ಏಕಾಏಕಿ ಭಾರೀ ಪ್ರಮಾಣದ ರಸ್ತೆ ಕುಸಿತ ಸಂಭವಿಸಿದ ಪರಿಣಾಮ ಸುಮಾರು 6 ಗಂಟೆಗಳ ಕಾಲ 10 ಕಿಲೋ ಮೀಟರ್ ಟ್ರಾಫಿಕ್‌ ಜಾಮ್ ಉಂಟಾಗಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾದ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲೂಕಿನ ಬೆಂಗಳೂರು ಮತ್ತು ಹೊಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ 44ರ ಅತ್ತಿಬೆಲೆ ಬಳಿ ಬುಧವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಆನೇಕಲ್ ಏಕಾಏಕಿ ಭಾರೀ ಪ್ರಮಾಣದ ರಸ್ತೆ ಕುಸಿತ ಸಂಭವಿಸಿದ ಪರಿಣಾಮ ಸುಮಾರು 6 ಗಂಟೆಗಳ ಕಾಲ 10 ಕಿಲೋ ಮೀಟರ್ ಟ್ರಾಫಿಕ್‌ ಜಾಮ್ ಉಂಟಾಗಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾದ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲೂಕಿನ ಬೆಂಗಳೂರು ಮತ್ತು ಹೊಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ 44ರ ಅತ್ತಿಬೆಲೆ ಬಳಿ ಬುಧವಾರ ನಡೆದಿದೆ.

ಅತ್ತಿಬೆಲೆ ಮತ್ತು ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸುರಂಗ ಮಾರ್ಗ ಕಾಮಗಾರಿಯ ಸಮೀಪ ಬುಧವಾರ ಬೆಳಗ್ಗೆ ಇದ್ದಕ್ಕಿದ್ದಂತೆ 37.5 ಮಿಟರ್‌ ಉದ್ದದ ರಸ್ತೆ 20 ಅಡಿ ಆಳಕ್ಕೆ ಕುಸಿತವಾಗಿದೆ. ಇದರಿಂದಾಗಿ ಬೆಳಗ್ಗೆ ಕಚೇರಿಗೆ ತೆರಳುವ ಉದ್ಯೋಗಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೋಗಿಗಳು ಸೇರಿ ವಿವಿಧ ಕಾರ್ಯಗಳ ನಿಮಿತ್ತ ತೆರಳುತ್ತಿದ್ದ ಭಾರೀ ಸಂಖ್ಯೆ ವಾಹನಗಳ ಸಂಚಾರ ಸ್ಥಗೀತವಾಗಿ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಪೀಕ್ ಅವರ್‌ನಲ್ಲಿ ಘಟನೆ ಸಂಭವಿಸಿದ್ದರಿಂದ 10 ಕಿ.ಮೀ ಉದ್ದಕ್ಕೂ ಟ್ರಾಫಿಕ್ ಜಾಮ್ ಕಂಡು ಬಂತು. ರಸ್ತೆ ಕುಸಿತ, ವಾಹನ ದಟ್ಟಣೆ ಮಾಹಿತಿ ತಿಳಿದ ಕೂಡಲೇ ಎಚ್ಚೆತ್ತ ಅಧಿಕಾರಿಗಳು, ಸಮಾರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಸತತ 6 ಗಂಟೆಗಳ ಶ್ರಮದಿಂದಾಗಿ ಭಾರೀ ಪ್ರಮಾಣದ ಟ್ರಾಫಿಕ್ ಜಾಮ್ ಸುಗಮವಾಯಿತು.

ಅವೈಜ್ಞಾನಿಕವಾಗಿ ಭೂಮಿ ಅಗೆತ:

ಘಟನಾ ಸ್ಥಳದಲ್ಲಿ ಪ್ರಸ್ತುತ ರಸ್ತೆ ವಿಸ್ತರಣೆ ಮತ್ತು ಎನ್‌ಎಚ್‌ಎಐ ಯೋಜನೆ ಕಾಮಗಾರಿಗಳು ಸತತ 6 ತಿಂಗಳಿಂದ ನಡೆಯುತ್ತಿದ್ದು, ಅಂಡರ್ ಪಾಸ್ ನಿರ್ಮಾಣಕ್ಕಾಗಿ ಅವೈಜ್ಞಾನಿಕವಾಗಿ ಸುಮಾರು 20 ಅಡಿಗಳಷ್ಟು ಭೂಮಿ ಅಗೆದು ಕಬ್ಬಿಣದ ಸರಳುಗಳನ್ನು ಜೋಡಿಸಿ ಕಾಂಕ್ರೀಟ್ ಸುರಿಯಲು ಅನುವು ಮಾಡಿಕೊಳ್ಳಲಾಗಿತ್ತು. ಅಲ್ಲದೇ ಅಸ್ಥಿರವಾದ ಮಣ್ಣು ಮತ್ತು ಭಾರೀ ಯಂತ್ರೋಪಕರಣಗಳ ಸಂಚಾರವೇ ಈ ಭೂಕುಸಿತಕ್ಕೆ ಕಾರಣ ಎನ್ನಲಾಗಿದೆ.

ಆಮೆಗತಿ, ಕಳಪೆ ಕಾಮಗಾರಿ:ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಸುರಂಗ ಮಾರ್ಗದ ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿದ್ದು, ಗುತ್ತಿಗೆದಾರಿಂದ ಒಳ ಗುತ್ತಿಗೆ ಪಡೆದವರ ಅಸಹಕಾರ, ನಿರ್ಲಕ್ಷ್ಯದಿಂದಾಗಿ ದಿನನಿತ್ಯ ಸಾವಿರಾರು ವಾಹನಗಳ ಸವಾರರು ಪರದಾಡುವಂತಾಗಿದೆ. ಹೆದ್ದಾರಿ ಪ್ರಾಧಿಕಾರ ಹಾಗೂ ಬಿಇಟಿಪಿಎಲ್ ಸಂಸ್ಥೆಯಿಂದ ಗುತ್ತಿಗೆ ಪಡೆದಿರುವ ದಾರಿಬಾಲ್‌ ಎಂಬ ಕಂಪನಿಯು ಈ ಅಂಡರ್‌ ಪಾಸ್ ನಿರ್ಮಾಣ ಮಾಡುತ್ತಿದ್ದು, ಹೆದ್ದಾರಿಯಲ್ಲಿ 3 ಕಡೆ ಟನಲ್‌ ನಿರ್ಮಾಣಕ್ಕಾಗಿ ₹120 ಕೋಟಿ ಗುತ್ತಿಗೆಗೆ ಪಡೆದಿದೆ. ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸದೇ, ಅನುಮೋದಿತ ಸ್ಟ್ರಕ್ಚರಲ್ ಪ್ಲಾನ್‌ನ ಮಾನದಂಡಗಳನ್ನು ಪಾಲಿಸದೇ ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಅಧಿಕಾರಿಗಳ ನಿರ್ಲಕ್ಷ, ಅಸಹಕಾರ:

ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯ, ವಿದ್ಯುತ್ ಹಾಗೂ ಪೊಲೀಸ ಇಲಾಖೆ ಅಧಿಕಾರಿಗಳ ಅಸಹಕಾರ ಹಾಗೂ ಸ್ಥಳೀಯ ಬಡಾವಣೆಗಳ ನಿವಾಸಿಗಳು ಒಳಚರಂಡಿಗೆ ಹೋಗಬೇಕಾದ ಗಲೀಜನ್ನು ರಸ್ತೆಗೆ ಬಿಡುವ ಕೃತ್ಯವೂ ರಸ್ತೆಯಲ್ಲಿ ಸಂಚರಿಸುವವರಿಗೆ ಕಿರಿಕಿರಿ ಉಂಟುಮಾಡಿದೆ. ಹಳೇ ಚಂದಾಪುರದ ಬಳಿ ಲೇಔಟ್‌ಗಳಿಂದ ಸ್ಯಾನಿಟರಿ ನೀರು ಅಧಿಕವಾಗಿ ರಸ್ತೆಗೆ ಹರಿಯುತ್ತಿದ್ದು, ಇದು ಸಹ ಭೂಕುಸಿತಕ್ಕೆ ಒಂದು ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಈ ಹೆದ್ದಾರಿ ರಸ್ತೆಯಲ್ಲಿರುವ ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಬೆಸ್ಕಾಂ ಅಧಿಕಾರಿಗಳು ಅಸಹಕಾರ ತೋರುತ್ತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ರೈಲ್ವೆ ಬ್ರಿಡ್ಜ್ ವಿಸ್ತರಣೆ ಮಂದಗತಿ:

ಚಂದಾಪುರ ಬಳಿಯ ರೈಲ್ವೆ ಅಂಡರ್ ಬ್ರಿಡ್ಜ್ ವಿಸ್ತರಣೆ ಕಾಮಗಾರಿ ವಿಳಂಬವಾಗಿದೆ. ಈ ರೀತಿ ಒಂದೇ ಕಡೇ 3 ವಿವಿಧ ಕಾಮಗಾರಿಗಳು ಮಂದಗತಿಯಲ್ಲಿ ನಡೆಯುತ್ತಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳ ನಡುವೆ ಸಂವಹನ ಕೊರತೆಯೂ ಜನರ ತೆರಿಗೆ ಹಣ ಹಾಗೂ ಅಮೂಲ್ಯ ಸಮಯ ಪೋಲಾಗುತ್ತಿದೆ. ಡಿಸೆಂಬರ್ ತಿಂಗಳಲ್ಲಿ ಸಂಸದರ ಜೊತೆಗೆ ಬಂದ ಎಲ್ಲ ಇಲಾಖಾ ಅಧಿಕಾರಿಗಳು ತಮಗೆ ನೀಡಿದ ಗಡುವನ್ನು ಮರೆತು ಜಾಣ ಕಿವುಡರಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.