ಹೊನ್ನಾವರ: ಕಾಸರಕೋಡು ವಾಣಿಜ್ಯ ಬಂದರು ಕಾಮಗಾರಿ ಪ್ರಶ್ನಿಸಲು ಹೋದ ಮೀನುಗಾರರ ವಿರುದ್ಧ ಕೆಲವರ ಮೂಲಕ ಸುಳ್ಳು ದೂರು ದಾಖಲಿಸಿದ್ದಾರೆ. ಸುಳ್ಳು ಫಿರ್ಯಾದಿ ನೀಡಿದವರ ವಿರುದ್ಧ ಪೊಲೀಸ್ ಇಲಾಖೆ ಸುಮೋಟೋ ಪ್ರಕರಣ ದಾಖಲಿಸಿ ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕರಾವಳಿ ಮೀನುಗಾರ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೇಶ ತಾಂಡೇಲ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಸೆಕ್ಷನ್ 144 ನಿಷೇಧಾಜ್ಞೆ ತೆರವಾದ ನಂತರ ನಡೆದ ವಿದ್ಯಮಾನದಲ್ಲಿ ಟೊಂಕಾದ ಕಡಲತೀರ ಮತ್ತು ಇಲ್ಲಿನ ಜನವಸತಿ ಪ್ರದೇಶದಲ್ಲಿ ಪರಿಸರ, ವನ್ಯಜೀವಿ ಮಂಡಳಿ ಸಹಿತ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕೃತ ಆದೇಶವನ್ನು ಪಡೆಯದೇ ಮತ್ತು ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದ ಹೊರತು ಜನವಸತಿ ಪ್ರದೇಶದಲ್ಲಿ ಕಚ್ಚಾ ರಸ್ತೆಗೆ ಡಾಂಬರೀಕರಣ ಮಾಡುವ ನೆಪದಲ್ಲಿ ಹೊಸದಾಗಿ ಮಣ್ಣು ಮತ್ತು ಜಲ್ಲಿಕಲ್ಲು ಸುರಿದು ರಸ್ತೆಯ ಅಗಲೀಕರಣ ಕಾಮಗಾರಿ ನಡೆಸದಂತೆ ಸ್ಥಳೀಯರು ಮಾಡಿದ ಕೋರಿಕೆಯನ್ನು ಪೋಲಿಸ್ ಅಧಿಕಾರಿಗಳು ಸ್ಥಳೀಯ ಬಂದರು ಅಧಿಕಾರಿಗಳಿಗೆ ತಿಳಿಸಿದ್ದರು. ಅಗತ್ಯ ಪರವಾನಗಿ ಮತ್ತು ಕಾಮಗಾರಿಯ ಆದೇಶಪತ್ರ ತೋರಿಸಲು ಬಂದರು ಅಧಿಕಾರಿ ವಿಫಲರಾದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳ ಸೂಚನೆಯ ಮೇರೆಗೆ ಬಂದರು ಅಧಿಕಾರಿಗಳು ಕೆಲಸ ಸ್ಥಗಿತಗೊಳಿಸಿ ಸ್ಥಳದಿಂದ ತೆರಳಿದ್ದಾರೆ. ಇನ್ನೊಂದೆಡೆ ಬಂದರು ನಿರ್ದೇಶಕ ಕ್ಯಾ. ಸ್ವಾಮಿ ನೀಡಿರುವ ಪತ್ರಿಕಾ ಹೇಳಿಕೆಯ ಪ್ರಕಾರ ಇಲ್ಲಿನ ಕಚ್ಚಾ ರಸ್ತೆಗೆ ಡಾಂಬರೀಕರಣ ಮಾಡುವ ಕಾಮಗಾರಿಯನ್ನು ಎಚ್‌ಪಿಪಿಎಲ್ ಕಂಪನಿ ನಿರ್ವಹಿಸುತ್ತಿರುವುದಾಗಿ ಹೇಳಿದ್ದರು.
ಬಂದರು ನಿರ್ದೇಶಕರ ಹೇಳಿಕೆಗೂ ಮತ್ತು ಸ್ಥಳೀಯವಾಗಿ ನಡೆಯುತ್ತಿರುವ ವಿದ್ಯಮಾನಗಳಿಗೂ ಒಂದಕ್ಕೊಂದು ತಾಳೆಯಾಗದೇ ಇರುವುದು ಇಲ್ಲಿ ಎಲ್ಲವೂ ಪಾರದರ್ಶಕವಾಗಿಲ್ಲ ಎನ್ನುವ ಅನುಮಾನಕ್ಕೀಡು ಮಾಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹಲ್ಲೆ, ಜೀವ ಬೆದರಿಕೆ: ದೂರು ದಾಖಲುಹೊನ್ನಾವರ: ತಾಲೂಕಿನ ಕಾಸರಕೋಡು ಬಂದರು ಕಾಮಗಾರಿಗೆ ಸಂಬಂಧಿಸಿದ ಜಾಗದಲ್ಲಿ ಕಚ್ಚಾ ರಸ್ತೆಯ ಡಾಂಬರೀಕರಣ ಕೆಲಸದಲ್ಲಿ ತೊಡಗಿದ್ದ ಎಂಜಿನಿಯರ್, ಗುತ್ತಿಗೆದಾರರು ಮತ್ತು ಕಾರ್ಮಿಕರಿಗೆ ಸ್ಥಳೀಯರು ಜೀವ ಬೆದರಿಕೆಯೊಡ್ಡಿ ಹಲ್ಲೆ ನಡೆಸಿರುವ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಕಾಸರಕೋಡು ಟೊಂಕಾದಲ್ಲಿ ಉದ್ದೇಶಿತ ವಾಣಿಜ್ಯ ಬಂದರು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಕಾರ್ಯನಿರ್ವಹಿಸುತ್ತಿದ್ದ ಕಿರಿಯ ಎಂಜಿನಿಯರ್ ಸುಧೀರ್ ನಾಯ್ಕ ದೂರು ನೀಡಿದ್ದಾರೆ. ಕಾಸರಕೋಡು ಟೊಂಕಾದ ಗಣಪತಿ ತಾಂಡೇಲ್, ರಾಜು ತಾಂಡೇಲ್, ಭಾಸ್ಕರ್ ತಾಂಡೇಲ್, ಜಗದೀಶ ತಾಂಡೇಲ್, ರಾಜೇಶ್ ತಾಂಡೇಲ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದೆ.ಬಂದರು ಇಲಾಖೆಯ ಸಿಬ್ಬಂದಿ ಹಾಗೂ ಎಚ್‌ಪಿಪಿಎಲ್ ಕಂಪನಿಯ ಸಿಬ್ಬಂದಿ ಹಾಗೂ ಕಾರ್ಮಿಕರು ಹೊನ್ನಾವರ ಬಂದರು ಇಲಾಖಾ ಜಾಗದಲ್ಲಿ ಕಚ್ಚಾ ರಸ್ತೆಯನ್ನು ಡಾಂಬರೀಕರಣ ಕೆಲಸದಲ್ಲಿ ತೊಡಗಿದ್ದರು. ಶನಿವಾರ ಮಧ್ಯಾಹ್ನ ಸುಮಾರು ೧೫೦ ಜನರು ಕಂಪನಿಯ ಕೆಲಸದಲ್ಲಿ ತೊಡಗಿದ್ದವರನ್ನು ಅಡ್ಡಗಟ್ಟಿ ತಡೆದಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆಯೊಡ್ಡಿದ್ದಾರೆ. ಅಲ್ಲದೆ ಕಿರಿಯ ಎಂಜಿನಿಯರ್ ಸುಧೀರ್ ನಾಯ್ಕ, ಕೃಷ್ಣ ಎಂ. ನಾಯ್ಕ ಎಚ್.ಆರ್., ರೋಶನ್ ಎಚ್. ನಾಯ್ಕ, ಮುರಾರಿ ಸಿ. ನಾಯ್ಕ, ಸುಬ್ರಹ್ಮಣ್ಯ ನಾಯ್ಕ, ಹೀರಾಮನ್ ಯಾದವ್, ತನ್ಮಯ್ ಹಾಗೂ ಬಂದರು ಇಲಾಖೆಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೊನ್ನಾವರ ಠಾಣೆಯಲ್ಲಿ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.