ಮಣ್ಣೆತ್ತಿನ ಅಮಾವಾಸ್ಯೆಗೂ ತಟ್ಟಿದ ಬರದ ಬಿಸಿ

KannadaprabhaNewsNetwork |  
Published : Jul 14, 2026, 02:15 AM IST
ಪೋಟೊ13.6: ಕೊಪ್ಪಳ ನಗರದಲ್ಲಿ ಮಣ್ಣೆತ್ತಿನ ವ್ಯಾಪಾರ ಮಾಡುತ್ತಿರುವ ಕುಂಬಾರರು.  | Kannada Prabha

ಸಾರಾಂಶ

ಭೀಕರ ಬರ ಹಾಗೂ ಮಳೆ ಕೊರತೆಯ ಪರಿಣಾಮ ರೈತರ ಬದುಕಿನ ಜತೆಗೆ ಸಂಪ್ರದಾಯಗಳ ಮೇಲೆಯೂ ಬಿದ್ದಿದ್ದು, ಆಷಾಢ ಮಾಸದ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆಯೂ ಈ ಬಾರಿ ಮಂಕಾಗಿದೆ.

ಕೊಪ್ಪಳ:‌ ಭೀಕರ ಬರ ಹಾಗೂ ಮಳೆ ಕೊರತೆಯ ಪರಿಣಾಮ ರೈತರ ಬದುಕಿನ ಜತೆಗೆ ಸಂಪ್ರದಾಯಗಳ ಮೇಲೆಯೂ ಬಿದ್ದಿದ್ದು, ಆಷಾಢ ಮಾಸದ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆಯೂ ಈ ಬಾರಿ ಮಂಕಾಗಿದೆ.

ರೈತನ ನಿತ್ಯ ಸಂಗಾತಿಯಾಗಿರುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವ ಸಂಕೇತವಾಗಿ ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ಪೂಜಿಸುವ ಶತಮಾನಗಳ ಸಂಪ್ರದಾಯ ಈ ಬಾರಿ ಬೇಡಿಕೆ ಕೊರತೆಯಿಂದ ಕಳೆಗುಂದಿದೆ.

ಪ್ರತಿ ವರ್ಷ ಆಷಾಢ ಮಾಸದ ಅಮಾವಾಸ್ಯೆಯಂದು ಮನೆ-ಮನೆಗಳಲ್ಲಿ ಮಣ್ಣೆತ್ತುಗಳನ್ನು ಪೂಜಿಸುವ ಸಂಪ್ರದಾಯವಿದೆ. ಬಿತ್ತನೆ ಕಾರ್ಯದಲ್ಲಿ ರೈತನಿಗೆ ಹೆಗಲು ನೀಡುವ ಎತ್ತುಗಳ ಪ್ರತಿರೂಪವಾಗಿ ಕುಂಬಾರರು ಮಣ್ಣಿನಿಂದ ಎತ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ರೈತರು ಅವುಗಳನ್ನು ಖರೀದಿಸಿ ವಿಶೇಷ ಪೂಜೆ ಸಲ್ಲಿಸುವುದು ಗ್ರಾಮೀಣ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿದೆ.

ಆದರೆ ಈ ಬಾರಿ ಸಮರ್ಪಕ ಮಳೆಯಾಗದ ಕಾರಣ ಬಹುತೇಕ ರೈತರು ಬಿತ್ತನೆ ಕಾರ್ಯವನ್ನೇ ಆರಂಭಿಸಿಲ್ಲ. ಕೃಷಿ ಚಟುವಟಿಕೆ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಮಣ್ಣೆತ್ತುಗಳ ಖರೀದಿಗೂ ಆಸಕ್ತಿ ತೋರದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಣ್ಣೆತ್ತು ತಯಾರಿಸಿ ಮಾರಾಟಕ್ಕೆ ತಂದಿರುವ ಕುಂಬಾರ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ.

ಪ್ರತಿ ವರ್ಷ ಅಮಾವಾಸ್ಯೆಗೆ ಮುನ್ನವೇ ಹೆಚ್ಚಿನ ಮಣ್ಣೆತ್ತುಗಳು ಮಾರಾಟವಾಗುತ್ತಿದ್ದವು. ಆದರೆ ಈ ಬಾರಿ ಗ್ರಾಹಕರೇ ಬರುತ್ತಿಲ್ಲ. ಮಳೆ ಇಲ್ಲದ ಕಾರಣ ರೈತರಲ್ಲೂ ಹಬ್ಬದ ಸಂಭ್ರಮ ಕಾಣುತ್ತಿಲ್ಲ. ತಯಾರಿಸಿದ ಮಣ್ಣೆತ್ತುಗಳು ಮಾರಾಟವಾಗದೆ ಉಳಿದಿವೆ ಎಂದು ಕುಂಬಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮಳೆ ಇಲ್ಲದ ಕಾರಣ ಮಣ್ಣೆತ್ತು ಖರೀದಿಸುವವರೇ ಇಲ್ಲ. ವರ್ಷಕ್ಕೊಮ್ಮೆ ಬರುವ ಈ ವ್ಯಾಪಾರದ ಮೇಲೆಯೇ ನಮ್ಮ ಬದುಕು ಅವಲಂಬಿತವಾಗಿದೆ. ಈ ಬಾರಿ ಸಂಪೂರ್ಣ ನಿರಾಸೆಯಾಗಿದೆ ಎಂದು ಕೊಪ್ಪಳದ ಮಣ್ಣೆತ್ತು ತಯಾರಕ ನಿಂಗಪ್ಪ ಕುಂಬಾರ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಐಆರ್ ಪ್ರಕ್ರಿಯೆಯಲ್ಲಿ ಬಿಎಲ್ಎಗಳು ಎಚ್ಚರಿಕೆಯಿಂದ ಕೆಲಸ ಮಾಡಿ: ಸಿ.ಸಿ. ಪಾಟೀಲ
ಜುಲೈ 16ರಂದು ವೀರಭದ್ರಯ್ಯ ಮಹಾಸ್ವಾಮಿಗಳ ಪುಣ್ಯಸ್ಮರಣೆ