ಕೊಪ್ಪಳ: ಪ್ರಾಶ್ಚಿಮಾತ್ಯ ದೇಶಗಳಲ್ಲಿ ನಡೆದಿರುವ ಯುದ್ಧದಿಂದ ದೇಶದಲ್ಲಿ ಸಮಸ್ಯೆಯಾಗಿಲ್ಲ. ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಆಡಳಿತದ ವೈಫಲ್ಯದಿಂದ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಆರೋಪಿಸಿದ್ದಾರೆ.
ಕಾಂಗ್ರೆಸ್ ನೇತೃತ್ವ ಯುಪಿಎ ಆಡಳಿತದ ಅವಧಿಯಲ್ಲಿ 142 ಡಾಲರ್ ಇದ್ದ ಕ್ರೂಡ್ ಆಯಿಲ್ ಬ್ಯಾರಲ್ ಬೆಲೆ ಈಗ 118 ಡಾಲರ್ ಆಗಿದೆ. ಆದರೂ ಪೆಟ್ರೋಲ್ ಬೆಲೆ ಕಡಿಮೆಯಾಗುವ ಬದಲು ₹ 54 ಇದ್ದಿದ್ದು, ಈಗ ನೂರು ರುಪಾಯಿ ದಾಟಿದೆ. ಇಂಥ ಸ್ಥಿತಿಯಲ್ಲಿ ಮತ್ತೆ ಪೆಟ್ರೋಲ್ ಬೆಲೆ ಏರಿಕೆ ಮಾಡಿ ಜನರಿಗೆ ಬರೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ದೇಶದ ಆರ್ಥಿಕ ಸ್ಥಿತಿ ಮತ್ತು ರುಪಾಯಿ ಮೌಲ್ಯ ಕುಸಿಯುತ್ತಿರುವುದನ್ನು ನೋಡಿದರೆ 115 ಆಗಲಿದೆ ಪೆಟ್ರೋಲ್ ಬೆಲೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಯೊಬ್ಬ ಮಹಿಳೆಯೂ ಕನಿಷ್ಟ ಬಂಗಾರ ಹೊಂದುವುದು ಭಾರತದ ಮಹಿಳೆಯರ ಸಂಪ್ರದಾಯ. ಅದರಲ್ಲೂ ಮದುವೆಯ ಸಂಪ್ರದಾಯದಲ್ಲಿ ಮಹಿಳೆಯರು ತಾಳಿಯನ್ನಾದರೂ ಬಂಗಾರದ್ದು ಧರಿಸಲೇಬೇಕು. ಅರಿಶಿಣ ಕೊಂಬು ಕಟ್ಟಿಕೊಳ್ಳಲು ಯಾರೂ ಒಪ್ಪುವುದಿಲ್ಲ. ಅಂಥ ಸ್ಥಿತಿಯಲ್ಲಿ ಬಂಗಾರದ ಬೆಲೆ ಸರ್ಕಾರವೇ ಏರಿಕೆ ಮಾಡಿದೆ. ಕಸ್ಟಮ್ ಸುಂಕ 6 ಇದ್ದಿದ್ದನ್ನು 15ಕ್ಕೆ ಏರಿಕೆ ಮಾಡಿದ್ದಾರೆ. ಇದ್ಯಾವ ನ್ಯಾಯ? ಎಂದು ಪ್ರಶ್ನೆ ಮಾಡಿದರು.2014ರಲ್ಲಿ ₹52 ಲಕ್ಷ ಕೋಟಿ ಇದ್ದ ದೇಶದ ಸಾಲ ₹216 ಲಕ್ಷ ಕೋಟಿಗೆ ಏರಿಕೆ ಮಾಡಿದ್ದಾರೆ. 12 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ₹164 ಲಕ್ಷ ಕೋಟಿ ಸಾಲ ಮಾಡಿದ್ದೇ ಇವರ ಸಾಧನೆಯಾಗಿದೆ ಎಂದು ಕುಟುಕಿದರು.