ಮಾದಕ ವಸ್ತು ಸೇವನೆ ಜೀವನ ಸರ್ವನಾಶಕ್ಕೆ ಕಾರಣ

KannadaprabhaNewsNetwork | Published : Dec 16, 2024 12:48 AM

ಸಾರಾಂಶ

ಹಿರಿಯೂರು: ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಜೊತೆಗೆ ಜೀವಹಾನಿಯಾಗುವ ಅಪಾಯವಿರುತ್ತದೆ. ವಿದ್ಯಾರ್ಥಿಗಳು ಓದುವ ಕಡೆ ಆಸಕ್ತಿ ವಹಿಸಿ ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನ ಕೊಡಬೇಕು ಎಂದು ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ಮಹೇಶ್ ಗೌಡ ಹೇಳಿದರು.

ಹಿರಿಯೂರು: ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಜೊತೆಗೆ ಜೀವಹಾನಿಯಾಗುವ ಅಪಾಯವಿರುತ್ತದೆ. ವಿದ್ಯಾರ್ಥಿಗಳು ಓದುವ ಕಡೆ ಆಸಕ್ತಿ ವಹಿಸಿ ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನ ಕೊಡಬೇಕು ಎಂದು ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ಮಹೇಶ್ ಗೌಡ ಹೇಳಿದರು.

ತಾಲೂಕಿನ ಬಬ್ಬೂರು ಫಾರಂ ಬಳಿಯಿರುವ ತೋಟಗಾರಿಕೆ ಮಹಾವಿದ್ಯಾಲಯ ಆವರಣದಲ್ಲಿ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಹಾಗೂ ಮಾದಕ ದ್ರವ್ಯ ನಿಷೇಧ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾದಕ ವಸ್ತುಗಳ ವ್ಯಸನ‌ ಮನುಷ್ಯನ ಕ್ರಿಯಾಶೀಲ ಆಲೋಚನಾ ಕ್ರಮವನ್ನೆ ಸಂಕುಚಿತಗೊಳಿಸಿ ಅವನ ಸರ್ವತೋಮುಖ ಬೆಳವಣಿಗೆಯನ್ನು ಕುಗ್ಗಿಸುತ್ತದೆ. ಮಾದಕ ವಸ್ತುಗಳ ಸಹವಾಸ ಮಾಡುವುದರಿಂದ ಕಿಡ್ನಿ ವೈಫಲ್ಯ, ಕ್ಯಾನ್ಸರ್, ದವಡೆ ಕ್ಯಾನ್ಸರ್ ಸೇರಿದಂತೆ ಇನ್ನಿತರ ಮಾರಕ ಕಾಯಿಲೆಗಳು ಅಂಟಿಕೊಳ್ಳುವುದಲ್ಲದೆ ಮನುಷ್ಯನ ಆಯುಷ್ಯವನ್ನೂ ಸಹ ಕಡಿಮೆ ಮಾಡುತ್ತವೆ. ಇಂತಹ ಅಪಾಯದ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿಯೇ ಮಾದಕ ವಸ್ತುಗಳ ವಿರೋಧಿ ದಿನ ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಬೇಕು. ಕಾರು ಚಾಲನೆ ಸಮಯದಲ್ಲಿ ಸೀಟ್ ಬೆಲ್ಟ್ ಧರಿಸಿದರೆ ಅಪಘಾತದಿಂದ ಪಾರಾಗಬಹುದು ಎಂದರು

ನೇರ್ಲಗಿ ಫೌಂಡೇಶನ್ ಸಂಸ್ಥಾಪಕಿ ಮಮತಾ ನೇರ್ಲಗಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯನ ಜೀವನ ಮತ್ತು ಜೀವದ ಮೇಲೆ ಗಂಭೀರ ಪರಿಣಾಮಗಳಾಗುತ್ತವೆ. ಮಾದಕ ವಸ್ತುಗಳ ಚಟಕ್ಕೆ ಬಿದ್ದು ತಮ್ಮ ಅಮೂಲ್ಯ ಯೌವ್ವನವನ್ನು ಯಾರೂ ಹಾಳು ಮಾಡಿಕೊಳ್ಳಬಾರದು ಎಂದರು.

ಈ ಸಂದರ್ಭದಲ್ಲಿ ತೋಟಗಾರಿಕೆ ಕಾಲೇಜಿನ ಡೀನ್ ಡಾ.ಸುರೇಶ್ ಏಕಬೋಟೆ, ಸಹಾಯಕ ಪ್ರಾಧ್ಯಾಪಕ ಡಾ.ಶ್ರೀಧರ್, ಡಾ.ಕೆ.ಎಲ್.ವಾಸುದೇವ, ಟಿ.ವಿಶ್ವನಾಥ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this article