ಬರ: ನಿಖರವಾದ ವರದಿ ನೀಡಲು ಸಚಿವ ನಾಗೇಂದ್ರ ಸೂಚನೆ

KannadaprabhaNewsNetwork |  
Published : Aug 07, 2026, 02:15 AM IST
ಬಳ್ಳಾರಿ ತಾಲೂಕಿನ ಹಲಕುಂದಿ, ಮಿಂಚೇರಿ ಗ್ರಾಮ ವ್ಯಾಪ್ತಿಯ ಹೊಲಗಳಿಗೆ ಭೇಟಿ ನೀಡಿದ ಸಚಿವ ಬಿ.ನಾಗೇಂದ್ರ ಅವರು ಬೆಳೆಹಾನಿ ಪರೀಕ್ಷಿಸಿದರು. ಡಿಸಿ ನಾಗೇಂದ್ರ ಪ್ರಸಾದ್, ಬಗರ್ ಹುಕುಂ ಸಮಿತಿ ಅಧ್ಯಕ್ಷ ಹೆಚ್.ತಿಮ್ಮನಗೌಡ, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಮತ್ತಿತರರಿದ್ದರು.  | Kannada Prabha

ಸಾರಾಂಶ

ಬಳ್ಳಾರಿ ತಾಲೂಕಿನ ಹಲಕುಂದಿ, ಮಿಂಚೇರಿ ಗ್ರಾಮದಲ್ಲಿ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಬೆಳೆಹಾನಿ ಪರಿವೀಕ್ಷಣೆ ನಡೆಸಿ, ಜಿಲ್ಲೆಯಾದ್ಯಂತ ಮಳೆ ಅಭಾವ ಮತ್ತು ಬೆಳೆ ಹಾನಿಯ ಕುರಿತು ತಕ್ಷಣವೇ ಸಮಗ್ರ ಜಂಟಿ ಸಮೀಕ್ಷೆ ನಡೆಸಿ ಶೀಘ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಳ್ಳಾರಿ: ಬರ ಘೋಷಣೆ ಮಾಡಲು ಮಳೆಯ ಪ್ರಮಾಣದ ಕುರಿತು ಕೆಲವು ನಿರ್ದಿಷ್ಟ ಮಾನದಂಡಗಳಿವೆ. ಮುಂದಿನ 10 ದಿನಗಳ ಪರಿಸ್ಥಿತಿ ಅವಲೋಕಿಸಿ ಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಬಳ್ಳಾರಿ ಜಿಲ್ಲೆ ಬರ ಪರಿಸ್ಥಿತಿ ವೀಕ್ಷಣೆಗೆ ನಿಯೋಜಿಸಲಾಗಿರುವ ಸಚಿವ ಬಿ. ನಾಗೇಂದ್ರ ಹೇಳಿದರು. ಬಳ್ಳಾರಿ ತಾಲೂಕಿನ ಹಲಕುಂದಿ, ಮಿಂಚೇರಿ ಗ್ರಾಮದಲ್ಲಿ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಬೆಳೆಹಾನಿ ಪರಿವೀಕ್ಷಣೆ ನಡೆಸಿ, ಜಿಲ್ಲೆಯಾದ್ಯಂತ ಮಳೆ ಅಭಾವ ಮತ್ತು ಬೆಳೆ ಹಾನಿಯ ಕುರಿತು ತಕ್ಷಣವೇ ಸಮಗ್ರ ಜಂಟಿ ಸಮೀಕ್ಷೆ ನಡೆಸಿ ಶೀಘ್ರ ವರದಿ ಸಲ್ಲಿಸುವಂತೆ ಕೃಷಿ ಮತ್ತು ಕಂದಾಯ ಅಧಿಕಾರಿಗಳಿಗೆ ಇದೇ ವೇಳೆ ಸೂಚಿಸಿದ ಅವರು, ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆಯಾಗದೆ ಕೃಷಿ ವಲಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಜಿಲ್ಲೆಯಲ್ಲಿ ರೈತರು ಬಿತ್ತನೆ ಕಾರ್ಯ ಮಾಡಿದ್ದರೂ, ಕಳೆದ ಎರಡು ತಿಂಗಳಿಂದ ಹನಿ ಮಳೆಯೂ ಬಾರದೆ ಬೆಳೆಗಳು ಜಮೀನಿನಲ್ಲೇ ಒಣಗಿ ನಶಿಸುತ್ತಿವೆ. ಕಂದಾಯ ಮತ್ತು ಕೃಷಿ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ಪ್ರತಿಯೊಂದು ತಾಲೂಕಿನ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ನೈಜ ಪರಿಸ್ಥಿತಿಯ ಆಧಾರದ ಮೇಲೆ ನಿಖರ ವರದಿ ಸಿದ್ಧಪಡಿಸಬೇಕು ಎಂದು ನಿರ್ದೇಶನ ನೀಡಿದರು.ತೊಗರಿ, ಹತ್ತಿ, ಮೆಕ್ಕೆಜೋಳ ಹಾಗೂ ಸಜ್ಜೆ ಸೇರಿದಂತೆ ಪ್ರಮುಖ ಬೆಳೆಗಳು ನೀರಿನ ಅಭಾವದಿಂದ ಬಾಡಿಹೋಗುತ್ತಿದ್ದು, ರೈತರಿಗೆ ಭಾರಿ ನಷ್ಟ ಉಂಟಾಗುವ ಭೀತಿ ಎದುರಾಗಿದೆ. ಅಧಿಕಾರಿಗಳು ನೀಡುವ ಸಮೀಕ್ಷಾ ವರದಿಯ ಆಧಾರದ ಮೇಲೆ ಬರಪೀಡಿತ ಪ್ರದೇಶಗಳ ಘೋಷಣೆ ಹಾಗೂ ರೈತರಿಗೆ ಪರಿಹಾರ ಒದಗಿಸುವ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.ಶನಿವಾರದೊಳಗೆ ವರದಿ ಸಲ್ಲಿಕೆಗೆ ಸೂಚನೆ: ಸರ್ಕಾರದ ನಿಗದಿತ ಮಾನದಂಡಗಳ ಆಧಾರದ ಮೇಲೆ ಕಂದಾಯ ಸಚಿವರೊಂದಿಗೆ ಚರ್ಚಿಸಿ, ಮುಂದಿನ ಸೂಕ್ತ ಕ್ರಮ ಹಾಗೂ ಪರಿಹಾರ ಘೋಷಣೆ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಹಾಗಾಗಿ ಜಿಲ್ಲೆಯ ತಾಲೂಕುವಾರು ಬೆಳೆ ಹಾನಿ ಹಾಗೂ ಕೃಷಿ ಸ್ಥಿತಿಗತಿಯ ಸಮಗ್ರ ವರದಿಯನ್ನು ಶನಿವಾರದೊಳಗೆ ಸಿದ್ಧಪಡಿಸಿ ಸಲ್ಲಿಸುವಂತೆ ಸಚಿವ ಬಿ. ನಾಗೇಂದ್ರ ಅವರು ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಬಳ್ಳಾರಿ ಜಿಲ್ಲೆಯ ಕೃಷಿ ಹಾಗೂ ಕುಡಿಯುವ ನೀರಿನ ಪ್ರಮುಖ ಆಸರೆಯಾಗಿರುವ ತುಂಗಭದ್ರಾ ಜಲಾಶಯದಲ್ಲಿ 65 ರಿಂದ 70 ಟಿಎಂಸಿ ನೀರು ತಲುಪುವ ನಿರೀಕ್ಷೆಯಿದೆ. ಜಲಾಶಯದಲ್ಲಿ ಕನಿಷ್ಠ 80 ಟಿಎಂಸಿ ನೀರು ಶೇಖರಣೆಯಾದ ನಂತರವೇ ಸಲಹಾ ಸಮಿತಿಯ ಸಭೆ ನಡೆಸಿ, ಕುಡಿಯುವ ನೀರು ಹಾಗೂ ಕೃಷಿ ಕಾಲುವೆಗಳಿಗೆ ನೀರು ಹರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್, ಕೃಷಿ ಜಂಟಿ ನಿರ್ದೇಶಕ ಕೆ. ಸೋಮಸುಂದರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿನ ಹೃದಯಾಘಾತ ತಿಳಿಯಲು ಅಧ್ಯಯನ!
ರೈತರ ನೆರವಿಗೆ ಬರಲು ರಾಜ್ಯ ಸರ್ಕಾರ ಬದ್ಧ