ಕನ್ನಡಪ್ರಭ ವಾರ್ತೆ ಶಹಾಪುರ
ಕಂಠಪೂರ್ತಿ ಕುಡಿದ ಚಾಲಕ ಜೀವನ್ ಅಲಿಯಾಸ್ ವೆಂಕಟೇಶ್ ತೇಲಗರ ಎಂಬಾತ, ರಾತ್ರಿ 10. 30 ಗಂಟೆ ಸುಮಾರಿಗೆ ಹಿರೇಮಠ ಪೆಟ್ರೋಲ್ ಬಂಕ್ ಹತ್ತಿರ ನಿಂತಿರುವ ಟ್ಯಾಕ್ಟರ್ ಗೆ ರಭಸವಾಗಿ ಗುದ್ದಿದ ಪರಿಣಾಮ ಟ್ರ್ಯಾಕ್ಟರ್ ನುಜ್ಜುನೂರಾಗಿದೆ. ಟಿಪ್ಪರ್ ಸಮೇತ ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಾ, ವಾಹನವನ್ನು ಹಿಂದೆ ಮುಂದೆ ಮಾಡುವಾಗ ಎರಡು ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಅವುಗಳನ್ನು ಲೆಕ್ಕಿಸದೆ ಟಿಪ್ಪರನ್ನು ಅಡ್ಡಾದಿಡ್ಡಿಯಾಗಿ ಚಲಿಸಿಕೊಂಡು ಪರರಿಯಾಗುವ ವೇಳೆ ಜನರು ವೀಡಿಯೋ ಮಾಡಿಕೊಂಡು ಟಿಪ್ಪರ್ ಹಿಂದೆ ಬೆನ್ನುತ್ತಿದ್ದಾರೆ. ಬಸವೇಶ್ವರ ವೃತ್ತದಿಂದ ಯಾದಗಿರಿ ರಸ್ತೆಗೆ ರಭಸವಾಗಿ ಹೋಗುವಾಗ ಕೃಷಿ ಇಲಾಖೆ ಎದುರುಗಡೆ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವ ಯುವಕನ ಮೇಲೆ ಟಿಪ್ಪರ್ ಹಾಯಿಸಿದ ಪರಿಣಾಮ ಯುವಕ ಸ್ಥಳದಲ್ಲಿ ಪ್ರಾಣ ಬಿಟ್ಟಿದ್ದಾನೆಂದು ತಿಳಿದು ಬಂದಿದೆ.
ಅಲ್ಲಿಂದ ಹೋಟೆಲ್ ಗೆ ನುಗ್ಗಿದ್ದಲ್ಲದೆ ರಸ್ತೆ ಬದಿಯಲ್ಲಿರುವ ಎರಡು ಬೇವಿನ ಮರಗಳಿಗೆ ವೇಗವಾಗಿ ಗುದ್ದಿದ ಪರಿಣಾಮ ಮರಗಳು ಬುಡ ಸಮೇತ ನೆಲಕ್ಕುರುಳಿವೆ. ಗಿಡಗಳು ಅಡ್ಡ ಬಂದಿದ್ದರಿಂದ ಟಿಪ್ಪರ್ ಮುಂದೆ ಹೋಗದೆ ನಿಂತಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಟಿಪ್ಪರ್ ಗಳಿಗೆ ಕಡಿವಾಣ ಹಾಕಿ: ಟಿಪ್ಪರ್, ಲಾರಿಗಳ ಸಂಖ್ಯೆಯೇ ಹೆಚ್ಚಾಗಿದ್ದು, ಮರಳು ಹಾಗೂ ಮಣ್ಣು ಸಾಗಾಟದ ನೆಪದಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಗ್ರಾಮೀಣ, ರಾಜ್ಯ ಹೆದ್ದಾರಿಗಳಲ್ಲಿ ಹೆಚ್ಚಾಗಿ ಸಂಚರಿಸುವ ಈ ಟಿಪ್ಪರ್, ಲಾರಿಗಳ ಚಾಲಕರು ತಮಗೆ ತೋಚಿದ ರೀತಿಯಲ್ಲಿ ವಾಹನವನ್ನು ಚಲಾಯಿಸುವುದರಿಂದಾಗಿ ಪಾದಚಾರಿಗಳು, ದ್ವಿಚಕ್ರ ವಾಹನ ಹಾಗೂ ಇತರೆ ವಾಹನಗಳಿಗೆ ಇವುಗಳು ಯಮಸ್ವರೂಪಿಯಾಗುತ್ತಿವೆ. ಅನೇಕ ಅನಾಹುತಗಳು ಸಂಭವಿಸುತ್ತಿದ್ದರೂ, ಸಂಬಂಧಿತ ಅಧಿಕಾರಿಗಳು ಟಿಪ್ಪರ್ ಗಳಿಗೆ ಕಡಿವಾಣ ಹಾಕದೆ ನಿರ್ಲಕ್ಷ್ಯ ವಹಿಸಿದ್ದಾರೆ. ಯಾರು ಸತ್ತರು ಪರವಾಗಿಲ್ಲ. ನಮಗೆ ಹಣ ಬರಲಿ ಎನ್ನುವ ಮನಸ್ಥಿತಿಯಲ್ಲಿರುವ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆ ಅಧಿಕಾರಿಗಳು ಇತ್ತ ಕಡೆ ಗಮನ ವಹಿಸುತ್ತಿಲ್ಲ. ಕೇಳಿದರೆ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಸಿಸಿಟಿವಿ ಕ್ಯಾಮೆರಾ ಸದ್ಯ ಕೂಡಿಸಲು ಬರುವುದಿಲ್ಲ ಚುನಾವಣೆ ಮುಗಿದ ಮೇಲೆ ಕೂಡಿಸುವುದಾಗಿ ಹೇಳುತ್ತಾರೆ. ಕಾನೂನು ಸುವ್ಯವಸ್ಥೆ ಹಾಗು ನಾಗರಿಕರ ರಕ್ಷಣೆ ನೀಡುವುದಾಗಿದೆ. ಇದಕ್ಕೆ ಚುನಾವಣೆ ನೀತಿ ಸಂಹಿತೆ ಜಾರಿಗೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಯಾವುದೇ ಸಂಬಂಧವಿಲ್ಲ. ಇದು ಯಾವುದೇ ಪಕ್ಷದ ಕೆಲಸವಲ್ಲ. ನಗರಸಭೆ ಅಧಿಕಾರಿಗಳು ಕುಂಟುನೆಪ ಹೇಳದೆ ಕೂಡಲೇ ಸಿಸಿಟಿವಿ ಕ್ಯಾಮೆರಾ ಕುಡಿಸದೆ ಇದ್ದರೆ ನಗರಸಭೆ ಮುಂದೆ ಪ್ರತಿಭಟನೆ ಮಾಡುವುದಾಗಿ ಪ್ರಾಂತ ರೈತ ಸಂಘ, ದಲಿತ ಪರ ಸಂಘಟನೆ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ಮುಖಂಡರು ನಗರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
- ಮಾನಪ್ಪ ಹಡಪದ್, ಸಾಮಾಜಿಕ ಕಾರ್ಯಕರ್ತ ಶಹಾಪುರ.