ಮಾದಕ ದ್ರವ್ಯ ಸಮಾಜಕ್ಕೆ ಅಂಟಿದ ಮಹಾಮಾರಿ: ಎಸ್‌ಪಿ ದೀಪನ್

KannadaprabhaNewsNetwork |  
Published : Jun 28, 2026, 03:30 AM IST
 | Kannada Prabha

ಸಾರಾಂಶ

ಮಾದಕ ದ್ರವ್ಯಗಳು ಸಮಾಜಕ್ಕೆ ಅಂಟಿದ ಕ್ಯಾನ್ಸರ್‌ನಂತಿದ್ದು, ಇವು ಯುವಜನತೆಯ ಭವಿಷ್ಯ ಹಾಗೂ ಜೀವನದ ಗುರಿಯನ್ನು ಬುಡಮೇಲು ಮಾಡುತ್ತವೆ.

ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಕಾರವಾರ

ಮಾದಕ ದ್ರವ್ಯಗಳು ಸಮಾಜಕ್ಕೆ ಅಂಟಿದ ಕ್ಯಾನ್ಸರ್‌ನಂತಿದ್ದು, ಇವು ಯುವಜನತೆಯ ಭವಿಷ್ಯ ಹಾಗೂ ಜೀವನದ ಗುರಿಯನ್ನು ಬುಡಮೇಲು ಮಾಡುತ್ತವೆ. ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣವಾಗದಿದ್ದರೆ ದೇಶದ ಪ್ರಗತಿ ಅಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಕಳವಳ ವ್ಯಕ್ತಪಡಿಸಿದರು.

ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ಸಪ್ತಾಹದ ಅಂಗವಾಗಿ ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಗರದ ಮಯೂರವರ್ಮ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಯುವ ಪೀಳಿಗೆಗೆ ಕಿವಿಮಾತು ಹೇಳಿದ ಎಸ್ಪಿ ದೀಪನ್, ಒಮ್ಮೆ ಮಾದಕ ದ್ರವ್ಯದ ವ್ಯಸನಕ್ಕೆ ಒಳಗಾದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಎಂದಿಗೂ ಸಾಧ್ಯವಿಲ್ಲ. ಅಮಲು ಪದಾರ್ಥಗಳು ಕೇವಲ ಆರೋಗ್ಯವನ್ನಷ್ಟೇ ಅಲ್ಲ, ಇಡೀ ಕುಟುಂಬವನ್ನೇ ಬೀದಿಗೆ ತರುತ್ತವೆ. ಜಿಲ್ಲೆಯಲ್ಲಿ ಡ್ರಗ್ಸ್ ಸಾಗಾಟ ಮತ್ತು ಮಾರಾಟ ಜಾಲವನ್ನು ಬೇರು ಸಮೇತ ಕಿತ್ತೆಸೆಯಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಇದರ ಜೊತೆಗೆ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿ ಜನರಲ್ಲಿ ಅರಿವು ಮೂಡಿಸುವ ಮೂಲಕ ಈ ಸಮರದಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

ನಂತರ ಮಯೂರವರ್ಮ ವೇದಿಕೆಯಿಂದ ಬೃಹತ್ ಜಾಗೃತಿ ಜಾಥಾ ಹೊರಟಿತು. ನಗರದ ಪ್ರಮುಖ ರಸ್ತೆಗಳಾದ ಜಿಲ್ಲಾಧಿಕಾರಿ ಕಚೇರಿ ವೃತ್ತ, ಪಿಕಳೆ ರಸ್ತೆ, ಗ್ರೀನ್ ಸ್ಟ್ರೀಟ್, ಸುಭಾಷ್ ಸರ್ಕಲ್ ಹಾಗೂ ಬಸ್ ನಿಲ್ದಾಣದ ಮೂಲಕ ಸಾಗಿದ ಜಾಥಾದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಡ್ರಗ್ಸ್ ಮತ್ತು ತಂಬಾಕು ವಿರೋಧಿ ಘೋಷವಾಕ್ಯಗಳ ಫಲಕಗಳನ್ನು ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ವಿವಿಧ ಶಾಲಾ-ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಗೃಹರಕ್ಷಕ ದಳದ ಸದಸ್ಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೌನಾನುಷ್ಠಾನದಿಂದ ಆತ್ಮಬಲ ವೃದ್ಧಿ: ಬಸವಲಿಂಗ ಶ್ರೀಗಳು
ಕನ್ನಡ ಶಾಲೆ ಮುಚ್ಚಿದರೆ ಸಂಸ್ಕೃತಿ ನಾಶವಾದಂತೆ: ವಾಸರೆ