-ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ಅಭಿಯೋಜಕಿ ದಿವ್ಯಾರಾಣಿ
----ಕನ್ನಡಪ್ರಭ ವಾರ್ತೆ ಶಹಾಪುರ
ಮಾದಕ ವಸ್ತುಗಳ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಯುವಕರು ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಸರ್ಕಾರಿ ಅಭಿಯೋಜಕಿ (ಎಪಿಪಿ) ದಿವ್ಯಾರಾಣಿ ನಾಯಕ ಸುರಪುರ ತಿಳಿಸಿದರು.ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಶನಿವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ವಕೀಲರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ "ನಶಾ ಮುಕ್ತ ಭಾರತ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಮಾದಕ ವಸ್ತುಗಳನ್ನು ಕ್ಷಣಿಕ ಸುಖಕ್ಕಾಗಿ ವ್ಯಸನಿಗಳು ಬಳಕೆ ಮಾಡುತ್ತಿದ್ದಾರೆ. ಮಾದಕ ವ್ಯಸನದಿಂದ ಮುಕ್ತರಾಗಬೇಕು ಇಲ್ಲದಿದ್ದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಏರುಪೇರಿನಿಂದ ವ್ಯಕ್ತಿ ಸಂಕಷ್ಟಕ್ಕೆ ಸಿಲುಕುತ್ತಾನೆ. ಜೀವ ಸಂಕುಲಕ್ಕೆ ಅಪಾಯವನ್ನು ತಂದೊಡ್ಡುವ ನಶೆಯ ಅಮುಲಿನ ಮಾದಕ ವಸ್ತುಗಳನ್ನು ಯುವಕರು ಸೇವಿಸಬಾರದು. ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತದೆ ಎಂದರು.
ಶಹಾಪುರ ಠಾಣೆಯ ಪಿ.ಎಸ್.ಐ ಶ್ಯಾಮಸುಂದರ ನಾಯಕ ಮಾತನಾಡಿ, ಮಾದಕ ವಸ್ತುಗಳ ಉಪಯೋಗ ಸಾಮಾನ್ಯವಾಗಿ ಪ್ರಪಂಚಾದ್ಯಂತ ಕಂಡುಬರುವ ಒಂದು ದೊಡ್ಡ ಪಿಡುಗು . ಇದು ಗಂಡು – ಹೆಣ್ಣು , ಬಡವ – ಶ್ರೀಮಂತ ಎನ್ನುವ ಭೇದವಿಲ್ಲದೆ ಎಲ್ಲೆಡೆಯೂ ಕಂಡುಬರುತ್ತದೆ. ಯುವಕರು ಮೊದಲು ಖುಷಿಗಾಗಿ ಮಾದಕ ವಸ್ತುಗಳನ್ನು ಸೇವಿಸಿ ನಂತರ ಅದರ ವ್ಯಸನಿಗಳಾಗುತ್ತಿದ್ದಾರೆ. ಕ್ಷಣಿಕ ಸುಖಕ್ಕಾಗಿ ಯುವಕರು ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳದೆ ಚಟದಿಂದ ದೂರವಿರಬೇಕು ಎಂದರು. ಶಾಲೆಯ ಮುಖ್ಯಗುರು ಟಿ.ಪಿ. ಧೋತ್ರೆ, ಪ್ಯಾನಲ್ ವಕೀಲರಾದ ಮಲ್ಲಪ್ಪ ಕುರಿ, ಸಿದ್ದಪ್ಪ ಪಸ್ಪೂಲ್, ಜೈಲಾಲ ತೋಟದಮನೆ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.--
29ವೈಡಿಆರ್2 : ಶಹಾಪುರದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಶನಿವಾರ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸರ್ಕಾರಿ ಅಭಿಯೋಜಕಿ ದಿವ್ಯಾರಾಣಿ ನಾಯಕ ಸುರಪುರ ಉದ್ಘಾಟಿಸಿದರು.