)
ಕನ್ನಡಪ್ರಭ ವಾರ್ತೆ ಬೆಂಗಳೂರುನಕಲಿ ಔಷಧ ಮಾಫಿಯಾ ಜಾಲದಲ್ಲಿ ಪ್ರಮುಖವಾಗಿ ಫೈಜರ್ ಕಂಪನಿಯೇ ನೇರವಾಗಿ ಇರಬಹುದೆಂಬ ಭಾವನೆ ಇದೆ. ಹಾಗಾಗಿ ಅದರ ಪರವಾನಗಿ ರದ್ದು ಮಾಡಿ, ಅದರ ಎಲ್ಲ ಔಷಧಗಳ ಸರಬರಾಜು, ಮಾರಾಟವನ್ನು ರಾಜ್ಯದಲ್ಲಿ ನಿಷೇಧ ಮಾಡಿದ್ದೇವೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮ ಅಧಿಕಾರಿಗಳ ದಾಳಿಯಿಂದ ಪತ್ತೆಯಾದ ನಕಲಿ ಔಷಧ ಮಾಫಿಯಾ ಪ್ರಕರಣ ಸಂಬಂಧ ಎಸ್‌ಐಟಿ ತನಿಖೆ ನಡೆಯುತ್ತಿದೆ. ಇದರಲ್ಲಿ ಯಾರು ಪ್ರಮುಖ ಕಿಂಗ್‌ಪಿನ್ ಇದ್ದಾರೆ. ಅವನ ಏಜೆನ್ಸಿಗೆ ಯಾರೆಲ್ಲಾ ಸಂಪರ್ಕ ಇದೆ. ಯಾವೆಲ್ಲಾ ಡೀಲರ್, ಫಾರ್ಮಸಿಗಳಿಗೆ ಔಷಧ ಹೋಗಿದೆ ಎಂಬುದನ್ನು ಪರಿಶೀಲಿಸಿ ಅದರ ಆಧಾರದಲ್ಲಿ 17 ಔಷಧ ಕೇಂದ್ರಗಳ ಲೈಸೆನ್ಸ್ ರದ್ದು, ಏಳು ಕೇಂದ್ರಗಳ ಲೈಸೆನ್ಸ್ ಅಮಾನತಿನಲ್ಲಿಟ್ಟಿದ್ದೇವೆ. ಏಕೆಂದರೆ, ಇವರೆಲ್ಲಾ ಮೇಲ್ನೋಟಕ್ಕೆ ಒಳಗಿಂದ ಒಳಗೆ ಈ ಜಾಲದಲ್ಲಿ ಕೈಜೋಡಿಸಿರುವುದು ಕಾಣುತ್ತಿದೆ. ಕಡಿಮೆ ಬೆಲೆಗೆ ಔಷಧ ತಂದು ಎಂಆರ್‌ಪಿ ಬೆಲೆಗೆ ಮಾರಾಟ ಮಾಡಿದ್ದಾರೆ. ಆ ಔಷಧಗಳು ಯಾವ್ಯಾವ ಆಸ್ಪತ್ರೆಗೆ ಕೊಟ್ಟಿದ್ದೀರಿ ಎಂಬ ಬಗ್ಗೆ ಕೇಳಿದರೆ ಮಾಹಿತಿ ನೀಡುತ್ತಿಲ್ಲ, ತನಿಖೆಗೆ ಸಹಕಾರ ನೀಡುತ್ತಿಲ್ಲ. ಹಾಗಾಗಿ ಅವರ ಲೈಸೆನ್ಸ್ ರದ್ದು, ಅಮಾನತು ಮಾಡಲಾಗಿದೆ ಎಂದರು.ಇದರಲ್ಲಿ ಪ್ರಮುಖವಾಗಿ ಫೈಜರ್ ಕಂಪನಿಯೇ ಶಾಮೀಲಾತಿರುವ ಭಾವನೆ ಇದೆ. ನೆಲಮಂಗಲದ ಫೈಜರ್ ಕಂಪನಿಯ ಸಿ ಆ್ಯಂಡ್ ಎಫ್ ಏಜೆನ್ಸಿಗೆ ಆಸ್ಟ್ರೇಲಿಯಾ ಮತ್ತು ಇಟಲಿಯಿಂದ ಔಷಧ ಬರುತ್ತಿತ್ತು. ಆ ಕೇಂದ್ರದವರು ತನಿಖೆಗೆ ಸ್ಪಂದಿಸುತ್ತಿಲ್ಲ, ನಾವು ಕೇಳಿದ ಯಾವ ಮಾಹಿತಿಯನ್ನೂ ನೀಡುತ್ತಿಲ್ಲ. ಔಷಧಗಳಿಗೆ ಸಂಬಂಧಿಸಿದ ರೆಫರೆನ್ಸ್ ಸ್ಟ್ರ್ಯಾಂಡರ್ಡ್ ಬಗ್ಗೆ ಕೇಳಿದರೂ ಕೊಡಲಿಲ್ಲ. ಯಾವೆಲ್ಲಾ ಆಸ್ಪತ್ರೆಗಳಿಗೆ ಔಷಧ ಸರಬರಾಜು ಮಾಡಲಾಗಿದೆ. ಅದರಲ್ಲಿ ಸರಿಯಾಗಿರುವುದು ಬಿಟ್ಟು ಉಳಿದದ್ದು ವಾಪಸ್ ಪಡೆಯಿರಿ ಎಂದು ಕೇಳಿದರೂ ಎಂದರೂ ಗಮನಿಸಿಲ್ಲ. ಇದುವರೆಗೆ ಕೇವಲ 170 ಔಷಧವನ್ನು ವಾಪಸ್ ಪಡೆದಿದ್ದಾರೆ. ಆದರೆ, ನಮ್ಮ ಅಧಿಕಾರಿಗಳು 1011 ಔಷಧ ವಾಪಸ್ ಪಡೆದಿದ್ದಾರೆ ಎಂದರು.