3 ವರ್ಷಗಳಲ್ಲಿ 1.55 ಕೋಟಿ ಮೌಲ್ಯದ ಡ್ರಗ್ಸ್ ವಶ

KannadaprabhaNewsNetwork |  
Published : Feb 26, 2026, 01:15 AM IST
1.ಐಜೂರು ಪೊಲೀಸರು ವಶ ಪಡಿಸಿಕೊಂಡ ಮಾದಕ ವಸ್ತು | Kannada Prabha

ಸಾರಾಂಶ

ರಾಮನಗರ: ಮಾದಕ ವಸ್ತುಗಳ ದಂಧೆ ವಿರುದ್ಧ ಸಮರ ಸಾರಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ಪೊಲೀಸರು ಕಳೆದ 3 ವರ್ಷಗಳಲ್ಲಿ 1.55 ಕೋಟಿ ರುಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು, 235 ಮಂದಿಯನ್ನು ಬಂಧಿಸಿದ್ದಾರೆ

ರಾಮನಗರ: ಮಾದಕ ವಸ್ತುಗಳ ದಂಧೆ ವಿರುದ್ಧ ಸಮರ ಸಾರಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ಪೊಲೀಸರು ಕಳೆದ 3 ವರ್ಷಗಳಲ್ಲಿ 1.55 ಕೋಟಿ ರುಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು, 235 ಮಂದಿಯನ್ನು ಬಂಧಿಸಿದ್ದಾರೆ.

ಜಿಲ್ಲೆಯಲ್ಲಿ 2023ರಿಂದ 2025 ಹಾಗೂ 2026ರ ಫೆಬ್ರವರಿ 24ರವರೆಗೆ ಮಾದಕವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯಡಿ(ಎನ್‌ಡಿಪಿಎಸ್‌) ಪೊಲೀಸರು 206 ಪ್ರಕರಣ ದಾಖಲಿಸಿದ್ದಾರೆ. ಇದು ರಾಜಧಾನಿ ಸಮೀಪದಲ್ಲಿರುವ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಘಮಲಿನ ಅಮಲು ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ವರ್ಷದಿಂದ ವರ್ಷಕ್ಕೆ ಪ್ರಕರಣಗಳು ಹೆಚ್ಚಳ:

2024ನೇ ವರ್ಷಕ್ಕೆ ಹೋಲಿಸಿದರೆ 2025ರಲ್ಲಿ ದಾಖಲಾಗಿರುವ ಎನ್‌ಡಿಪಿಎಸ್ ಪ್ರಕರಣಗಳ ಸಂಖ್ಯೆ ಅರ್ಧದಷ್ಟು ಹೆಚ್ಚಳ ಕಂಡಿದೆ. 2024ರಲ್ಲಿ 38 ಪ್ರಕರಣಗಳನ್ನು ದಾಖಲಿಸಿ, 38 ಮಂದಿಯನ್ನು ಬಂಧಿಸಲಾಗಿದೆ. ಸುಮಾರು 12.65 ಲಕ್ಷ ಮೌಲ್ಯದ 48 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ.

2025ರಲ್ಲಿ ಪ್ರಕರಣಗಳ ಸಂಖ್ಯೆ 66ಕ್ಕೆ ಏರಿಕೆಯಾಗಿದ್ದು, 67 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ ಸುಮಾರು 46.14 ಲಕ್ಷ ಮೌಲ್ಯದ 73 ಕೆ.ಜಿ ಗಾಂಜಾ ಹಾಗೂ 15 ಗ್ರಾಂ 1 ಮಿಲಿ ಸಿಂಥೆಟಿಕ್ ಡ್ರಗ್ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ನಿರಂತರ ಕಾರ್ಯಾಚರಣೆ ನಡುವೆಯೂ ಒಂದು ವರ್ಷದ ಅವಧಿಯಲ್ಲಿ 28 ಪ್ರಕರಣಗಳು ಹೆಚ್ಚಾಗಿವೆ.

1.55 ಕೋಟಿ ಮೌಲ್ಯ:

ಎನ್‌ಡಿಪಿಎಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ 3 ವರ್ಷ 2 ತಿಂಗಳಲ್ಲಿ ಸುಮಾರು 1.55 ಕೋಟಿ ಮೌಲ್ಯದ

165 ಕೆ.ಜಿ ಗಾಂಜಾ ಹಾಗೂ 44 ಗ್ರಾಂ 057 ಮಿಲಿ ಸಿಂಥೆಟಿಕ್ ಡ್ರಗ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಅವಧಿಯಲ್ಲಿ 234 ಮಂದಿಯನ್ನು ಬಂಧಿಸಲಾಗಿದ್ದು, ಇವರಲ್ಲಿ ಯುವಜನರೇ ಹೆಚ್ಚಾಗಿದ್ದಾರೆ.

ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಆರೋಪಿಗಳಿಂದ ವಶಪಡಿಸಿಕೊಳ್ಳುವ ಗಾಂಜಾ ಸೇರಿದಂತೆ ಇತರ ಮಾದಕ ವಸ್ತುಗಳನ್ನು 6 ತಿಂಗಳಿಗೊಮ್ಮೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಲಾಗುತ್ತಿದೆ. ಆ ಪ್ರಕಾರ ಇಲ್ಲಿವರೆಗೆ 1.30 ಕೋಟಿ ಮೌಲ್ಯದ 176 ಕೆ.ಜಿ 326 ಗ್ರಾಂ ಮಾದಕ ವಸ್ತುಗಳನ್ನು ನಾಶ ಮಾಡಲಾಗಿದೆ.

ಬಾಕ್ಸ್ ...............

ನಿರ್ಜನ ಪ್ರದೇಶಗಳೇ ಡ್ರಗ್ಸ್ ಪಾಯಿಂಟ್

ರಾಮನಗರ: ಐಜೂರು ಪೊಲೀಸರು ಬೇಧಿಸಿದ ಡ್ರಗ್ಸ್ ಜಾಲದಲ್ಲಿ ಸಿಕ್ಕಿ ಬಿದ್ದಿರುವ ಆರೋಪಿಗಳು ನಿರ್ಜನ ಪ್ರದೇಶಗಳನ್ನು ಡ್ರಗ್ಸ್ ಪಾಯಿಂಟ್ ಮಾಡಿಕೊಂಡಿದ್ದರು. ಆನ್‌ಲೈನ್‌ ಮೂಲಕ ಡ್ರಗ್ಸ್‌ಗೆ ಬೇಡಿಕೆ ಇಟ್ಟರೆ, ಈ ಆರೋಪಿಗಳು ರಾಮನಗರದವರೆಗೂ ಡ್ರಗ್ಸ್‌ ಪೂರೈಸುತ್ತಿದ್ದರು. ಬೆಂಗಳೂರಿನಿಂದ ಡ್ರಗ್ಸ್‌ ಪಡೆದು, ರಾಮನಗರದ ಅಜ್ಞಾತ ಸ್ಥಳದಲ್ಲಿ ಡ್ರಗ್ಸ್‌ ಬಿಸಾಡುತ್ತಿದ್ದರು. ಬಳಿಕ ಆರ್ಡರ್‌ ಮಾಡಿದ್ದ ಗ್ರಾಹಕರಿಗೆ ಲೊಕೇಶನ್‌ ಕಳುಹಿಸುತ್ತಿದ್ದರು. ಆ ಲೊಕೇಶನ್‌ನಲ್ಲಿ ಹುಡುಕಾಡಿ, ಡ್ರಗ್ಸ್‌ ಪಡೆಯಬೇಕಿತ್ತು. ಯುಪಿಐ ಪೇಮೆಂಟ್ ಮೂಲಕ ಹಣ ಪಡೆಯುತ್ತಿದ್ದ ಆರೋಪಿ ಸಾಕಿಲ್ ಪಾಷಾ, ನೇರವಾಗಿ ಕೇರಳದಲ್ಲಿ ತಲೆಮರೆಸಿಕೊಳ್ಳುತ್ತಿದ್ದ. ವಾರದ ಬಳಿಕ ಮತ್ತೊಂದು ಆರ್ಡರ್‌ ಪಡೆದು, ರಾಮನಗರದಲ್ಲಿ ಪ್ರತ್ಯಕ್ಷನಾಗುತ್ತಿದ್ದನು.

ಪ್ರಮುಖ ಆರೋಪಿ ಉಗಾಂಡ ಮೂಲದ ನಾನಾ ಜಾನ್ಸನ್ ಹೊರಗೆ ಬಾರದೆ ಪರದೆ ಹಿಂದೆ ಕುಳಿತು ಡ್ರಗ್ಸ್ ಪೂರೈಕೆ ಮಾಡುತ್ತಿದ್ದನು.

ಪ್ರಕರಣದ ಬಗ್ಗೆ ಸುಳಿವು ಪಡೆದ ಪೊಲೀಸರು, ಒಂದು ತಿಂಗಳ ಕಾಲ ಆರೋಪಿಗಳ ಪತ್ತೆಗಾಗಿ ಕಾದು ಕುಳಿತಿದ್ದರು. ಡ್ರಗ್ಸ್‌ಗೆ ಬೇಡಿಕೆ ಇಡುತ್ತಿದ್ದ ಗ್ರಾಹಕರನ್ನೇ ಬಳಸಿಕೊಂಡು ಪೊಲೀಸರು ಆರೋಪಿಗಳಿಗೆ ಖೆಡ್ಡಾ ತೋಡಿ ಬಲೆಗೆ ಬೀಳಿಸಿದ್ದಾರೆ.

ಈ ಇಬ್ಬರು ಆರೋಪಿಗಳು ಒಬ್ಬರನ್ನೊಬ್ಬರ ಮುಖವನ್ನೇ ನೋಡಿಲ್ಲ. ಎಲ್ಲವನ್ನೂ ಆನ್‌ಲೈನ್‌ ಮೂಲಕ ವಹಿವಾಟು ನಡೆಸುತ್ತಿದ್ದರು. ಈ ವ್ಯವಸ್ಥೆಯ ಹಿಂದೆ ಅಂತರರಾಷ್ಟ್ರೀಯ ಜಾಲವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಬೆಂಗಳೂರಿನ ಜಿಗಣಿ ಮತ್ತು ಕೆ.ಆರ್. ಪುರಂ ಭಾಗದಲ್ಲಿ ನೆಲೆಸಿರುವ ಇತರೆ ವಿದೇಶಿ ಪ್ರಜೆಗಳ ಸಂಪರ್ಕ , ಯುಪಿಐ ಖಾತೆಗಳು ಹಾಗೂ ಮೊಬೈಲ್ ಕರೆಗಳ ವಿವರವನ್ನು (ಸಿಡಿಆರ್) ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಬಾಕ್ಸ್ ...............

ಕಾಲೇಜು ವಿದ್ಯಾರ್ಥಿಗಳೇ ಟಾರ್ಗೆಟ್:

ರಾಜಧಾನಿ ಬೆಂಗಳೂರಿಗೆ ಸನಿಹದಲ್ಲಿರುವ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲೂ ಮಾದಕ ವ್ಯಸನದ ಬೇರು ಹಬ್ಬಿದೆ. ಗಾಂಜಾ, ಸಿಂಥೆಟಿಕ್‌ ಡ್ರಗ್ಸ್‌ಗಳನ್ನು ಮಾರುವವರು ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡಿದ್ದಾರೆ.

ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಅಪರಿಚಿತ ವ್ಯಕ್ತಿಗಳಿಂದ ಮಾದಕ ವಸ್ತುಗಳನ್ನು ಖರೀದಿಸುವ ಡ್ರಗ್ ಪೆಡ್ಲರ್ ಗಳು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದಾರೆ.

‘ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಶ್ರೀಮಂತ ವಿದ್ಯಾರ್ಥಿಗಳಲ್ಲಷ್ಟೇ ಕಾಣಸಿಗುತ್ತಿದ್ದ ಎಂಡಿಎಂಎ ಮುಂತಾದ ಸಿಂಥೆಟಿಕ್‌ ಡ್ರಗ್ಸ್‌ಗಳು ಪದವಿ ವಿದ್ಯಾರ್ಥಿಗಳಿಗೂ ಯಥೇಚ್ಛವಾಗಿ ಸಿಗುತ್ತಿವೆ. ಜಾಗೃತಿ ಮೂಡಿಸುವ ಪ್ರಯತ್ನವೂ ಯಶಸ್ಸು ನೀಡಿಲ್ಲ. ಡ್ರಗ್‌ ಪೆಡ್ಲರ್‌ಗಳು ಐಷಾರಾಮಿ ರೆಸಾರ್ಟ್‌, ಕಾಲೇಜು ಕ್ಯಾಂಪಸ್‌ಗಳು, ಡಾಬಾಗಳು, ಪಬ್‌ಗಳನ್ನು ಗುರಿಯಾಗಿಸಿರುವುದು ಕೆಲವು ಪ್ರಕರಣಗಳಿಂದ ತಿಳಿದು ಬಂದಿದೆ.

ಚಿಲ್ಲರೆ ರೂಪದಲ್ಲಿ ಗಾಂಜಾ ಮಾರಾಟ ?

ರೈಲು ನಿಲ್ದಾಣವೂ ಸೇರಿದಂತೆ ಜನನಿಬಿಡ ಪ್ರದೇಶಗಳು ಹಾಗೂ ಕೆಲವು ಬಡಾವಣೆಗಳಲ್ಲಿ ಚಿಲ್ಲರೆ ರೂಪದಲ್ಲಿ ಗಾಂಜಾ ಮಾರಾಟವಾಗುತ್ತಿದೆ. 50 ಗ್ರಾಂನ ಸಣ್ಣ ಪ್ಯಾಕೆಟ್‌ಗಳಲ್ಲಿ ಚಿಲ್ಲರೆ ಲೆಕ್ಕದಲ್ಲಿ ಕೆಲವು ಅಂಗಡಿಗಳಲ್ಲಿಯೂ ಮಾರಾಟ ನಡೆಯುತ್ತಿದೆ.

ಕೋಟ್ ................

ಗಾಂಜಾ ಮಾರಾಟ ಮೊದಲಾದ ಚಟುವಟಿಕೆಗಳ ಮೇಲೆ ಮೊದಲಿನಿಂದಲೂ ನಿಗಾ ವಹಿಸಿದ್ದೇವೆ. ಡ್ರಗ್ಸ್‌ ಜಾಲ ಬಯಲಾದ ಮೇಲೆ ಈ ಬಗ್ಗೆ ಇನ್ನಷ್ಟು ಚುರುಕಾಗುವಂತೆ ನಮ್ಮೆಲ್ಲ ಸಿಬ್ಬಂದಿಗೆ ಸೂಚಿಸಿದ್ದೇನೆ. ಅದರಲ್ಲೂ ಹಲವು ವರ್ಷಗಳಿಂದ ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅಪರಾಧಿಗಳ ಮೇಲೆ ಕಣ್ಣಿಟ್ಟಿದ್ದೇವೆ.

- ಶ್ರೀನಿವಾಸ್ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಂ.ದಕ್ಷಿಣ

25ಕೆಆರ್ ಎಂಎನ್ 1,2.ಜೆಪಿಜಿ

1.ಐಜೂರು ಪೊಲೀಸರು ವಶ ಪಡಿಸಿಕೊಂಡ ಮಾದಕ ವಸ್ತು

2.ಶ್ರೀನಿವಾಸ್ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಂ.ದಕ್ಷಿಣ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಮಹಿಳೆಯರಿಗೆ ಸವಲತ್ತು ಒದಗಿಸಿ ಆರ್ಥಿಕ ಶಕ್ತಿತುಂಬಿ: ಸುಜಾತಾ
ಮಕ್ಕಳಿಗೆ ಅಂಗನವಾಡಿಗಳೇ ಮೊದಲ ಪಾಠಶಾಲೆ