ಈಗಾಗಲೇ ರಾಜ್ಯದ ಬರ ಪರಿಸ್ಥಿತಿಯ ಕುರಿತು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ತಾವು ದೆಹಲಿಗೆ ತೆರಳಿ, ಕೇಂದ್ರದ ಕೃಷಿ ಸಚಿವರ ಜತೆ ಸಭೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಇಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಈ ತಿಂಗಳ ಅಂತ್ಯದಲ್ಲಿ ಕೇಂದ್ರ ಸರ್ಕಾರವು ಬರ ಪರಿಹಾರದ ಹಣ ಬಿಡುಗಡೆ ಮಾಡಲಿದೆ ಎಂಬ ನಿರೀಕ್ಷೆ ಇದೆ ಎಂದು ಕೃಷಿ ಸಚಿವ ಎನ್. ಚಲುವನಾರಾಯಣಸ್ವಾಮಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಸಂಡೂರು
ಬೆಳೆಹಾನಿ ಪರಿಹಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಕೃಷಿ ಸಚಿವರೊಂದಿಗೆ ಈಗಾಗಲೇ ಸಭೆ ನಡೆಸಿದ್ದು, ರೈತರಿಗೆ ಶೀಘ್ರದಲ್ಲಿ ಬರ ಪರಿಹಾರ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಮಂಗಳವಾರ ಜಿಲ್ಲೆಯ ಸಂಡೂರು ತಾಲೂಕಿನ ಕೋಡಾಲು ಹಾಗೂ ರಾಜಾಪುರ ಗ್ರಾಮಗಳ ವ್ಯಾಪ್ತಿಯ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಹಾನಿ ಪರಿಶೀಲಿಸಿ ಮಾತನಾಡಿ, ಫ್ರುಟ್ಸ್ ಐಡಿಯಲ್ಲಿ ರೈತರು ತಮ್ಮ ಹೆಸರಿನಲ್ಲಿರುವ ಎಲ್ಲ ಜಮೀನನ್ನು ನೋಂದಣಿ ಮಾಡಿಸಬೇಕು. ಇದರಿಂದ ಬರ ಪರಿಹಾರಕ್ಕೆ ಅನುಕೂಲವಾಗಲಿದೆ ಎಂದು ರೈತರಿಗೆ ಮನವಿ ಮಾಡಿದರು.
ಈಗಾಗಲೇ ರಾಜ್ಯದ ಬರ ಪರಿಸ್ಥಿತಿಯ ಕುರಿತು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ತಾವು ದೆಹಲಿಗೆ ತೆರಳಿ, ಕೇಂದ್ರದ ಕೃಷಿ ಸಚಿವರ ಜತೆ ಸಭೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಇಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಈ ತಿಂಗಳ ಅಂತ್ಯದಲ್ಲಿ ಕೇಂದ್ರ ಸರ್ಕಾರವು ಬರ ಪರಿಹಾರದ ಹಣ ಬಿಡುಗಡೆ ಮಾಡಲಿದೆ ಎಂಬ ನಿರೀಕ್ಷೆ ಇದೆ ಎಂದು ಕೃಷಿ ಸಚಿವ ಎನ್. ಚಲುವನಾರಾಯಣಸ್ವಾಮಿ ತಿಳಿಸಿದರು.
ಕೇಂದ್ರದಿಂದ ಬರ ಪರಿಹಾರ ಬಂದ ತಕ್ಷಣ, ಸಣ್ಣ ಮತ್ತು ಅತಿ ಸಣ್ಣ ರೈತರ ಭೂಮಿಯನ್ನು ಇಂತಿಷ್ಟು ಹಾನಿ ಎಂದು ಪರಿಗಣಿಸಿ, ಫ್ರುಟ್ಸ್ ತಂತ್ರಾಂಶದ ಮೂಲಕ ನೇರವಾಗಿ ರೈತರಿಗೆ ಬರ ಪರಿಹಾರವನ್ನು ನೀಡಲಾಗುತ್ತದೆ ಎಂದರು.
ಶಾಸಕ ಈ. ತುಕಾರಾಂ ಮಾತನಾಡಿ, ಈ ಭಾಗದಲ್ಲಿ ಅತಿ ಹೆಚ್ಚು ಬರ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ, ಕ್ಲಿನಿಕ್ ಆನ್ ವೀಲ್ ಮುಖಾಂತರ ಆರೋಗ್ಯ ಸೇವೆ ಸೇರಿದಂತೆ ಇತರೆ ಸೇವೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ವೇಳೆ ಸಚಿವರು ತಾಲೂಕಿನ ಕೋಡಾಲು ಗ್ರಾಮ ವ್ಯಾಪ್ತಿಯ ರೈತ ಮಾರೆಪ್ಪನ ನವಣೆ, ಹತ್ತಿ ಬೆಳೆ ವೀಕ್ಷಣೆ ಮಾಡಿ, ಬೆಳೆಹಾನಿ ಕುರಿತು ಅಧಿಕಾರಿಗಳು ಹಾಗೂ ರೈತರಿಂದ ಮಾಹಿತಿ ಪಡೆದುಕೊಂಡರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಕೃಷಿ ಜಂಟಿ ನಿರ್ದೇಶಕ ಕೆ. ಮಲ್ಲಿಕಾರ್ಜುನ, ಉಪನಿರ್ದೇಶಕ ಕೆಂಗೆಗೌಡ, ತೋಟಗಾರಿಕೆ ಉಪನಿರ್ದೇಶಕ ಸಂತೋಷ್ ಸಪ್ಪಂಡಿ, ತಹಸೀಲ್ದಾರ್ ಜಿ. ಅನಿಲ್ ಕುಮಾರ್, ತಾಪಂ ಇಒ ಎಚ್. ಷಡಾಕ್ಷರಯ್ಯ, ತಾಲೂಕು ಕೃಷಿ ಸಹಾಯಕ ನಿರ್ದೇಶಕ ಮಂಜುನಾಥರೆಡ್ಡಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಹನುಮಂತಪ್ಪ ನಾಯ್ಕ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.