ಗೀತರಚನೆ ಎನ್ನುವುದು ಕಲಿಯೋದು, ಕಲಿಸೋದಲ್ಲ. ಕನ್ನಡ ಕಾವ್ಯ, ಸಾಹಿತ್ಯ ಓದಬೇಕು. ಜನಜೀವನ ನೋಡಬೇಕು. ಬರವಣಿಗೆ ಎನ್ನುವುದು ನಮ್ಮ ಸುಪ್ತಮನಸ್ಸಿನಿಂದ ಬರುವಂತದ್ದು. ಅದಕ್ಕೆ ಯಾವುದೇ ತರಬೇತಿ, ಕಾರ್ಯಾಗಾರ ಇರುವುದಿಲ್ಲ ಎಂದು ಖ್ಯಾತ ಸಾಹಿತಿ ಮತ್ತು ಚಿತ್ರಸಾಹಿತಿ ಜಯಂತ್ ಕಾಯ್ಕಿಣಿ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಗೀತರಚನೆ ಎನ್ನುವುದು ಕಲಿಯೋದು, ಕಲಿಸೋದಲ್ಲ. ಕನ್ನಡ ಕಾವ್ಯ, ಸಾಹಿತ್ಯ ಓದಬೇಕು. ಜನಜೀವನ ನೋಡಬೇಕು. ಬರವಣಿಗೆ ಎನ್ನುವುದು ನಮ್ಮ ಸುಪ್ತಮನಸ್ಸಿನಿಂದ ಬರುವಂತದ್ದು. ಅದಕ್ಕೆ ಯಾವುದೇ ತರಬೇತಿ, ಕಾರ್ಯಾಗಾರ ಇರುವುದಿಲ್ಲ ಎಂದು ಖ್ಯಾತ ಸಾಹಿತಿ ಮತ್ತು ಚಿತ್ರಸಾಹಿತಿ ಜಯಂತ್ ಕಾಯ್ಕಿಣಿ ಅಭಿಪ್ರಾಯಪಟ್ಟಿದ್ದಾರೆ. 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಡೆದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ʼಗೀತರಚನೆಯನ್ನು ಕಲಿಸುವುದಕ್ಕಾಗುವುದಿಲ್ಲ. ಕನಸ್ಸಿನಲ್ಲಿ ಒಮ್ಮೊಮ್ಮೆ ಅಮೂರ್ತವಾಗಿ ಏನೇನೋ ಕಾಣುತ್ತದಲ್ಲ, ಗೀತರಚನೆಯೂ ಹಾಗೆಯೇ. ನಿರ್ದೇಶನ, ನಟನೆಯ ತರಹ ಗೀತರಚನೆಗೆ ತರಬೇತಿ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ತರಬೇತಿ ಪಡೆದರೆ, ಜಿಮಿನಂದ ಬಂದ ಒಂದೇ ತರಹ ದೇಹಗಳ ಹಾಗೆ ಕಾಣುತ್ತದೆ. ಬ್ಯೂಟಿ ಪಾರ್ಲರ್‌ನಿಂದ ಬಂದ ವಧುವಿನ ಹಾಗೆ ಎಲ್ಲವೂ ಒಂದೇ ರೀತಿ ಕಾಣುತ್ತದೆ. ನಿಮ್ಮ ಛಾಪು ಮೂಡಿಸಬೇಕೆಂದರೆ ಸ್ವತಂತ್ರವಾಗಿ ಬರೆಯುವುದಕ್ಕೆ ಕಲಿಯಬೇಕು ಎಂದು ಹೇಳಿದರು.ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತಿರಬೇಕು ಎಂದ ಅವರು, ಹಳೆಯದೆಲ್ಲಾ ಚೆನ್ನಾಗಿತ್ತು, ಈಗ ಚೆನ್ನಾಗಿಲ್ಲ ಎನ್ನುವುದು ತಪ್ಪು. ಅಂದರೆ ನಾವು ಸಹ ಮೊದಲ ಹಾಗಿಲ್ಲ ಎಂದರ್ಥ. ಎಲ್ಲಾ ಕಡೆ ಸಾಕಷ್ಟು ಬದಲಾವಣೆಗಳಾಗಿವೆ. ಮೊದಲು ನಮ್ಮೂರಿನಲ್ಲಿ ಸಾಕಷ್ಟು ಹಿರಿಯರಿದ್ದರು. ಈಗ ನಾನೇ ಹಿರಿಯ ಎನ್ನುವಂತಾಗಿದೆ. ಸಮಯ ಬದಲಾಗುತ್ತಿರುತ್ತದೆ. ತಂತ್ರಜ್ಞಾನ ಬೆಳೆಯುತ್ತಿದೆ. ನಾವು ಸಹ ಬದಲಾಗಬೇಕಾಗುತ್ತದೆ. ಹಳೆಯದೇ ಚೆನ್ನಾಗಿತ್ತು, ಈಗ ಚೆನ್ನಾಗಿಲ್ಲ ಎನ್ನುವುದು ತಪ್ಪುʼ ಎಂದು ಅವರು ಹೇಳಿದರು.ತಾವು ಮೊದಲಿಂದಲೂ ಸಿನಿಮಾ ಹಾಡುಗಳ ಪ್ರೇಮಿ ಎಂದ ಜಯಂತ್ ಕಾಯ್ಕಿಣಿ, ನಾವೆಲ್ಲಾ ಹಾಡುಗಳನ್ನು ಗುನುಗಿ ಬೆಳೆದವರು. ಗೊಣಗುವುದಕ್ಕಿಂತ ಗುನುಗುವುದು ಮೇಲು ಎಂದು ನಮ್ಮ ತಂದೆ ಹೇಳುತ್ತಿದ್ದರು. ನಾನು ೫೨ನೇ ವಯಸ್ಸಿಗೆ ಸಿನಿಮಾದಲ್ಲಿ ಗೀತರಚನೆಕಾರನಾದೆ. ಯೌವ್ವನದಲ್ಲಿದ್ದಾಗ ಗಂಭಿರವಾಗಿ ʼಕೋಟಿತೀರ್ಥʼ ಅಂತ ಬರೆದೆ. ವಯಸ್ಸಾದ ಮೇಲೆ ಸಿನಿಮಾ ಹಾಡುಗಳನ್ನು ಬರೆಯುವಂತಾಯಿತುʼ ಎಂದರು. ಸಂವಾದವನ್ನು ಪ್ರಶಾಂತ್ ಪಂಡಿತ್ ನಡೆಸಿಕೊಟ್ಟರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.