ಕೇವಲ 60 ಕೆಜಿ ತರಕಾರಿ ಬೀಜ ಮಾರಾಟವಾಗಿದ್ದು, ಮಿನಿ ತರಕಾರಿ ಕಿಟ್‌ಗಳಿಗೂ ಬೇಡಿಕೆ ಕಡಿಮೆಯಾಗಿದೆ.

ಹಿಂಗಾರು ಬೆಳೆಗಳಿಗೆ ಜಲಾಶಯಗಳಿಂದ ನೀರು ಬಿಡುಗಡೆ ಮಾಡುವ ಬದಲು ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು ಎಂಬ ಸರ್ಕಾರದ ನಿಲುವೂ ರೈತರ ಆತಂಕ ಹೆಚ್ಚಿಸಿದೆ. ನೀರಿನ ಖಾತರಿ ಇಲ್ಲದಿರುವಾಗ ಬೀಜ ಖರೀದಿ, ಜಮೀನು ಸಿದ್ಧಪಡಿಸುವುದು ಸೇರಿದಂತೆ ಹೆಚ್ಚುವರಿ ವೆಚ್ಚ ಮಾಡಲು ರೈತರು ಹಿಂದೇಟು ಹಾಕುತ್ತಿದ್ದಾರೆ.

ಹೀಗಾಗಿ ಮುಂಗಾರು ಹಂಗಾಮಿನ ನಷ್ಟದ ಬಳಿಕ ರೈತರು ಮತ್ತೊಂದು ಅಪಾಯ ಎದುರಿಸುವ ಬದಲು ಜಮೀನು ಪಾಳು ಬಿಡಬೇಕೇ ಅಥವಾ ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಬೇಕೇ ಎಂಬ ಲೆಕ್ಕಾಚಾರದಲ್ಲೂ ಇದ್ದಾರೆ ಎಂದು ಕೃಷಿ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಮುಂಗಾರು ವೈಫಲ್ಯದಿಂದ ರೈತರು ಈಗ ಹಿಂಗಾರು ಬಿತ್ತನೆಗೂ ಮುನ್ನ ಹಲವು ಬಾರಿ ಯೋಚಿಸುತ್ತಿದ್ದಾರೆ. ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆಯಿಂದ ಜಮೀನುಗಳಲ್ಲಿ ತೇವಾಂಶವೇ ಇಲ್ಲ. ಜತೆಗೆ ಬಿಸಿಲಿನ ಬೇಗೆ ಹೆಚ್ಚುತ್ತಿದೆ. ಬಿತ್ತನೆ ಮಾಡಿದರೂ ಮೊಳಕೆಯೊಡೆದು ಬೆಳೆ ಬೆಳೆಯುವ ಬಗ್ಗೆ ರೈತರಿಗೆ ಆತಂಕ ಎದುರಾಗಿದ್ದು, ಬೀಜ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ಡಾ. ಸಿ.ಜೆ. ಕುಮಾರ, ಬೀಜ ಘಟಕದ ಮುಖ್ಯ ತಾಂತ್ರಿಕ ವಿಜ್ಞಾನಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಖಾನೆ ವಿಸ್ತರಣೆ, ಮಾಲಿನ್ಯ ವಿರೋಧಿಸಿ 48 ಗಂಟೆ ಕೊಪ್ಪಳ ಬಂದ್ ಕರೆ
ಸುರಕ್ಷಿತ ಗರ್ಭಪಾತ, ಶ್ರವಣದೋಷ ತಡೆಗೆ ಅರಿವು ಅಗತ್ಯ: ಡಾ. ರಾಜೇಶ್