ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, 3-4 ವರ್ಷದಿಂದ ಬಾಕಿ ಇರುವ ಹಣ ನೀಡಲು ಕಮೀಷನ್, ಪರ್ಸೆಂಟೇಜ್ ಕೇಳಲಾಗುತ್ತಿದೆ. ಇಂತಿಷ್ಟೇ ಪರ್ಸೆಂಟೇಜ್ ಅಂತೇನೂ ಹೇಳಲಿಕ್ಕಾಗುವುದಿಲ್ಲ ಎಂದರು.
ಕೆಂಪಯ್ಯ ಇದೇ ರೀತಿ ಹೇಳಿ, ಭಾರೀ ಸಮಸ್ಯೆ ಎದುರಿಸಿದ್ದರು. ಸಾವಿರಾರು ಗುತ್ತಿಗೆದಾರರ ಹಿತದೃಷ್ಟಿಯಿಂದ ಇಷ್ಟೇ ಕಮೀಷನ್, ಪರ್ಸೆಂಟೇಜ್ ಅಂತಾ ನಾವು ಹೇಳುವುದಿಲ್ಲ. ಆದರೆ, ಕಳೆದ ಸರ್ಕಾರಕ್ಕಿಂತಲೂ ಹೆಚ್ಚಾಗಿದೆ ಅಂತಷ್ಟೇ ಹೇಳಬಹುದು ಎಂದು ತಿಳಿಸಿದರು.ಮೂರು ವರ್ಷದವರೆಗೆ ಹಣಕ್ಕಾಗಿ ಕಾಯುವ ಸಣ್ಣ ಪುಟ್ಟ ಕಾಮಗಾರಿಗಳನ್ನಷ್ಟೇ ರಾಜ್ಯದ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ. ಸಿದ್ಧವಾದ ಅನುದಾನದ ಕಾಮಗಾರಿಗಳ ಪ್ಯಾಕೇಜ್‌ಗಳನ್ನು ಹೊರ ರಾಜ್ಯದ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ ಎಂದು ದೂರಿದರು.
ಹಿಂದೆ 2013-18ರಲ್ಲಿ ಇದೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಾಲ ತಂದು, ಗುತ್ತಿಗೆದಾರರ ಬಾಕಿ ನೀಡಿದ್ದರು. ಆಗ ಗುತ್ತಿಗೆದಾರರಿಗೆ ಸ್ಪಂದಿಸುತ್ತಿದ್ದ ಸಿದ್ದರಾಮಯ್ಯನವರು ಈಗ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಒಂದೇ ಒಂದು ಅಧಿಕೃತ ಸಭೆಯನ್ನೂ ಗುತ್ತಿದಾರರೊಂದಿಗೆ ಈರೆಗೆ ಮಾಡಿಲ್ಲ ಎಂದರು.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಬಾಕಿ ಉಳಿಸಿಕೊಂಡ 37 ಸಾವಿರ ಕೋಟಿ ರು.ಗಳನ್ನು ಒಂದೇ ಕಂತಿನಲ್ಲಿ ಬಿಡುಗಡೆಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾ.5ರಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಆರ್.ಮಂಜುನಾಥ ತಿಳಿಸಿದರು.
ಕೆಲಸ ಮಾಡಿದ ಬಾಕಿ ಹಣವನ್ನು ನಾವು ಕೇಳುತ್ತಿದ್ದೇವೆಯೇ ಹೊರತು, ಬಡ್ಡಿ ಮತ್ತೇ ಏನನ್ನೋ ಕೇಳುತ್ತಿಲ್ಲ. ಬಾಕಿ ಕೇಳಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದಿನ ಸರ್ಕಾರದ್ದೆಂದು ಹೇಳಿಕೆ ನೀಡುತ್ತಾರೆ. ಅಧಿಕಾರಕ್ಕೆ ಬಂದ ನಂತರ ಆ ಸರ್ಕಾರದ್ದು, ಈ ಸರ್ಕಾರದ್ದು ಅಂತೆಲ್ಲಾ ಹೇಳಲಿಕ್ಕೆ ಬರುವುದಿಲ್ಲ. ಈವರೆಗೆ ಸಿಎಂ ಸಿದ್ದರಾಮಯ್ಯ ಒಂದೇ ಒಂದು ಅಧಿಕೃತ ಸಭೆ ಸಹ ಕರೆದಿಲ್ಲ ಎಂದು ದೂರಿದರು.
ಸಂಘದ ಪದಾಧಿಕಾರಿಗಳಾದ ಲಕ್ಷ್ಮೀಪತಿ, ಸುಬ್ರಹ್ಮಣ್ಯ ದೇವನಹಳ್ಳಿ, ಜಿ.ಆರ್.ಜಗದೀಶ, ಕೆ.ಎಸ್.ನಾಗರಾಜ, ಹೇಮಂತ, ದೇವರಾಜ ಇತರರು ಇದ್ದರು.