ವ್ಯಸನ ಮುಕ್ತ ಸಮಾಜ ನಿರ್ಮಿಸಲು ಕೈಜೋಡಿಸಿ

KannadaprabhaNewsNetwork |  
Published : Aug 02, 2025, 01:45 AM IST
10 | Kannada Prabha

ಸಾರಾಂಶ

ನಮ್ಮ ಹಾಗೂ ಸಮಾಜದ ಆರೋಗ್ಯಕ್ಕೆ ಹಾನಿಕಾರಕವಾದ ಯಾವುದೇ ವ್ಯಸನವನ್ನು ನಾವು ಅಳವಡಿಸಿಕೊಳ್ಳಬಾರದು.

ಕನ್ನಡಪ್ರಭ ವಾರ್ತೆ ಮೈಸೂರು

ವ್ಯಸನ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು. ಯುವ ಜನತೆ ಯಾವುದೇ ವ್ಯಸನಗಳಿಗೆ ಒಳಗಾಗಬಾರದು ಎಂದು ಶಾಸಕ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್ ಕರೆ ನೀಡಿದರು.

ನಗರದ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ನಲ್ಲಿ ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ನಮ್ಮ ಹಾಗೂ ಸಮಾಜದ ಆರೋಗ್ಯಕ್ಕೆ ಹಾನಿಕಾರಕವಾದ ಯಾವುದೇ ವ್ಯಸನವನ್ನು ನಾವು ಅಳವಡಿಸಿಕೊಳ್ಳಬಾರದು. ಸಮಾಜವನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ಯುವಜನತೆಯ ಮೇಲಿದೆ. ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ನಿಮ್ಮ ಕೊಡುಗೆ ಅಪಾರವಾದದ್ದು. ವಿಧ್ಯಾರ್ಥಿ ಸಮೂಹ ಇಂದು ಬಹುಬೇಗ ಮಾದಕ ವಸ್ತುಗಳಿಗೆ ಒಳಗಾಗುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆ ಅಪರಾದ ಎಂದರು.

ಮೊಬೈಲ್ ಕೂಡ ಒಂದು ವ್ಯಸನವಾಗಿದೆ. ಅವಶ್ಯಕತೆಗೆ ಅನುಗುಣವಾಗಿ ಮೊಬೈಲ್ ಬಳಸಬೇಕು. ವಿದ್ಯಾರ್ಥಿ ದಿಸೆಯಲ್ಲಿ ಓದಿನ ಕಡೆ ಹೆಚ್ಚಿನ ಗಮನ ಕೊಡಬೇಕು. ನನ್ನೊಬ್ಬನಿಂದ ಸಮಾಜವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಅಂದುಕೊಳ್ಳಬಾರದು. ಪ್ರತಿಯೊಬ್ಬರು ಉತ್ತಮ ಗುಣಗಳನ್ನು ಅಳವಡಿಸಿಕೊಂಡರೆ ಉತ್ತಮ ಸಮಾಜ ಹಾಗೂ ವಾಸಕ್ಕೆ ಯೋಗ್ಯವಾದ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಅವರು ಹೇಳಿದರು.

ಯಾವುದೇ ಸಮಾಜಕ್ಕೆ ಹಾನಿಕರವಾದ ವಸ್ತುಗಳನ್ನು ತ್ಯಜಿಸಬೇಕು. ಸಮಾಜವನ್ನು ಜೋಡಿಸುವಂತಹ ಕೆಲಸವನ್ನು ಪ್ರತಿಯೊಬ್ಬರು ಮಾಡೋಣ. ಶ್ರೀ ಮಹಾಂತ ಶಿವಯೋಗಿಗಳ ಜೀವನ ಮೌಲ್ಯಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.

ವ್ಯಸನದಿಂದ ಹೊರಕ್ಕೆ ಬರುವುದು ಕಷ್ಟ

ಇದೇ ವೇಳೆ ವಿಶೇಷ ಉಪನ್ಯಾಸ ನೀಡಿದ ಮನೋವೈದ್ಯ ತಜ್ಞರಾದ ಡಾ. ಮಂಜುಶ್ರೀ ಅವರು, ತಂಬಾಕು ಉತ್ಪನ್ನಗಳು, ಆಲ್ಕೊಹಾಲ್, ಗಾಂಜಾ, ಹೆರಾಯಿನ್, ಕೊಕೇನ್, ಎಂಡಿಎಂಎ ಮುಂತಾದವು ಮಾದಕ ವಸ್ತುಗಳು ಆಗಿವೆ. ಕಾಲೇಜು ದಿನಗಳಲ್ಲಿ ಕುತೂಹಲಕ್ಕೆ, ಸ್ನೇಹಿತರ ಪ್ರಚೋದನೆಯಿಂದ ಮಾದಕ ವಸ್ತುಗಳ ಬಳಕೆ ಪ್ರಾರಂಭವಾಗುತ್ತದೆ. ನಂತರ ಇದರ ದುರುಪಯೋಗ ಪ್ರಾರಂಭವಾಗಿ ನಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಇದಕ್ಕೆ ದಾಸರಾಗಿ ವ್ಯಸನಕ್ಕೆ ಒಳಗಾಗುತ್ತಾರೆ. ಈ ಹಂತದಲ್ಲಿ ಇದರಿಂದ ಹೊರಕ್ಕೆ ಬರುವುದು ಕಷ್ಟವಾಗುತ್ತದೆ ಎಂದರು.

ನಮ್ಮ ದೇಶದಲ್ಲಿ ಹೆಚ್ಚಾಗಿ ಬಳಕೆ ಮಾಡುವ ಮಾದಕ ವಸ್ತುಗಳು ಎಂದರೆ ಮಧ್ಯ ಹಾಗೂ ತಂಬಾಕು ಉತ್ಪನ್ನಗಳು. ಇವುಗಳ ಬಳಕೆಯಿಂದ ಮತ್ತು ಬಂದ ಹಾಗೆ ಆಗಿ ಹೆಚ್ಚು ಹೆಚ್ಚು ಬಳಕೆಯಿಂದ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಇವುಗಳ ಬಳಕೆ ದೀರ್ಘ ಕಾಲಿಕವಾದ ದುಷ್ಪರಿಣಾಮ ಬೀರುತ್ತವೆ. ತಂಬಾಕು ಉತ್ಪನ್ನಗಳಿಗೆ ಒಳಗಾದವರು ಬಿಡುವುದು ಹೆಚ್ಚು ಕಷ್ಟವಾಗುತ್ತದೆ. ತಂಬಾಕು ಉತ್ಪನ್ನಗಳ ಬಳಕೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಅವರು ತಿಳಿಸಿದರು.

ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಮಲೈ ಮಾದೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಪಿ. ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ. ನಾಗರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್ ಮೊದಲಾದವರು ಇದ್ದರು.

----

ಕೋಟ್...

ಕಾಯಿಲೆ ಇಲ್ಲದವರೆಲ್ಲ ಆರೋಗ್ಯವಂತರಲ್ಲ. ಆರೋಗ್ಯವಂತ ಎಂದರೆ ಮಾನಸಿಕ ದೈಹಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುವುದು. ಯಾರು ಮಾದಕ ವಸ್ತುಗಳ ಸೇವನೆಗೆ ಒಳಗಾಗಬಾರದು. ಈ ಬಗ್ಗೆ ಆಶಾ ಕಾರ್ಯಕರ್ತೆಯರು ಅರಿವು ಮೂಡಿಸುತ್ತಾ ಇದ್ದಾರೆ. ವಿದ್ಯಾರ್ಥಿಗಳು ಮೊಬೈಲ್ ಅನ್ನು ಹೆಚ್ಚು ಬಳಸಬಾರದು. ಹೆಚ್ಚು ಮೊಬೈಲ್ ಬಳಕೆಯಿಂದ ಮೆದುಳಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.

- ಡಾ.ಸಿ.ಪಿ. ಕುಮಾರಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ

----

18 ರಿಂದ 49 ರವರೆಗಿನ ವರ್ಷ ಗಳಲ್ಲಿ ಯಾವುದೇ ಚಟ ವ್ಯಸನಗಳಿಗೆ ಒಳಗಾಗದೆ ಇದ್ದರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. 100 ಜನರಲ್ಲಿ 24 ಜನರಿಗೆ ಹೈ ಬಿಪಿ ಕಂಡು ಬರುತ್ತಿದೆ. ಸಕ್ಕರೆ ಕಾಯಿಲೆ ಹೆಚ್ಚು ಕಂಡು ಬರುತ್ತಿದ್ದು, ಇದು ಸೈಲೆಂಟ್ ಕಿಲ್ಲರ್ ಆಗಿರುತ್ತದೆ. ಇವುಗಳನ್ನು ಹತೋಟಿಯಲ್ಲಿ ಇಡಲು ಹಿತ ಮಿತವಾದ ಸಮತೋಲನ ಆಹಾರವನ್ನು ಸೇವಿಸಬೇಕು.

- ಡಾ. ನಾಗರಾಜು, ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ