ಮಾದಕ ವಸ್ತುಗಳಿಗೆ ವಿದ್ಯಾರ್ಥಿಗಳ ಬದುಕು ಹಾಳು

KannadaprabhaNewsNetwork |  
Published : Feb 19, 2026, 01:45 AM IST
18ಎಚ್ಎಸ್ಎನ್3ಎ : ಜಾಥಾದಲ್ಲಿ ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು. | Kannada Prabha

ಸಾರಾಂಶ

ಗಾಂಜಾ, ಡಗ್ಸ್ ಸೇರಿದಂತೆ ವಿವಿಧ ಮಾದಕ ವಸ್ತುಗಳಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳ ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಸಂಸದರಾದ ಶ್ರೇಯಸ್ ಪಟೇಲ್ ತಿಳಿಸಿದರು. ಜಾಗೃತಿ ಜಾಥಾ ಮತ್ತು ವಾಕಥಾನ್ ಕಾರ್ಯಕ್ರಮವು ಯುವಜನತೆಗೆ ಸ್ಫೂರ್ತಿದಾಯಕ ಸಂದೇಶ ನೀಡಿತು. ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಿ “ನಶೆ ಬಿಡಿ, ಆರೋಗ್ಯ ಹಿಡಿ” ಎಂಬ ಘೋಷಣೆ ಮೊಳಗಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಗಾಂಜಾ, ಡಗ್ಸ್ ಸೇರಿದಂತೆ ವಿವಿಧ ಮಾದಕ ವಸ್ತುಗಳಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳ ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಸಂಸದರಾದ ಶ್ರೇಯಸ್ ಪಟೇಲ್ ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಬುಧವಾರ ನಶಾಮುಕ್ತ ಸಮಾಜ ನಿರ್ಮಾಣದ ಮಹತ್ವ ಸಾರುವ ಉದ್ದೇಶದಿಂದ ಆಯೋಜಿಸಲಾಗಿದ್ದ ಜಾಗೃತಿ ಜಾಥಾ ಮತ್ತು ವಾಕಥಾನ್ ಕಾರ್ಯಕ್ರಮವು ಯುವಜನತೆಗೆ ಸ್ಫೂರ್ತಿದಾಯಕ ಸಂದೇಶ ನೀಡಿತು. ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಿ “ನಶೆ ಬಿಡಿ, ಆರೋಗ್ಯ ಹಿಡಿ” ಎಂಬ ಘೋಷಣೆ ಮೊಳಗಿಸಿದರು.

ಸಭಾ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿ ಬಿ.ಸಿ. ಭಗವಾನ್ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಪದವಿ ಪಡೆಯಲು ಓದುತ್ತಿಲ್ಲ, ಆರೋಗ್ಯವಂತ, ಜವಾಬ್ದಾರಿಯುತ ನಾಗರಿಕರಾಗಿ ದೇಶ ನಿರ್ಮಾಣಕ್ಕೆ ತಯಾರಾಗುತ್ತಿದ್ದಾರೆ ಎಂದು ಹೇಳಿದರು. ದೇಶದಲ್ಲಿ ಡ್ರಗ್ಸ್ ಸೇವನೆ ಭಯಾನಕವಾಗಿ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಕೆಲವು ಅಧ್ಯಯನಗಳ ಪ್ರಕಾರ ಶೇಕಡಾ ೩೦ ರಿಂದ ೪೦ರಷ್ಟು ಯುವಕರು ನಶೆಪದಾರ್ಥಗಳ ಬಳಕೆಯಲ್ಲಿ ತೊಡಗಿರುವುದು ಆತಂಕಕಾರಿ ಬೆಳವಣಿಗೆ ಎಂದರು. “ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ, ಭವಿಷ್ಯದ ಭಾರತವನ್ನು ಹೇಗೆ ಕಟ್ಟುವಿರಿ?” ಎಂದು ಪ್ರಶ್ನಿಸಿ, ನಶೆ ವಿರುದ್ಧ ಯುವಜನತೆ ತೀವ್ರ ಜಾಗೃತಿ ಹೊಂದಬೇಕು ಎಂದು ಕರೆ ನೀಡಿದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ೪೦ ಸಾವಿರಕ್ಕೂ ಹೆಚ್ಚು ಜನರನ್ನು ವಾಕಥಾನ್ ಮೂಲಕ ಜಾಗೃತಿಗೊಳಿಸಲಾಗಿದ್ದು, ಹಾಸನ ೧೦ನೇ ಜಿಲ್ಲೆಯಾಗಿ ಈ ಜಾಥಾಕ್ಕೆ ಸಾಕ್ಷಿಯಾಗಿದೆ ಎಂದರು.

ದಿವ್ಯಸಾನ್ನಿಧ್ಯ ವಹಿಸಿದ್ದ ಪುಷ್ಪಗಿರಿ ಮಠದ ಮಠಾಧೀಶರಾದ ಶ್ರೀ ಸೋಮಶೇಖರ ಮಹಾಸ್ವಾಮೀಜಿ ಅವರು ಆಶೀರ್ವಚನ ನೀಡಿ, ವ್ಯಕ್ತಿಯ ಆರೋಗ್ಯದಷ್ಟೇ ದೇಶದ ಆರೋಗ್ಯವೂ ಅತಿ ಮುಖ್ಯ ಎಂದು ತಿಳಿಸಿದರು. “ನನ್ನ ಆರೋಗ್ಯದ ಜೊತೆಗೆ ಇತರರ ಆರೋಗ್ಯವನ್ನೂ ಕಾಪಾಡುತ್ತೇನೆ” ಎಂಬ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಹೇಳಿದರು. ಇಂದಿನ ಕಾಲಘಟ್ಟದಲ್ಲಿ ೮ ರಿಂದ ೧೦ ವರ್ಷದ ಮಕ್ಕಳೇ ಡ್ರಗ್ಸ್‌ಗೆ ಬಲಿಯಾಗುತ್ತಿರುವುದು ಸಮಾಜದ ಮುಂದೆ ನಿಂತಿರುವ ದೊಡ್ಡ ಯಕ್ಷಪ್ರಶ್ನೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಭಗವಂತ ಕೊಟ್ಟ ಶಕ್ತಿಯನ್ನು ಸಮಾಜದ ಒಳಿತಿಗೆ ಬಳಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು. ನಶಾಮುಕ್ತ ಕರ್ನಾಟಕ, ಶ್ರೇಷ್ಠ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.ಸಂಸದ ಶ್ರೇಯಸ್ ಎಂ. ಪಟೇಲ್ ಮಾತನಾಡಿ, ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳ ಬದುಕನ್ನೇ ಹಾಳು ಮಾಡುತ್ತಿರುವುದು ನೋವಿನ ಸಂಗತಿ ಎಂದು ಹೇಳಿದರು. ಈ ಕುರಿತು ಹಲವು ವೇದಿಕೆಗಳಲ್ಲಿ ಗಮನಸೆಳೆದಿದ್ದೇನೆ. ಮುಂದಿನ ಪೀಳಿಗೆಗೆ ಆರೋಗ್ಯಕರ, ಸುರಕ್ಷಿತ ವಾತಾವರಣ ನಿರ್ಮಾಣ ಮಾಡುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದು ಅಭಿಪ್ರಾಯಪಟ್ಟರು.ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿ, “ಸ್ವಾಸ್ಥ್ಯ ಭಾರತವೇ ಶ್ರೇಷ್ಠ ಭಾರತ” ಎಂದು ಹೇಳಿ, ಪ್ರತಿಯೊಂದು ಕುಟುಂಬವೂ ನಶಾಮುಕ್ತವಾಗಿರಬೇಕು ಎಂಬ ಸಂಕಲ್ಪ ಕೈಗೊಳ್ಳಬೇಕು ಎಂದು ತಿಳಿಸಿದರು. ದೇಶವನ್ನು ದುರ್ಬಲಗೊಳಿಸಲು ಶತ್ರುಗಳು ಯುದ್ಧ ಮಾಡಬೇಕಾಗಿಲ್ಲ; ನಶೆ ಹಬ್ಬಿಸಿದರೆ ಸಾಕು ಎಂಬ ಎಚ್ಚರಿಕೆ ನೀಡಿದರು. ಜೀವನದಲ್ಲಿ ಸಾವು ಅನಿವಾರ್ಯ ಎಂಬ ಸತ್ಯವನ್ನು ಮರೆಯಬಾರದು; ಜೀವಿತಾವಧಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದರು. ಅಂಗಾಂಗ ದಾನದ ಮಹತ್ವವನ್ನು ವಿವರಿಸಿ, ಒಬ್ಬರ ಅಂಗಾಂಗ ದಾನದಿಂದ ಎಂಟು ಜನರ ಜೀವ ಉಳಿಯಬಹುದು ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಬ್ಬಗಳ ಸಂದರ್ಭ ಅಂಗಾಂಗ ದಾನ ಮಾಡಿದ ಕುಟುಂಬಗಳನ್ನು ಸನ್ಮಾನಿಸಲಾಗುವುದು ಎಂದರು.ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ನಶಾಮುಕ್ತ ಹಾಸನ ನಿರ್ಮಾಣಕ್ಕೆ ಯುವಕರು ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಕರೆ ನೀಡಿದರು. “ಮತ್ತೊಬ್ಬರ ಜೀವಕ್ಕೆ ನಾವು ಉಸಿರಾಗಬಹುದು” ಎಂಬ ಸಂದೇಶದೊಂದಿಗೆ ಅಂಗಾಂಗ ದಾನ ಅತ್ಯುತ್ತಮ ದಾನವೆಂದು ಹೇಳಿದರು. ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಯನ್ನು ಕಟ್ಟುನಿಟ್ಟಾಗಿ ತಡೆಯಲು ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು. ಅಂಗಾಂಗ ದಾನ ಎಂದರೇ ಒಂದು ವಿಶೇಷವಾದ ದಾನ. ಮತ್ತೊಬ್ಬರ ಜೀವಕ್ಕೆ ನೀವು ಉಸಿರಾಗಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞೆ ಕೈಗೊಂಡರು. ಸಮಗ್ರ ಆರೋಗ್ಯ, ಶಿಸ್ತುಬದ್ಧ ಜೀವನಶೈಲಿ ಮತ್ತು ಜಾಗೃತಿಯ ಮೂಲಕವೇ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ ಎಂಬ ಸಂದೇಶ ಜಾಥಾದ ಮೂಲಕ ನಗರದಲ್ಲಿ ಸಂಚರಿಸಿ ಸ್ಪಷ್ಟವಾಗಿ ಹೊರಹೊಮ್ಮಿತು. ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಇದೇ ವೇಳೆ ಎನ್‌ಸಿಬಿ ಬೆಂಗಳೂರು ವಲಯದ ಇನ್ಸ್‌ಪೆಕ್ಟರ್‌ ವಿಕಾಸ್ ಸಿಂಗ್ ಹಾಗೂ ದಿಶಾ ಭೋದ್ ಫೌಂಡೇಶನ್ ನಿರ್ದೇಶಕ ಧೃವಕುಮಾರ್, ಎಎಸ್ಪಿ ಶ್ರೀನಿಧಿ, ಸುರೇಶ್, ವಸಂತಶೆಟ್ಟಿ, ಡಾ. ರಾಮನಾಥ್, ಡಾ. ನಿತಿನ್, ಡಾ. ಶಶಿಕುಮಾರ್ ಡಾ. ಕಿರಣ್ ಕೆಂಪೇಗೌಡ ಹಾಗೂ ಮಾಜಿ ಮೇಯರ್ ಗಿರೀಶ್ ಚನ್ನವೀರಪ್ಪ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿನಾಕಲಗೂಡು ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ಯದಂಗಡಿಯಲ್ಲಿದ್ದ ಬಾಲಕಿ ರಕ್ಷಣೆ: ಮಾಲೀಕನ ವಿರುದ್ಧ ಕೇಸ್‌
ಭಕ್ತ ಸಮೂಹದೊಂದಿಗೆ ವಿಜೃಂಭಣೆಯಿಂದ ಜರುಗಿದ ಸವದತ್ತಿಶ್ರೀ ಎಲ್ಲಮ್ಮ ದೇವಿ ಜಾತ್ರೆ