ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಆಧುನಿಕತೆಯನ್ನು ರೂಢಿಸಿಕೊಂಡ ನಾವೆಲ್ಲರೂ ನಮ್ಮ ಬದುಕನ್ನು ಕಟ್ಟಿಕೊಂಡಿದ್ದೇವೆ. ದಿನದ 24ಗಂಟೆಗಳ ಕಾಲವೂ ಜಂಜಾಟದಿಂದ ಬದುಕುತ್ತಿದ್ದೇವೆ. ನಮ್ಮ ಎಲ್ಲಾ ಆಸೆ, ಆಕಾಂಕ್ಷಿಗಳಿಗೆ ಕೊನೆಯೇ ಇಲ್ಲವಾಗಿದೆ, ಜತೆಯಲ್ಲಿ ನೆಮ್ಮೆದಿಯೂ ದೂರವಾಗಿದೆ. ನಾವೆಲ್ಲರೂ ಭಕ್ತಿ, ಶ್ರದ್ಧೆಯಿಂದ ಶಿವನನ್ನು ಧ್ಯಾನಿಸಿ ಬದುಕಿನಲ್ಲಿ ನೆಮ್ಮದಿಯನ್ನು ಕಾಣಬೇಕು. ಧಾರ್ಮಿಕ ಕಾರ್ಯಕ್ರಮಗಳು ಮಾನವ ಕಲ್ಯಾಣಕ್ಕಾಗಿಯೇ ಮೀಸಲಿವೆ ಎಂದು ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದರು.

ನಗರದ ಹಳೇಟೌನ್‌ನ ಹೂವಿನ ವ್ಯಾಪಾರಿ ಜಗದೀಶ್ ಮತ್ತು ಕುಟುಂಬ ವರ್ಗ ಹಮ್ಮಿಕೊಂಡಿದ್ದ ಇಷ್ಟಲಿಂಗ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರತಿ ವರ್ಷವೂ ಇಲ್ಲಿಗೆ ಭೇಟಿ ನೀಡಿ, ಶಿವನನ್ನು ಧ್ಯಾನಿಸುವ ಕಾರ್ಯ ನಿರಂತರವಾಗಿ ನಡೆಯುತ್ತಾ ಬಂದಿದೆ. ವ್ಯಾಪಾರ, ವ್ಯವಹಾರಗಳ ಜೊತೆಗೆ ನಮ್ಮಲ್ಲಿರುವ ಅಜ್ಞಾನಕ್ಕೆ ಜ್ಞಾನದ ಸ್ಪರ್ಶವಾಗಬೇಕು. ಆ ಜ್ಞಾನದ ಸ್ಪರ್ಶವನ್ನು ನಾವು ಶಿವನ ಆರಾಧನೆಯಲ್ಲೇ ಪಡೆಯಬೇಕು. ಶಿವ ಎಲ್ಲರ ಕಷ್ಟ, ಸುಖಗಳ ಬಗ್ಗೆ ಮಾರ್ಗತೋರುವ ಶಕ್ತಿ, ಸಾಮರ್ಥ್ಯ ಹೊಂದಿದ್ದಾನೆ. ಎಲ್ಲಿಯ ತನಕ ನಾವು ನಮ್ಮಲ್ಲಿರುವ ದಾರ್ಶನಿಕತೆಯನ್ನು ಹೊಂದಿರುತ್ತೇವೆಯೋ ಅಲ್ಲಿಯ ತನಕ ನಮಗೆ ಭಗವಂತನ ಅನುಗ್ರಹವಾಗುತ್ತಲೇ ಇರುತ್ತದೆ.

ನಮ್ಮ ದೈನದಿನ ವ್ಯವಹಾರಗಳಲ್ಲಿ ಶಿವನನ್ನು ಧ್ಯಾನಿಸುವುದನ್ನು ಮರೆಯಬಾರದು. ಎಲ್ಲಾ ಸಂದರ್ಭದಲ್ಲೂ ನಾವು ದೇವರ ಕೃಪೆಯನ್ನು ಪಡೆಯುವತ್ತ ಹೆಜ್ಜೆ ಇಡಬೇಕು. ಪೂಜಾ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ಭಕ್ತರಿಗೆ ಸ್ವಾಮೀಜಿ ತೀರ್ಥ, ಪ್ರಸಾದ ವಿನಿಯೋಗಿಸಿ, ಎಲ್ಲರೂ ಧಾರ್ಮಿಕ ಕಾರ್ಯಕ್ರಮಗಳ ಆರಾಧಕರಾಗಿ, ಪೋಷಕರಾಗಿ, ಪ್ರೇರಕರಾಗಿ ಕಾರ್ಯನಿರ್ವಹಿಸಿ. ನಾವು ನಂಬಿದ ಧರ್ಮದಿಂದ ಮಾತ್ರ ನಮ್ಮ ಉದ್ಧಾರ ಸಾಧ್ಯವೆಂದರು.


ಪೂಜಾ ಕಾರ್ಯದಲ್ಲಿ ಅರುಣಾ ಜಗದೀಶ್, ಮಹಾದೇವಿ ತಿಪ್ಪೇಸ್ವಾಮಿ, ಪಿ.ಜಗದೀಶ್, ಕಂಬಾಳಿಮಠ್, ಡಾ.ವಿಶ್ವನಾಥ, ಕೊಟ್ಟರು ರಾಧಾಸ್ವಾಮಿ, ವೀರಣ್ಣ, ವಿಶ್ವನಾಥ, ಬಾಳೆಮಂಡಿ ವೆಂಕಟೇಶ್, ಸೋಮಶೇಖರ್‌ ರೆಡ್ಡಿ, ಕೆ.ಎಂ.ಕೊಟ್ರೇಶ್, ಮಹೇಶ್, ಎಚ್.ವಿ.ಪ್ರಸನ್ನ ಕುಮಾರ್ (ಹೊಸಮನೆ ಸ್ವಾಮಿ), ಕೋಟೆ ಚಂದ್ರಶೇಖರ್, ಬಸಣ್ಣ, ಶಿವಕುಮಾರ್, ಆರ್.ಜಗದೀಶ್, ಹೂವಿನ ತಿಪ್ಪೇಸ್ವಾಮಿ ಮುಂತಾದವರು ಪೂಜಾಕಾರ್ಯದಲ್ಲಿ ಭಾಗವಹಿಸಿದ್ದರು.