ಬರ ಪರಿಹಾರ ನಮ್ಮ ಹಕ್ಕು, ನ್ಯಾಯಸಮ್ಮತವಾಗಿ ನೀಡಿ

KannadaprabhaNewsNetwork |  
Published : Nov 30, 2023, 01:15 AM IST
ಕೃಷಿ ಸಚಿವ ಎನ್. ಚೆಲುವನಾರಾಯಣ ಸ್ವಾಮಿ ಅವರು ಬಳ್ಳಾರಿ ತಾಲೂಕಿನ ವಿವಿಧೆಡೆ ಬರ ಅಧ್ಯಯನ ಮಾಡಿದರು. ಸಚಿವ ಬಿ. ನಾಗೇಂದ್ರ ಇತರರು ಇದ್ದರು. | Kannada Prabha

ಸಾರಾಂಶ

ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಕೃಷಿ ಸಚಿವ ಎನ್. ಚೆಲುವನಾರಾಯಣ ಸ್ವಾಮಿ ಅವರು ಬಳ್ಳಾರಿ ತಾಲೂಕಿನ ಹಲಕುಂದಿ ಮತ್ತು ಬೆಳಗಲ್ಲು ಗ್ರಾಮಗಳ ವ್ಯಾಪ್ತಿಯ ಬರದಿಂದ ಹಾನಿಗೊಳಗಾದ ತೊಗರಿ, ಸಜ್ಜೆ, ಸೂರ್ಯಕಾಂತಿ ಬೆಳೆಗಳ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿಯ ಕುರಿತು ರೈತರು ಹಾಗೂ ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕನ್ನಡಪ್ರಭ ವಾರ್ತೆ ಬಳ್ಳಾರಿಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ₹4 ಲಕ್ಷ ಕೋಟಿ ತೆರಿಗೆ ಹಣ ಪಾವತಿಯಾಗುತ್ತಿದೆ. ರಾಜ್ಯದ ಪಾಲು ಕೇವಲ ₹30 ಸಾವಿರ ಕೋಟಿ ಬರುತ್ತಿದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ಬರ ಪರಿಹಾರ ನಮ್ಮ ಹಕ್ಕು. ನ್ಯಾಯಸಮ್ಮತವಾಗಿ ನೀಡಬೇಕಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಕೇಂದ್ರ ಸರ್ಕಾರ ಬರ ಪರಿಹಾರ ಅನುದಾನ ಶೀಘ್ರದಲ್ಲೇ ಒದಗಿಸುವ ನಿರೀಕ್ಷೆ ಇದೆ. ಕೇಂದ್ರ ಅನುದಾನ ನೀಡದಿದ್ದರೂ ರಾಜ್ಯ ಸರ್ಕಾರ ಕುಡಿಯುವ ನೀರು, ಮೇವಿನ ನಿರ್ವಹಣೆಗೆ ಈಗಾಗಲೆ ಹಣ ಬಿಡುಗಡೆ ಮಾಡಿದೆ ಎಂದರು.

ಮಧ್ಯಂತರ ಬೆಳೆ ಹಾನಿ ಪರಿಹಾರಕ್ಕೆ ಈಗಾಗಲೇ ₹343 ಕೊಟಿ ಬಿಡುಗಡೆಯಾಗಿದೆ. ಅದೇ ರೀತಿ ಶೀಘ್ರ ಬರ ಪರಿಹಾರ ಹಣ ಕೂಡ ರೈತರ ಖಾತೆಗೆ ನೇರವಾಗಿ ಸೇರಲಿದೆ. ಅದಕ್ಕೆ ಪೂರಕವಾಗಿ ಶೇ. 100ರಷ್ಟು ರೈತರ ವಿವರ ಫ್ರುಟ್ಸ್ ಐಡಿಗೆ ದಾಖಲಿಸುವ, ಕೆವೈಸಿ ನೋಂದಾಯಿಸುವ ಕಾರ್ಯ ಅಭಿಯಾನದ ಸ್ವರೂಪದಲ್ಲಿ ಮಾಡಲಾಗುತ್ತಿದೆ ಎಂದರು.ರಾಜ್ಯದಲ್ಲಿ ಕೃಷಿ ಹಾಗೂ ಜಲಾನಯನ ಇಲಾಖೆ ಮೂಲಕ 1.43 ಕೊಟಿ ರೈತರಿಗೆ ಒಟ್ಟಾರೆ ₹5388 ಕೋಟಿ ಸೌಲಭ್ಯ ತಲುಪಿದಂತಾಗುತ್ತದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಯೋಜನೆಗಳ ಮೂಲ ₹75 ಸಾವಿರ ಕೋಟಿ ಆರ್ಥಿಕ ನೆರವು ರಾಜ್ಯದ ಜನಸಾಮಾನ್ಯರಿಗೆ ನೇರವಾಗಿ ತಲುಪುತ್ತಿದೆ. ಇದು ಸಾಮಾಜಿಕ ಸಬಲೀಕರಣ ಸರ್ಕಾರದ ಮೂಲ ಆಶಯ ಎಂದರು.

ವಿಮೆ ನೋಂದಣಿ ಹೆಚ್ಚಿಸಲು ಸೂಚನೆ:ಜಿಲ್ಲೆಯಲ್ಲಿ ಬೆಳೆ ವಿಮೆ ನೋಂದಣಿ ತುಂಬಾ ಕಡಿಮೆ ಇದ್ದು, ಇನ್ನು ಮುಂದೆ ಬೆಳೆ ವಿಮೆ ಅನುಕೂಲಗಳ ಬಗ್ಗೆ ಪ್ರತಿ ಗ್ರಾಮದಲ್ಲಿ ಜಾಗೃತಿ ಮೂಡಿಸಿ ನೋಂದಣಿ ಹೆಚ್ಚಿಸಿ ಎಂದರು.

ಬೆಳೆ ವಿಮೆ ಸೌಲಭ್ಯ ಕುರಿತು ಜಿಲ್ಲೆಯ ಎಲ್ಲ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರಪತ್ರಗಳ ಮೂಲಕ ಸಾಕಷ್ಟು ಪ್ರಚಾರ ನೀಡಬೇಕು ಹಾಗೂ ರೈತರು ಬೆಳೆವಿಮೆ ನೋಂದಣಿಗೆ ಮನವೊಲಿಸಬೇಕು. ಇದರಿಂದ, ಬೆಳೆಹಾನಿಗೊಳಗಾದಗ ಸರ್ಕಾರದಿಂದ ನೆರವು ಸಿಗಲಿದೆ ಎಂದರು.ರಾಜ್ಯದಲ್ಲಿ ಈ ಬಾರಿ ₹200 ಕೋಟಿ ವೆಚ್ಚದಲ್ಲಿ 32000 ಕೃಷಿಹೊಂಡ ನಿರ್ಮಾಣ ಮಾಡಲಾಗುವುದು. ಟೈಲ್ಯಾಂಡ್‍ಗಳಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಆದ್ಯತೆ ನೀಡಿ. ಅಲ್ಲದೆ ಇಂತಹ ಪ್ರದೇಶಗಳ ರೈತರಿಗೂ ಬೆಳೆ ಪರಿಹಾರ ಒದಗಿಸಲು ಇರುವ ತೊಡಕು ಬಗೆಹರಿಸಿ ಎಂದರು.

ಕೃಷಿ ಜಂಟಿ ನಿರ್ದೇಶಕ ಕೆ. ಮಲ್ಲಿಕಾರ್ಜುನ ಮಾತನಾಡಿ, ಜಿಲ್ಲೆಯಲ್ಲಿ 382760 ರೈತರ ಪ್ಲಾಟ್ಸ್‌ಗಳಿದ್ದು, ಇಲ್ಲಿಯವರೆಗೆ 249594 ಪ್ಲಾಟ್‍ಗಳನ್ನು ಫ್ರುಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಲಾಗಿದ್ದು, ಶೇ. 65.21 ಪ್ರಗತಿ ಸಾಧಿಸಲಾಗಿದೆ ಹಾಗೂ 133116 ಫ್ರುಟ್ಸ್ ಪ್ಲಾಟ್‍ಗಳ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ, ಶಾಸಕರಾದ ಜೆ.ಎನ್. ಗಣೇಶ್, ಬಿ.ಎಂ. ನಾಗರಾಜ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ, ತಹಸೀಲ್ದಾರ್‌ ಗುರುರಾಜ, ಕೃಷಿ ಉಪನಿರ್ದೇಶಕ ಕೆಂಗೇಗೌಡ, ಸಹಾಯಕ ಕೃಷಿ ನಿರ್ದೇಶಕ ದಯಾನಂದ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ರೈತರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಬರ ಪರಿಸ್ಥಿತಿ ವೀಕ್ಷಣೆ:

ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಕೃಷಿ ಸಚಿವ ಎನ್. ಚೆಲುವನಾರಾಯಣ ಸ್ವಾಮಿ ಅವರು ಬಳ್ಳಾರಿ ತಾಲೂಕಿನ ಹಲಕುಂದಿ ಮತ್ತು ಬೆಳಗಲ್ಲು ಗ್ರಾಮಗಳ ವ್ಯಾಪ್ತಿಯ ಬರದಿಂದ ಹಾನಿಗೊಳಗಾದ ತೊಗರಿ, ಸಜ್ಜೆ, ಸೂರ್ಯಕಾಂತಿ ಬೆಳೆಗಳ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿಯ ಕುರಿತು ರೈತರು ಹಾಗೂ ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಹಲಕುಂದಿಯ ಮರೀಗೌಡ, ಮಲ್ಲಿಕಾರ್ಜುನ ಹಾಗೂ ಶಿವಪ್ಪ ಎಂಬ ರೈತರ ಸೂರ್ಯಕಾಂತಿ, ತೊಗರಿ ಬೆಳೆ ಜಮೀನುಗಳಿಗೆ ಭೇಟಿ ನೀಡಿ, ಹಾನಿಯಾದ ಬೆಳೆಯನ್ನು ಪರಿಶೀಲಿಸಿದ ಸಚಿವರು, ಬೆಳೆವಿಮೆ ಮಾಡಿಸಿಕೊಂಡಿರುವಿರಾ ಎಂದು ವಿಚಾರಿಸಿದರು.ಬೆಳೆವಿಮೆ ಮಾಡಿಸಿಕೊಂಡರೆ ಬೆಳೆ ಹಾನಿಯಾದಾಗ ಹಾಗೂ ಬರ ನಷ್ಟ ಹೊಂದಿದಾಗ ಸರ್ಕಾರದಿಂದ ನೆರವು ಸಿಗಲಿದೆ. ಆದ್ದರಿಂದ ಪ್ರತಿಯೊಬ್ಬ ರೈತನು ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳೇ ಲವ್‌ ವಿಷಯ ಗೊತ್ತಾಗಿದ್ದಕ್ಕೆ ಪ್ರಿಯಕರನಿಗೆ ಪೆಟ್ರೋಲ್‌, ಸೀಮೆ ಎಣ್ಣೆ ಹಾಕಿ ಸುಟ್ಟು ಕೊಂದಳು!
ಬೆಂಗಳೂರು ನಗರದಲ್ಲಿ ಹೀಟ್ ಸ್ಟ್ರೋಕ್‌ : ಅಂಗಾಂಗ ವೈಫಲ್ಯ ಭೀತಿ! ಮುನ್ನೆಚ್ಚರಿಕೆ ಮತ್ತು ಪರಿಹಾರಗಳು