ಹಾವೇರಿ: ಔಷಧ ವ್ಯಾಪಾರಿಗಳ ಉಳಿವು ಮತ್ತು ಸಾರ್ವಜನಿಕರ ಆರೋಗ್ಯ ಹಿತಾಸಕ್ತಿ ಕಾಪಾಡುವ ಉದ್ದೇಶ ಹಾಗೂ ಔಷಧ ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಮೇ 20ರಂದು ಒಂದು ದಿನ ಸಾಂಕೇತಿಕವಾಗಿ ಔಷಧ ವ್ಯಾಪಾರ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸತ್ಯನಾರಾಯಣ ಕೇಲಗಾರ ಹೇಳಿದರು.
ಆನ್‌ಲೈನ್ ಮೂಲಕ ಔಷಧ ವ್ಯಾಪಾರ ನಡೆಸುವುದನ್ನು ನಿಲ್ಲಿಸಬೇಕು. ಈ ಸಂಬಂಧ ಕೋವಿಡ್ ಸಮಯದಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶಗಳನ್ನು ಹಿಂಪಡೆಯಬೇಕು. ಕಾರ್ಪೊರೇಟ್ ಕಂಪನಿಗಳಿಂದ ನಡೆಯುತ್ತಿರುವ ವಿನಾಯಿತಿ (ಡಿಸ್ಕೌಂಟ್) ವ್ಯಾಪಾರ ನಿಲ್ಲಿಸಬೇಕು. ನಕಲಿ ಔಷಧಿಗಳ ಹಾವಳಿ ನಿಲ್ಲಿಸಿ ಸರಳ ಕಾನೂನುಗಳಿಂದ ಔಷಧ ವ್ಯಾಪಾರಿಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
ರೋಗಿಗಳ ಸುರಕ್ಷತೆ, ನಕಲಿ ಔಷಧಿಗಳ ಭೀತಿ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ನೀಡುವ ಅತಿಯಾದ ರಿಯಾಯಿತಿಗಳಿಂದ ಸ್ಥಳೀಯ ವ್ಯಾಪಾರಿಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ. ಆನ್‌ಲೈನ್‌ನಲ್ಲಿ ವೈದ್ಯರ ಚೀಟಿ ಇಲ್ಲದೆ ಅಥವಾ ಒಂದೇ ಚೀಟಿ ಬಳಸಿ ಪದೇ ಪದೇ ಔಷಧ ಖರೀದಿ ಮಾಡುವುದರಿಂದ ಅಪಾಯ ಹೆಚ್ಚಿದೆ. ಇ-ಫಾರ್ಮಸಿಗಳ ಮೇಲೆ ಸರ್ಕಾರದ ನಿಯಂತ್ರಣವಿಲ್ಲ. ನಾವು ಯಾರಿಗೆ ಎಷ್ಟು ಔಷಧ ಮಾರಾಟ ಮಾಡಿದ್ದೇವೆ ಎಂಬ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಗೆ ನೀಡುತ್ತೇವೆ. ಆದರೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಔಷಧ ಮಾರಾಟದ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ. ಕಾರಣ ಸಮಾಜದ ಮೇಲೆ ಅಡ್ಡಪರಿಣಾಮ ಉಂಟಾಗುತ್ತಿದೆ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಶರದ ಕುದರಿ, ಕಾರ್ಯದರ್ಶಿ ರಾಜೇಂದ್ರ ಇರಕಲ, ಖಜಾಂಚಿ ರಾಜೇಶ್ ಲೊಡಾಯಿ, ಹಾವೇರಿ ತಾಲೂಕು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಿದ್ದಣ್ಣ ಮೆಣಸಿನಹಾಳ, ಕಾರ್ಯದರ್ಶಿ ಸುಬ್ರಹ್ಮಣ್ಯ, ನೀಲಕಂಠ ನಾಡಿಗೇರ, ಗೋಪಣ್ಣ ಇದ್ದರು.