ಡ್ರಗ್ಸ್ ವಿರುದ್ಧ ಪೊಲೀಸ್ ಇಲಾಖೆಯ ‘ಸಮರ’ಕ್ಕೆ ಇದೀಗ ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲೀಕರ ಸಂಘ ಕೈಜೋಡಿಸಿದ್ದು, ಎಲ್ಲ ಖಾಸಗಿ ಬಸ್‌ಗಳಲ್ಲಿ ಜಾಗೃತಿಯ ಸ್ಟಿಕ್ಕರ್ ಅಳವಡಿಸಲು ತೀರ್ಮಾನಿಸಿದೆ.
ಮಂಗಳೂರು: ಡ್ರಗ್ಸ್ ವಿರುದ್ಧ ಪೊಲೀಸ್ ಇಲಾಖೆಯ ‘ಸಮರ’ಕ್ಕೆ ಇದೀಗ ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲೀಕರ ಸಂಘ ಕೈಜೋಡಿಸಿದ್ದು, ಎಲ್ಲ ಖಾಸಗಿ ಬಸ್‌ಗಳಲ್ಲಿ ಜಾಗೃತಿಯ ಸ್ಟಿಕ್ಕರ್ ಅಳವಡಿಸಲು ತೀರ್ಮಾನಿಸಿದೆ. ಅಲ್ಲದೆ ಪೊಲೀಸ್ ಇಲಾಖೆ, ರೋಶನಿ ನಿಲಯ ವಿದ್ಯಾಸಂಸ್ಥೆ ಸಹಯೋಗದಲ್ಲಿ ಜ.27ರಂದು ಮಂಗಳೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಮಾದಕ ದ್ರವ್ಯ ವಿರುದ್ಧ ಜನಜಾಗೃತಿ (ಬೀದಿ ನಾಟಕ) ಕಾರ್ಯಕ್ರಮ ಹಮ್ಮಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲೀಕರ ಸಂಘ ಮಂಗಳೂರು ಅಧ್ಯಕ್ಷ ಅಝೀಝ್ ಪರ್ತಿಪಾಡಿ, ಮಂಗಳೂರು ಕೇಂದ್ರ ಬಸ್ ನಿಲ್ದಾಣದಿಂದ ಆರಂಭಗೊಂಡು ಲಾಲ್‌ಬಾಗ್, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ ಗಡಿ ಭಾಗದ ಬಸ್ ನಿಲ್ದಾಣಗಳಲ್ಲಿ ಈ ಜಾಗೃತಿ ಕಾರ್ಯ ನಡೆಸಲಾಗುವುದು. ಅಲ್ಲದೆ, ಬಸ್ಸುಗಳಲ್ಲಿ ಮಾತ್ರವಲ್ಲದೆ, ಪ್ರಮುಖ ಕೇಂದ್ರಗಳಲ್ಲಿ ಜಾಗೃತಿ ಫಲಕಗಳನ್ನು ಹಾಕಲಿದ್ದೇವೆ ಎಂದು ತಿಳಿಸಿದರು.ನಗರದ ಕೆಲವು ರಸ್ತೆಗಳಲ್ಲಿ ಕಾಲೇಜು ಬಸ್ಸುಗಳನ್ನು ರಸ್ತೆಯಲ್ಲೇ ಪಾರ್ಕಿಂಗ್ ಮಾಡುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕರಾವಳಿ ವೃತ್ತದಿಂದ ಅಂಬೇಡ್ಕರ್ ಸರ್ಕಲ್‌ವರೆಗೆ ಮಾರ್ಗದ ಇಕ್ಕೆಲಗಳಲ್ಲಿ ವಾಹನ ಪಾರ್ಕಿಂಗ್ ಮಾಡುವುದು, ಫಳ್ನೀರ್ ರಸ್ತೆಯಲ್ಲಿ ಕಂಕನಾಡಿಯಿಂದ ಮಿಲಾಗ್ರಿಸ್ ಚರ್ಚ್‌ವರೆಗೆ ರಸ್ತೆ ಕಿರಿದಾಗಿದ್ದರೂ ಎರಡೂ ಕಡೆಯಿಂದ ಪಾರ್ಕ್ ಮಾಡುತ್ತಿರುವುದರಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ನಗರದ ಬಹುತೇಕ ಎಲ್ಲ ಬಸ್ ಸ್ಟಾಪ್‌ಗಳಲ್ಲಿ ರಿಕ್ಷಾ ಪಾರ್ಕ್ ಮಾಡುತ್ತಿರುವುದರಿಂದ ಬಸ್ಸುಗಳು ಸುಗಮವಾಗಿ ಸಾಗುತ್ತಿಲ್ಲ. ಹೆಚ್ಚಿನ ಕಡೆಗಳಲ್ಲಿ ಬಸ್ ಬೇಗಳು ಇಲ್ಲದಿರುವುದರಿಂದ ಬಸ್ಸುಗಳನ್ನು ನಿಲ್ಲಿಸುವುದು ಹಾಗೂ ಪ್ರಯಾಣಿಕರನ್ನು ಹತ್ತಿಳಿಸಲು ಕಷ್ಟವಾಗುತ್ತಿದೆ. ನಗರದ ಬಹುತೇಕ ರಸ್ತೆಗಳ ಬದಿಗಳಲ್ಲಿ ವಾಹನ ಪಾರ್ಕಿಂಗ್ ಮಾಡುವುದರಿಂದ ಟ್ರಾಫಿಕ್ ಜ್ಯಾಂ ಉಂಟಾಗುತ್ತಿದೆ ಎಂದು ಹೇಳಿದರು.ನಗರದ ಕೇಂದ್ರ ಬಸ್ ನಿಲ್ದಾಣದ ಕೊನೆಯ ಟ್ರ್ಯಾಕ್‌ನಲ್ಲಿ ಮೀನು ಒಣಗಲು ಹಾಕುವುದು, ಒಳಗಡಿ ಅನಧಿಕೃತವಾಗಿ ಹಲವು ಗೂಡಂಗಡಿಗಳು ಇದ್ದು, ಬಸ್ಸುಗಳನ್ನು ಒಳಗೆ ತರಲು ಹಾಗೂ ಹೊರಗೆ ಹೋಗಲು ಅಡಚಣೆಯಾಗಿದೆ. ಪುಟ್ ಪಾತ್‌ಗಳಲ್ಲಿ ಗೂಡಂಗಡಿಗಳೇ ತುಂಬಿಕೊಂಡಿದ್ದು ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ ಎಂದು ಅಝೀಝ್ ಪರ್ತಿಪಾಡಿ ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್, ಉಪಾಧ್ಯಕ್ಷ ಕೆ. ರಾಮಚಂದ್ರ ನಾಯ್ಕ್, ಜತೆ ಕಾರ್ಯದರ್ಶಿ ರಾಜೇಶ್ ಟಿ. ಇದ್ದರು.
ನಿಮಿಷಕ್ಕೊಂದು ಬಸ್ಸು ಇರುವಲ್ಲೇ ಸರ್ಕಾರಿ ಬಸ್ಸು!
ದ.ಕ. ಜಿಲ್ಲೆಯ ಖಾಸಗಿ ಬಸ್ಸು ಸಂಚಾರ ವ್ಯವಸ್ಥೆಗೆ 110 ವರ್ಷಗಳ ಸುದೀರ್ಘ ಇತಿಹಾಸವಿದ್ದು, ಶಿಸ್ತಿನ ಕಾರ್ಯ ಚಟುವಟಿಕೆಗಳಿಂದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಖಾಸಗಿ ಬಸ್ಸುಗಳು ನಿಮಿಷಕ್ಕೊಮ್ಮೆ ಇರುವ ರೂಟ್‌ಗಳಲ್ಲೇ ಕೆಎಸ್ಸಾರ್ಟಿಸಿ ಬಸ್ಸುಗಳನ್ನು ಹಾಕುತ್ತಿದ್ದು, ಅನಾರೋಗ್ಯಕರ ಪೈಪೋಟಿ ಸೃಷ್ಟಿಯಾಗಿದೆ. ಕೊರೋನಾ ಬಳಿಕ ಖಾಸಗಿ ಬಸ್ಸು ಮಾಲೀಕರು ತೀವ್ರ ಸಂಕಷ್ಟದಲ್ಲಿದ್ದು, ವಾಹನ ವಿಮೆ, ತೆರಿಗೆ ಏರಿಕೆಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ಕೆಎಸ್ಸಾರ್ಟಿಸಿ ಅನಾರೋಗ್ಯಕರ ಪೈಪೋಟಿ ಮಾಡುವುದಕ್ಕಿಂತ ಬಸ್ಸು ಸಂಚಾರವೇ ಇಲ್ಲದ ಕುಗ್ರಾಮಗಳಿಗೆ ಬಸ್ ಹಾಕುವ ನಿಟ್ಟಿನಲ್ಲಿ ಯೋಜಿಸಬೇಕು ಎಂದು ಅಝೀಝ್ ಪರ್ತಿಪಾಡಿ ಒತ್ತಾಯಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.