ಕನ್ನಡಪ್ರಭ ವಾರ್ತೆ ತಾಳಿಕೋಟೆ
ಪಟ್ಟಣದ ಶ್ರೀ ಖಾಸ್ಗತೇಶ್ವರ ಪಪೂ ಮಹಾ ವಿದ್ಯಾಲಯದಲ್ಲಿ ಸ್ಥಳೀಯ ಪೊಲೀಸ್ ಠಾಣೆಯಿಂದ ಏರ್ಪಡಿಸಲಾಗಿದ್ದ ಮಾದಕ ವಸ್ತು ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಮಾದಕ ವಸ್ತು ಚಟಕ್ಕೆ ಒಮ್ಮೆ ದಾಸರಾದರೆ ಅದರಿಂದ ಹೊರಬರಲು ಬಹಳ ಕಷ್ಟ. ಕೆಲವು ಕಡೆಗಳಲ್ಲಿ ಯುವಕರು ಒಂದು ಚಟ ತ್ಯಜಿಸಲು ಮತ್ತೊಂದು ಚಟಕ್ಕೆ ದಾಸರಾಗುತ್ತಾರೆ. ನಿಷೇಧಿತಗೊಂಡಿರುವ ಯಾವುದೇ ಮಾದಕ ವಸ್ತುಗಳಾದರೂ ಜೀವಕ್ಕೆ ಕಂಠಕವಾಗಿವೆ ಎಂದರು.
ವಿದ್ಯಾರ್ಥಿ ಜೀವನ ಬಹಳ ಸುಂದರ. ನಿಮ್ಮ ಜೀವನ ರೂಪಿಸಿಕೊಳ್ಳಲು ಇದೊಂದು ಸೂಕ್ತ ಸಮಯ. ಈ ವೇಳೆ ಮಾದಕ ವಸ್ತುಗಳ ಚಟಕ್ಕೆ ದಾಸರಾಗದೇ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದ ಅವರು, ಸೈಬರ್ ಕ್ರೈಂ ಎಂಬ ಪೆಡಂಭೂತಕ್ಕೆ ಸಾಕಷ್ಟು ಜನ ವಂಚನೆಗೆ ಒಳಗಾಗುತ್ತಿದ್ದಾರೆ. ಸಂಪರ್ಕಕ್ಕೆ ಸಿಗದ ಕರೆಗಳ ಮೂಲಕ ಓಟಿಪಿ ಪಡೆದು ಹಣ ವಂಚಿಸಿರುವ ಪ್ರಕರಣಗಳು ಕಂಡುಬರುತ್ತಿವೆ ಎಂದು ಹೇಳಿದರು.ಬಾಲ್ಯ ವಿವಾಹ ಮಾಡುವುದು ಅಪರಾಧ. ಬಾಲ್ಯವಿವಾಹ ನಿಷೇಧ ಕಾಯ್ದೆ ಅತ್ಯಂತ ಕಠಿಣವಾಗಿದೆ. ಇನ್ನೂ ತಿಳಿವಳಿಕೆ ಇಲ್ಲದ ಮಕ್ಕಳಿಗೆ ಮದುವೆ ಮಾಡುವುದರಿಂದ ವಯಸ್ಕರಾದ ಮೇಲೆ ಮನೆಯಲ್ಲಿ ಸಮಸ್ಯೆಗಳ ಸರಮಾಲೆ ಉದ್ಭವವಾಗಿದೆ. ಇಂತಹ ಸಮಸ್ಯೆಗಳು ಕಂಡುಬಂದಲ್ಲಿ ಮಕ್ಕಳ ಸಹಾಯ ವಾಣಿ ೧೯೩೦ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ತಿಳಿ ಹೇಳಿದರು.