ಬೆಂಗಳೂರು: ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪುರಾತತ್ವ ವೈಭವವನ್ನು ಒಳಗೊಂಡಿರುವ ಲಕ್ಕುಂಡಿಯನ್ನು ದೇಶದ ಅಗ್ರ ಪುರಾತತ್ವ ಕೇಂದ್ರವನ್ನಾಗಿ ರೂಪಿಸುವ ದಿಸೆಯಲ್ಲಿ ಸಮಗ್ರ ಯೋಜನೆಗಳೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಲಕ್ಕುಂಡಿಯಲ್ಲಿ ಈಗಾಗಲೇ 15 ಬಾವಿ ಹಾಗೂ 15 ದೇವಾಲಯಗಳನ್ನು ಸಾರ್ವಜನಿಕರಿಗೆ ಪರಿಚಯಿಸಲಾಗಿದೆ. ಕಾಲಕ್ರಮೇಣ ನಿರ್ಲಕ್ಷ್ಯಕ್ಕೆ ಒಳಗಾಗಿ ತಮ್ಮ ಗುರುತನ್ನು ಕಳೆದುಕೊಂಡಿದ್ದ ಅನೇಕ ಪಾರಂಪರಿಕ ತಾಣಗಳನ್ನು ಸರ್ಕಾರ ಮತ್ತು ಸ್ಥಳೀಯರ ಸಹಕಾರದಿಂದ ಮರು ಅನಾವರಣಗೊಳಿಸುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ.
2026 ಅಂತ್ಯದೊಳಗೆ ಕನಿಷ್ಠ 50 ಬಾವಿ ಹಾಗೂ 50 ದೇವಾಲಯಗಳನ್ನು ಅನಾವರಣಗೊಳಿಸಿ, ಲಕ್ಕುಂಡಿಯ ಪಾರಂಪರಿಕ ತಾಣಗಳ ಸಂಖ್ಯೆಯನ್ನು 100ರ ಗಡಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆ ಸಾಕಾರಕ್ಕೆ ಸ್ಥಳೀಯರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದರು.ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಎರಡು ಸಾವಿರ ವರ್ಷಗಳ ಇತಿಹಾಸ ಹೊತ್ತಿರುವ ಲಕ್ಕುಂಡಿಯ ಪುರಾತತ್ವ ಸಂಪತ್ತು ಇಂದಿನ ಪೀಳಿಗೆಗೆ ಅಚ್ಚರಿಯ ಸಂಗತಿಯಾಗಿದೆ. ಆ ಕಾಲದ ಶಿಲ್ಪಿಗಳ ಪ್ರತಿಭೆ, ಕಲಾತ್ಮಕತೆ ಮತ್ತು ತಾಂತ್ರಿಕ ಸಾಮರ್ಥ್ಯಕ್ಕೆ ಇಲ್ಲಿ ದೊರೆಯುತ್ತಿರುವ ಶಿಲ್ಪಗಳು ಹಾಗೂ ಪುರಾವೆಗಳು ಜೀವಂತ ಸಾಕ್ಷಿಗಳಾಗಿವೆ.
ಸಭೆಯಲ್ಲಿ ಲಕ್ಕುಂಡಿಯ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಮಂಡಿಸಿದರು. ಪಾರಂಪರಿಕ ತಾಣಗಳ ಸಂರಕ್ಷಣೆ, ಪ್ರವಾಸೋದ್ಯಮ ವಿಸ್ತರಣೆ, ಸ್ಥಳೀಯ ಕಲಾ ಪರಂಪರೆಯ ಉತ್ತೇಜನ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಸದಸ್ಯರು ಅಭಿಪ್ರಾಯಪಟ್ಟರು.