ರೈಲಿನಲ್ಲಿ ಜಿಲ್ಲೆಗೆ ಮಾದಕ ವಸ್ತುಗಳ ರವಾನೆ: ಎಸ್‌ಪಿ ಮಲ್ಲಿಕಾರ್ಜುನ

KannadaprabhaNewsNetwork |  
Published : Oct 29, 2025, 01:15 AM IST
೨೭ಕೆಎಂಎನ್‌ಡಿ-೩ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ನಾರ್ಕೋ ಸಮನ್ವಯ ಸಮಿತಿ ಸ‘ೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. | Kannada Prabha

ಸಾರಾಂಶ

ಸಕ್ತ ಸಾಲಿನಲ್ಲಿ ರೈಲ್ವೆ ಇಲಾಖೆ ಮೂಲಕ ೨ ಪ್ರಕರಣ ದಾಖಲಿಸಿಕೊಂಡು ಒಟ್ಟು ೪ ಕೆ.ಜಿ. ೯೦೦ ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ವರ್ಷ ಮಾದಕ ವ್ಯಸನಿಗಳ ವಿರುದ್ಧ ೬೫ ಪ್ರಕರಣ ದಾಖಲಾಗಿದೆ, ಅಬಕಾರಿ ಇಲಾಖೆ ೨೧ ಪ್ರಕರಣ ದಾಖಲು ಮಾಡಿ ೨೨ ಕೆ.ಜಿ ಗಾಂಜಾವನ್ನು ವಶಕ್ಕೆ ತೆಗೆದುಕೊಂಡು ೬ ವಾಹನಗಳನ್ನು ಜಪ್ತಿ ಮಾಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಗೆ ಮಾದಕ ವಸ್ತುಗಳು ರೈಲಿನ ಮೂಲಕ ರವಾನೆಯಾಗುತ್ತಿದ್ದು, ರೈಲ್ವೆ ಇಲಾಖೆ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಆಯೋಜಿಸಿದ್ದ ಜಿಲ್ಲಾ ನಾರ್ಕೋ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ರೈಲ್ವೆ ಇಲಾಖೆ ಮೂಲಕ ೨ ಪ್ರಕರಣ ದಾಖಲಿಸಿಕೊಂಡು ಒಟ್ಟು ೪ ಕೆ.ಜಿ. ೯೦೦ ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದರು.

ಈ ವರ್ಷ ಮಾದಕ ವ್ಯಸನಿಗಳ ವಿರುದ್ಧ ೬೫ ಪ್ರಕರಣ ದಾಖಲಾಗಿದೆ, ಅಬಕಾರಿ ಇಲಾಖೆ ೨೧ ಪ್ರಕರಣ ದಾಖಲು ಮಾಡಿ ೨೨ ಕೆ.ಜಿ ಗಾಂಜಾವನ್ನು ವಶಕ್ಕೆ ತೆಗೆದುಕೊಂಡು ೬ ವಾಹನಗಳನ್ನು ಜಪ್ತಿ ಮಾಡಿದೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಯುವಜನರು ಮಾದಕ ವಸ್ತುಗಳಿಗೆ ದಾಸರಾಗಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳು ಜಿಲ್ಲೆಗೆ ಬಾರದಂತೆ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ತಾಕೀತು ಮಾಡಿದರು.

ಕಳೆದ ಬಾರಿ ನಡೆದ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲೂ ಸುತ್ತಲಿನ ನೂರು ಮೀಟರ್ ವ್ಯಾಪ್ತಿಯನ್ನು ತಂಬಾಕು ಮುಕ್ತ ವ್ಯಾಪ್ತಿ ಎಂದು ನಾಮಫಲಕ ಅಳವಡಿಸಲು ಸೂಚಿಸಲಾಗಿತ್ತು, ಇದುವರೆಗೆ ಎಷ್ಟು ಶಾಲೆಗಳಲ್ಲಿ ಫಲಕ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಬೇಕು ಎಂದರು.

ಶಾಲೆಗಳಲ್ಲಿ ಮಕ್ಕಳು ಮಾದಕ ಚಟಗಳಿಗೆ ಬಲಿಯಾಗುತ್ತಿದ್ದಾರೆ, ಶಿಕ್ಷಣ ಇಲಾಖೆ ಇದರ ಕುರಿತಾಗಿ ಹೆಚ್ಚಿನ ಗಮನ ಹರಿಸಬೇಕು ಹಾಗೂ ಮಾದಕ ವ್ಯಸನಕ್ಕೆ ಬಲಿಯಾಗಿರುವ ಮಕ್ಕಳ ಮನಪರಿವರ್ತನೆ ಮಾಡಬೇಕು. ಕಳೆದ ಸಭೆಯಲ್ಲಿ ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಶಾಲಾ ಕಾಲೇಜು ಮಕ್ಕಳಿಂದ ಪತ್ರ ಅಭಿಯಾನ ಮಾಡಲು ಸೂಚನೆ ನೀಡಲಾಗಿತ್ತು ಅದರಂತೆ ೧೧೯ ಕಾಲೇಜುಗಳ ಮಕ್ಕಳು ಸದರಿ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ಶಾಲಾ ಮಕ್ಕಳನ್ನು ಇದರಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಪತ್ರ ಅಭಿಯಾನವನ್ನು ಯಶಸ್ವಿಗೊಳಿಸಿ ಎಂದರು.

ಸಾಮಾನ್ಯವಾಗಿ ಅರಣ್ಯ ಪ್ರದೇಶಗಳಲ್ಲಿ ಗಾಂಜಾ ಬೆಳೆಯನ್ನು ಬೆಳೆಯುತ್ತಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಅರಣ್ಯ ಪ್ರದೇಶಗಳಲ್ಲಿ ಪರೀಶೀಲನೆ ನಡೆಸಬೇಕು ಕೆಲವು ಕಡೆ ತಾವು ಬೆಳೆದ ಬೆಳೆಗಳ ಮಧ್ಯದಲ್ಲಿ ಯಾರಿಗೂ ತಿಳಿದಿದಂತೆ ಗಾಂಜಾ ಗಿಡಗಳನ್ನು ಬೆಳೆಸಿರುವ ಸಾಧ್ಯತೆಗಳಿರುತ್ತವೆ. ಅಧಿಕಾರಿಗಳು ಬೆಳೆ ಸಮೀಕ್ಷೆಗೆ ಹೋದಾಗ ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನಡೆಸಬೇಕು ಎಂದರು.

ಗಾಂಜಾ ಬೆಳೆ ಬಗ್ಗೆ ಜಾಗೃತಿ ಮೂಡಿಸಿ:

ಗಾಂಜಾ ಬೆಳೆ ಬೆಳೆಯುವುದು ಎಷ್ಟು ಅಪಾಯಕಾರಿ ಹಾಗೂ ಗಾಂಜಾ ಬೆಳೆ ಬೆಳೆಯುವುದರಿಂದ ಎದುರಿಸಬೇಕಾದ ಪರಿಣಾಮಗಳ ಕುರಿತು ರೈತ ಸಂಪರ್ಕ ಕೇಂದ್ರಗಳಲ್ಲಿ ಪೋಸ್ಟರ್ ಅಂಟಿಸಿ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳ ಹಾಸ್ಟೆಲ್‌ಗಳಲ್ಲಿ ಮಾದಕ ವಸ್ತುಗಳು ಕಂಡುಬರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಸರಾಸರಿ ೧೦೦೦ ಮೆಡಿಕಲ್‌ಗಳಿದ್ದು ವೈದ್ಯರ ಶಿಫಾರಸು ಇಲ್ಲದೆ ಔಷಧಿಗಳನ್ನು ನೀಡುವಂತಿಲ್ಲ, ಒಂದು ವೇಳೆ ವೈದ್ಯರ ಶಿಫಾರಸು ಇಲ್ಲದೆ ನಿಷೇಧಿತ ಔಷಧಿಗಳನ್ನು ನೀಡಿದರ ಅಂತಹ ಮೆಡಿಕಲ್ ಶಾಪ್‌ಗಳ ಮೇಲೆ ಕಾನೂನು ಕ್ರಮ ಜಾರಿಗೊಳಿಸಲಾಗುವುದು ಎಂದು ಎಚ್ಚರಿಸಿದರು.

ನಂತರ ತಂಬಾಕು ಮುಕ್ತ ಯುವ ಅಭಿಯಾನ ೩.೦ಗೆ ಪ್ರಮಾಣ ವಚನವನ್ನು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅಧಿಕಾರಿಗಳಿಗೆ ಬೋಧಿಸಿದರು. ಸಭೆಯಲ್ಲಿ ಜಿಲ್ಲಾ ಅಬಕಾರಿ ಉಪ ಆಯುಕ್ತ ನಾಗಶಯನ, ಜಿಲ್ಲಾ ತಂಬಾಕು ನಿಯಂತ್ರಣಾಕಾರಿ ತಿಮ್ಮರಾಜು, ಆರ್‌ಸಿಎಚ್ ಅಧಿಕಾರಿ ಡಾ.ಅಶ್ವತ್ಥ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು