ಮಳೆ, ಬಿರುಗಾಳಿಗೆ ನೂರಾರು ಎಕರೆ ಬಾಳೆ ನೆಲಕ್ಕೆ

KannadaprabhaNewsNetwork |  
Published : May 17, 2026, 02:00 AM IST
16ಕೆಪಿಎಲ್24,25 ಕೊಪ್ಪಳ ತಾಲೂಕಿನ ಹ್ಯಾಟಿ, ಮೆಳ್ಳಿಕೇರಿ ಗ್ರಾಮಗಳಲ್ಲಿ ಬಿರುಗಾಳಿಗೆ ಬಾಳೆ ಬೆಳೆ ನೆಲಕ್ಕೆ ಉರುಳಿರುವುದು. | Kannada Prabha

ಸಾರಾಂಶ

ಹೊಲದಲ್ಲಿದ್ದವರು ತಾವೇ ಹಾರಿ ಹೋಗುತ್ತೇವೋ ಎಂಬ ಭಯ ಉಂಟಾಗುವಷ್ಟರ ಮಟ್ಟಿಗೆ ಗಾಳಿ ಬಿರುಸಾಗಿತ್ತು

ಕೊಪ್ಪಳ: ಸಾಧಾರಣ ಮಳೆ, ಅಬ್ಬರದ ಬಿರುಗಾಳಿಗೆ ಕೊಪ್ಪಳ ತಾಲೂಕಿನಾದ್ಯಂತ ತೋಟಗಾರಿಕಾ ಬೆಳೆಗಳು ಹಾನಿಯಾಗಿದ್ದು, ಅಲ್ಲಲ್ಲಿ ವಿದ್ಯುತ್ ಕಂಬ ಬಿದ್ದು, ಮರಗಳು ಧರೆಗುರುಳಿದ ಘಟನೆ ಶನಿವಾರ ನಡೆದಿದೆ.

ತಾಲೂಕಿನ ಹ್ಯಾಟಿ ಗ್ರಾಮ ಸೇರಿದಂತೆ ಸುತ್ತಮುತ್ತ 50 ಎಕರೆಗೂ ಅಧಿಕ ಕಟಾವಿಗೆ ಬಂದಿದ್ದ ಬಾಳೆ ಉರುಳಿ ಬಿದ್ದಿವೆ. ತಾಲೂಕಿನಾದ್ಯಂತ ನೂರಕ್ಕೂ ಹೆಚ್ಚು ಎಕರೆ ಬಾಳೆ ಬೆಳೆ ಹಾನಿಯಾಗಿದೆ.

ಮಳೆ ಅಷ್ಟಕಷ್ಟೇ ಇದ್ದರೂ ಬಿರುಗಾಳಿಯ ರಭಸ ವಿಪರೀತವಾಗಿತ್ತು. ಹೊಲದಲ್ಲಿದ್ದವರು ತಾವೇ ಹಾರಿ ಹೋಗುತ್ತೇವೋ ಎಂಬ ಭಯ ಉಂಟಾಗುವಷ್ಟರ ಮಟ್ಟಿಗೆ ಗಾಳಿ ಬಿರುಸಾಗಿತ್ತು. ಹಲವೆಡೆ ತಗಡುಗಳು ಹಾರಿ ಹೋಗಿದೆ.

ಕಾಮನೂರು ರಸ್ತೆಯಲ್ಲಿ ಬೃಹತ್ ಮರವೊಂದು ಉರುಳಿಬಿದ್ದಿದ್ದು, ಯಾವುದೇ ಹಾನಿಯಾಗಿಲ್ಲ. ಅಬ್ಬಿಗೇರಿ ರಸ್ತೆಯ ಅಕ್ಕಪಕ್ಕದಲ್ಲಿ ಹಾಕಿದ್ದ ಮೇವಿನ ಬಣವಿಗಳೇ ಹಾರಿ ಹೋಗಿದ್ದು, ಎಲ್ಲಿ ಹೋಗಿ ಬಿದ್ದಿವೆ ಎನ್ನುವುದು ಗೊತ್ತಾಗಿಲ್ಲ. ಅಷ್ಟೊಂದು ದೂರ ಹೋಗಿವೆ. ಕೊಪ್ಪಳ ತಾಲೂಕಿನ ವಿವಿಧೆಡೆ ಹಾಕಿದ್ದ ತೋಟದ ಮನೆಗಳ ಛತ್ತು ಹಾರಿ ಹೋಗಿದ್ದು. ಯಾವುದೇ ಜೀವ ಹಾನಿಯಾಗಿಲ್ಲ.

ಬಾಳೆ ಬೆಳೆ ನಾಶ:ತಾಲೂಕಿನ ಹ್ಯಾಟಿ, ಮೆಳ್ಳಿಕೇರಿ, ಲಾಚನಕೇರಿ ಗ್ರಾಮಗಳಲ್ಲಿ ಬೀಸಿದ ಬಿರುಗಾಳಿಯಿಂದ ಕಟಾವಿಗೆ ಬಂದಿದ್ದ ಬಾಳೆ ಉರುಳಿ ಬಿದ್ದಿದ್ದು, ಲಕ್ಷಾಂತರ ಹಾನಿಯಾಗಿದೆ.

ಮೆಳ್ಳಿಕೇರಿಯ ಯಂಕರಡ್ಡಿ ಡಂಬ್ರಳ್ಳಿ ಅವರ ಎರಡು ಎಕರೆ ಬಾಳೆ ಸೇರಿದಂತೆ ಹ್ಯಾಟಿ ಗ್ರಾಮವೊಂದರಲ್ಲಿಯೇ 50 ಎಕರೆ ಬಾಳೆ ಸಂಪೂರ್ಣ ನೆಲಕ್ಕೆ ಬಿದ್ದಿದೆ. ಇನ್ನೆರಡು ತಿಂಗಳು ಆಗಿದ್ದರೇ ಲಕ್ಷಾಂತರ ಆದಾಯ ಬರುವುದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ತಾಲೂಕಿನಲ್ಲಿಯೇ ನೂರಕ್ಕೂ ಹೆಚ್ಚು ಎಕರೆ ಬಾಳೆ ಬೆಳೆ ಹಾನಿಯಾಗಿದ್ದರೆ ಕೋಟ್ಯಂತರ ಬೆಳೆ ಮಣ್ಣು ಪಾಲಾಗಿದೆ. ಇನ್ನು ಮಾವಿನಕಾಯಿ, ದ್ರಾಕ್ಷಿ, ದಾಳಿಂಬೆ ಬಹಳ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಹೀಗಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೊತ್ತಿ ಉರಿದ ವಿದ್ಯುತ್ ಕಂಬ: ಗಿಣಿಗೇರಿ ಬಳಿ ಮೇನ್ ಹೈಟೆನ್ಶನ್ ವಿದ್ಯುತ್ ಕಂಬಗಳ ಉರುಳಿ ಬಿದ್ದಿದ್ದು, ಬೆಂಕಿ ಹೊತ್ತಿ ಉರಿದಿದೆ. ಅದೃಷ್ಠವಶಾತ್ ಯಾವುದೇ ಜೀವ ಹಾನಿಯಾಗಿಲ್ಲ. ಕೊಪ್ಪಳ ನಗರದ ಬಹುತೇಕ ಕಡೆ ಅನೇಕ ಗಿಡಗಳು ಬಿದ್ದಿದ್ದರಿಂದ ವಿದ್ಯುತ್ ತಂತಿ ಕಟ್ ಆಗಿದ್ದು, ಕೊಪ್ಪಳದಲ್ಲಿ ವಿದ್ಯುತ್ ಪೂರೈಕೆಯೇ ಇಲ್ಲದಂತಾಗಿದೆ.

ಇಂತಹ ಗಾಳಿ ನಾವು ನೋಡಿರಲೇ ಇಲ್ಲ. ಅಷ್ಟೊಂದು ದೊಡ್ಡ ಪ್ರಮಾಣದ ಗಾಳಿಗೆ ಬಾಳೆ ಬೆಳೆ ನೆಲಕ್ಕೆ ಉರುಳಿಬಿದ್ದಿವೆ. ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿವೆ. ರೈತರಿಗೆ ಭಾರಿ ಹಾನಿಯಾಗಿದೆ ಎಂದು ಹ್ಯಾಟಿ ನಿವಾಸಿ ಮಲ್ಲಿಕಾರ್ಜುನಗೌಡ ಪಾಟೀಲ್ ತಿಳಿಸಿದ್ದಾರೆ.

ನಮ್ಮ ಎರಡು ಎಕರೆ ಬಾಳೆ ಸಂಪೂರ್ಣ ನೆಲಕ್ಕೆ ಬಿದ್ದಿದೆ. ಇನ್ನೇನು ಕಟಾವು ಮಾಡಬೇಕು ಎನ್ನುವಾಗಲೇ ನೆಲಕ್ಕೆ ಬಿದ್ದಿದ್ದು, ಲಕ್ಷಾಂತರ ಹಾನಿಯಾಗಿದೆ ಎಂದು ವೆಂಕರಡ್ಡಿ ಮೆಳ್ಳಿಕೇರಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಪ್ಪಳದ ಪ್ರಜ್ಞಾವಂತರು ಮಾಲಿನ್ಯದ ವಿರುದ್ಧ ಬೀದಿಗಿಳಿಯಲಿ
ಪ್ರಧಾನಿ ಮೋದಿ ಆಡಳಿತದಿಂದ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ