ಕನ್ನಡಪ್ರಭ ವಾರ್ತೆ ಬೆಂಗಳೂರು
ಪಾಪ್ಪಣ ಸ್ಟ್ರೀಟ್‌ನ ನಿವಾಸಿ ರಾಜೇಶ್ ಅನಂತ್ (55) ಎಂಬುವರು ಫೆ. 2 ರಂದು ಬೆಂಗಳೂರು ಕ್ಲಬ್ ಬಳಿ ಬೆತ್ತಲಾಗಿ ಕ್ಲಬ್‌ನವರಿಗೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ್ದು, ಈ ಸಂಬಂಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆ.1 ರಂದು ರಾಜೇಶ್ ಬೆಂಗಳೂರು ಕ್ಲಬ್‌ಗೆ ಕುಟುಂಬ ಸದಸ್ಯರ ಜತೆ ಆಗಮಿಸಿ ಮದ್ಯ ಸೇವಿಸಿ ಊಟ ಮಾಡಿ ತೆರಳಿದ್ದರು. ಆದರೆ ಮೊಬೈಲ್ ಅನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಮರುದಿನ ಮಧ್ಯಾಹ್ನ ಮದ್ಯ ಸೇವಿಸಿ ಬಂದು ಮೊಬೈಲ್ ಪಡೆದುಕೊಳ್ಳಲು ಕ್ಲಬ್‌ಗೆ ಹೋಗಿದ್ದು, ಭದ್ರತಾ ಸಿಬ್ಬಂದಿ ಸದಸ್ಯರಿಗೆ ಮಾತ್ರ ಒಳಬಿಡಲಾಗುತ್ತದೆ. ನಿಮ್ಮನ್ನು ಒಳ ಬಿಡಲಾಗುವುದಿಲ್ಲ ಎಂದು ಹೇಳಿದ್ದರು.ಇದರಿಂದ ಆಕ್ರೋಶಗೊಂಡ ರಾಜೇಶ್ ಭದ್ರತಾ ಸಿಬ್ಬಂದಿ ಗಲಾಟೆ ಮಾಡಿಕೊಂಡು ಕ್ಲಬ್ ಒಳಗೆ ನುಗ್ಗಲು ಯತ್ನಿಸಿದ್ದಾನೆ. ಈ ವೇಳೆ ಸಿಬ್ಬಂದಿ ಮತ್ತು ರಾಜೇಶ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೋಪಗೊಂಡ ರಾಜೇಶ್ ಬಟ್ಟೆಯನ್ನು ಬಿಚ್ಚಿ ಬೆತ್ತಲಾಗಿ ಕ್ಲಬ್‌ನ ಗೇಟ್ ಮುಂದೆ ನಿಂತು ವಾಹನ ಸವಾರರಿಗೆ ಕಿರಿ ಕಿರಿ ಉಂಟು ಮಾಡಿದ್ದ. ಕೆಂಪು ಬಣ್ಣದ ಕಾರಿನ ಮುಂದೆ ಬೆತ್ತಲೆಯಾಗಿ ಅಡ್ಡ ಬಂದು ಸುಗಮ ಸಂಚಾರಕ್ಕೆ ಅಡ್ಡಿ ಪಡಿಸಿದ್ದ.
ಈ ವೇಳೆ ತಾಳ್ಮೆ ಕಳೆದುಕೊಂಡ ಕಾರಿನ ಚಾಲಕ ರಾಜೇಶ್‌ನನ್ನು ಗುದ್ದಿಕೊಂಡು ಮುಂದಕ್ಕೆ ಹೋಗಿದ್ದು, ಈ ವೇಳೆ ಕೆಳಗೆ ಬಿದ್ದ ರಾಜೇಶ್‌ಗೆ ಗಾಯಗಳಾಗಿತ್ತು. ಈ ಸಂಬಂಧ ರಾಜೇಶ್ ಕಾರಿನ ಚಾಲಕನ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಇನ್ನು ರಾಜೇಶ್‌ನ ಕಿರುಕುಳದಿಂದ ರೋಸಿ ಹೋದ ಕ್ಲಬ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರಿಗೂ ರಾಜೇಶ್ ನಿಂದಿಸಿದ್ದಾನೆ. ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.