ಕಂಪ್ಲಿ: ಇಲ್ಲಿನ ವೆಂಕಟರಮಣ ದೇವಸ್ಥಾನದಲ್ಲಿ ಶನೈಶ್ಚರ ಜಯಂತ್ಯುತ್ಸವವನ್ನು ಶನಿವಾರ ಭಕ್ತಿಭಾವ ಹಾಗೂ ವೈದಿಕ ಸಂಪ್ರದಾಯಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಶನೈಶ್ಚರ ದೇವರ ಪ್ರತಿಮೆಗೆ ತೈಲಾಭಿಷೇಕ, ಪಂಚಾಮೃತಾಭಿಷೇಕ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಲ್ಲಿನ ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳು ಧರ್ಮೋಪದೇಶ ನೀಡಿ ಮಾತನಾಡಿ, ವೈಶಾಖ ಬಹುಳ ಅಮಾವಾಸ್ಯೆಯಂದು ಶನಿದೇವ ಜನಿಸಿದ ಹಿನ್ನೆಲೆ ಈ ದಿನಕ್ಕೆ ವಿಶೇಷ ಮಹತ್ವವಿದೆ. ಶನಿ ದೇವರ ಆರಾಧನೆಯಿಂದ ಜೀವನದಲ್ಲಿ ಶಾಂತಿ, ಸಮೃದ್ಧಿ ಹಾಗೂ ಸತ್ಫಲಗಳು ದೊರೆಯುತ್ತವೆ. ಯಾರಿಗೂ ಕೇಡು ಬಯಸದೆ, ಪರೋಪಕಾರ ಮನೋಭಾವದಿಂದ ಜೀವನ ನಡೆಸುವವರ ಮೇಲೆ ಶನೈಶ್ಚರನ ಅನುಗ್ರಹ ಸದಾ ಇರುತ್ತದೆ. ಶನಿಯ ವಕ್ರದೃಷ್ಟಿಯಿಂದ ದೂರವಿರಲು ಉತ್ತಮ ಚಿಂತನೆ, ಸತ್ಕರ್ಮ ಮತ್ತು ಧಾರ್ಮಿಕ ಜೀವನ ಅವಶ್ಯಕ. ಶನಿ ದೇವನು ಯಾರಿಗೂ ಶತ್ರುವೂ ಅಲ್ಲ, ಮಿತ್ರನೂ ಅಲ್ಲ. ಆತನು ಕೇವಲ ಕರ್ಮಫಲದಾತ ಎಂದು ತಿಳಿಸಿದರು.

ಆಶ್ವತ್ಥನಾರಾಯಣ, ಜಯಂತ್ ಶ್ರೀವತ್ಸ, ಅನಿರುದ್ಧಶಾಸ್ತ್ರಿ ಹಾಗೂ ಎಸ್. ಶಶಿಧರಶಾಸ್ತ್ರಿಗಳ ಅಧ್ವರ್ಯದಲ್ಲಿ ವಿವಿಧ ವೈದಿಕ ಪೂಜಾ ವಿಧಿವಿಧಾನಗಳು ನೆರವೇರಿದವು. ಶನೈಶ್ಚರ ಜಯಂತಿ ಅಂಗವಾಗಿ ಶನಿದೇವರ ಪ್ರತಿಮೆಗೆ ಪಂಚಾಮೃತಾಭಿಷೇಕ, ಏಕಾದಶ ತಿಲತೈಲ ರುದ್ರಾಭಿಷೇಕ, ಅಷ್ಟೋತ್ತರ ಸಂಖ್ಯಾ ಸಹಿತ ತಿಲತೈಲಾಭಿಷೇಕ ಹಾಗೂ ಏಕಮಂತ್ರಪೂರ್ವಕ ಮಹಾಪೂಜೆ ನಡೆಯಿತು.

ಇದಕ್ಕೂ ಮುನ್ನ ಮಹಾಗಣಪತಿ ಪೂಜೆ, ಆದಿತ್ಯಾಧಿ ನವಗ್ರಹ ಪೂಜೆ, ಶನೈಶ್ಚರ ಅಷ್ಟೋತ್ತರ ಸಂಖ್ಯಾ ವೇದಮಂತ್ರಸಹಿತ ತಿಲಾಹೋಮ, ಶ್ರೀಗಣಪತಿ ಅಥರ್ವಶೀರ್ಷ ಪಾರಾಯಣ, ಪುರುಷಸೂಕ್ತ, ಶ್ರೀಸೂಕ್ತ ಪಠಣ ಹಾಗೂ ಮೃತ್ಯುಂಜಯ ಹೋಮಗಳು ವೈದಿಕ ಮಂತ್ರೋಚ್ಚಾರಗಳ ನಡುವೆ ನೆರವೇರಿದವು. ವಿಶೇಷವಾಗಿ ಶನಿದೇವರ ಪ್ರತಿಮೆಯನ್ನು ಫಲ, ಪುಷ್ಪ ಹಾಗೂ ವಿವಿಧ ಅಲಂಕಾರಿಕ ವಸ್ತುಗಳಿಂದ ಸಿಂಗಾರಗೊಳಿಸಲಾಗಿತ್ತು.

ಕಾರ್ಯಕ್ರಮದ ಅಂಗವಾಗಿ ಬ್ರಾಹ್ಮಣರಿಗೆ ವಸ್ತ್ರದಾನ ಮಾಡಲಾಗಿದ್ದು, ಸದ್ಭಕ್ತರಾದ ನೀತು ಜಗದೀಶ್ ರಾಯ್ಕರ್ ಅವರಿಂದ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಭಕ್ತರು ಭಕ್ತಿಭಾವದಿಂದ ಅನ್ನಪ್ರಸಾದ ಸ್ವೀಕರಿಸಿದರು.


ಸೇವಾ ಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತಾರಾಣಿ ಗಿರೀಶ್, ರೂಪಾ ಗುರುಪ್ರಸಾದ್, ಸವಿತಾ ಶಶಿಧರ್, ಭಗವತಿ ಸೇರಿದಂತೆ ಅನೇಕ ಧರ್ಮಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಇಲ್ಲಿನ ಬಣ್ಣದ ಚೌಡೇಶ್ವರಿ ದೇವಸ್ಥಾನದಲ್ಲಿಯೂ ಶನೈಶ್ಚರ ಜಯಂತ್ಯುತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಅರ್ಚಕರಾದ ಓದ ಬಸವರಾಜ ಹಾಗೂ ವನಕಿ ಶಂಕರ್ ಅವರ ಪೌರೋಹಿತ್ಯದಲ್ಲಿ ಶನಿಶ್ಚರ ಮತ್ತು ಧಾಮಿನಿ ದಂಪತಿಗಳ ವಿಗ್ರಹಗಳೊಂದಿಗೆ ಉಳಿದ ಗ್ರಹಗಳ ಪ್ರತಿಮೆಗಳಿಗೂ ವಿಶೇಷ ಅಲಂಕಾರ ಹಾಗೂ ಪೂಜೆ ಸಲ್ಲಿಸಲಾಯಿತು.