ಕುಡಿದ ಮತ್ತಿನಲ್ಲಿ ಪತಿಯಿಂದ ಪತ್ನಿ ಹತ್ಯೆ

KannadaprabhaNewsNetwork | Published : Oct 15, 2023 12:45 AM

ಸಾರಾಂಶ

ಕುಡಿದ ಮತ್ತಿನಲ್ಲಿ ಪತಿಯಿಂದ ಪತ್ನಿ ಹತ್ಯೆ
ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಪತಿಯೇ ಪತ್ನಿಯನ್ನು ಕೊಲೆಗೈದಿರುವ ಘಟನೆ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಪದ್ಮಾಕ್ಷಿ (40) ಮೃತ ದುರ್ದೈವಿ. ಕಿರಗುಂದ ಗ್ರಾಮದ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಚಂದ್ರ ಹಾಗೂ ಪದ್ಮಾಕ್ಷಿ ದಂಪತಿ ಮಧ್ಯೆ ಕುಡಿತ ಹಾಗೂ ಪದ್ಮಾಕ್ಷಿಯ ಅನೈತಿಕ ಸಂಬಂಧದ ಬಗ್ಗೆ ಗಲಾಟೆ ನಡೆಯುತ್ತಲೇ ಇತ್ತು ಎನ್ನಲಾಗಿದೆ. ಶುಕ್ರವಾರ ರಾತ್ರಿ ಕಂಠ ಪೂರ್ತಿ ಕುಡಿದು ಬಂದ ಪತಿ ಚಂದ್ರ ಪತ್ನಿ ಜೊತೆ ಜಗಳವಾಡಿದ್ದಾನೆ. ಕುಡಿದ ಮತ್ತಿನಲ್ಲಿ ಅನೈತಿಕ ಸಂಬಂಧವನ್ನ ಶಂಕಿಸಿ ಜಗಳವಾಡಿ ಪತ್ನಿಗೆ ಹೊಡೆದು, ಮನೆಯಲ್ಲಿದ್ದ ಕೊಡಲಿ ಯಿಂದ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಗೈದ ಪತಿ ಆಕೆಯನ್ನ ಮನೆಯಿಂದ ಹೊರತಳ್ಳಿ ಬಾಗಿಲು ಹಾಕಿಕೊಂಡು ಮಲಗಿದ್ದಾನೆ. ತೀವ್ರ ರಕ್ತಸ್ರಾವ ಹಾಗೂ ಇಡೀ ರಾತ್ರಿ ಹೊರಗೆ ಬಿದ್ದಿದ್ದ ಮಹಿಳೆ ಪದ್ಮಾಕ್ಷಿ ಅತಿಯಾದ ಶೀತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಪತ್ನಿಗೆ ಹೊಡೆದು ಹೊರತಳ್ಳಿ ಮಲಗಿದ್ದ ಪತಿ ಚಂದ್ರ ಬೆಳಗ್ಗೆ ಎದ್ದು ನೋಡಿದಾಗ ಪತ್ನಿ ಸಾವನ್ನಪ್ಪಿದ್ದಳು. ಪತ್ನಿಯ ಶವದ ಮುಂದೆ ಕೂತು ಕಣ್ಣೀರಿಟ್ಟಿದ್ದಾನೆ. ಮೃತಳಿಗೆ 18 ಹಾಗೂ 15 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದು, ಇವರ ಜಗಳದ ವೇಳೆ ಅವರು ಮನೆಯಲ್ಲಿ ಇರಲಿಲ್ಲ. ಶನಿವಾರ ಬೆಳಗ್ಗೆ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಚಂದ್ರನನ್ನ ಬಂಧಿಸಿದ್ದಾರೆ. ಗೋಣಿಬೀಡು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article