ಸಾರ್ವಜನಿಕ ಸ್ಥಳಗಳಲ್ಲಿ ಕುಡಿತದ ಹಾವಳಿ: ಮಹಿಳೆಯರ ಸುರಕ್ಷತೆಗೆ ಸವಾಲು

KannadaprabhaNewsNetwork |  
Published : Jul 17, 2026, 02:15 AM IST
ಬಳ್ಳಾರಿಯ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಸೇವನೆ ಹಾಗೂ ಮಾದಕ ವಸ್ತು ಸೇವನೆ ಮಾಡುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.  | Kannada Prabha

ಸಾರಾಂಶ

ಖಾಲಿ ಜಾಗಗಳಲ್ಲಿ ರಾತ್ರಿ ಹೊತ್ತಿನಲ್ಲಿ ಅಡ್ಡಾಡುವುದು ಸಾಮಾನ್ಯ ದೃಶ್ಯವಾಗುತ್ತಿದೆ.

ವಿಶೇಷ ವರದಿ

ಬಳ್ಳಾರಿ: ಈ ಹಿಂದೆ ನಗರ ಹೊರವಲಯದ ಖಾಲಿ ನಿವೇಶನಗಳು ಮತ್ತು ಅಭಿವೃದ್ಧಿಯಾಗದ ಲೇಔಟ್‌ಗಳು ಕುಡುಕರು ಸೇರುವ ಸ್ಥಳಗಳಾಗಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ನಗರದ ಮಧ್ಯಭಾಗದಲ್ಲಿರುವ ಸಾರ್ವಜನಿಕ ಸ್ಥಳಗಳಲ್ಲಿಯೇ ಮದ್ಯಪಾನ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ.

ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಮದ್ಯ ಸೇವಿಸುವುದು, ಉದ್ಯಾನಗಳ ಬಳಿ ಗುಂಪುಗೂಡಿ ಕುಡಿಯುವುದು, ಖಾಲಿ ಜಾಗಗಳಲ್ಲಿ ರಾತ್ರಿ ಹೊತ್ತಿನಲ್ಲಿ ಅಡ್ಡಾಡುವುದು ಸಾಮಾನ್ಯ ದೃಶ್ಯವಾಗುತ್ತಿದೆ. ಈ ಬೆಳವಣಿಗೆಯಿಂದ ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ಹಿರಿಯ ನಾಗರಿಕರಲ್ಲಿ ಆತಂಕ ಹೆಚ್ಚಿದೆ.

ಒಂದೆಡೆ ನಗರೀಕರಣ ವೇಗವಾಗಿ ಬೆಳೆಯುತ್ತಿದ್ದರೆ, ಮತ್ತೊಂದೆಡೆ ಸಾರ್ವಜನಿಕ ಸ್ಥಳಗಳಲ್ಲಿನ ಅಸಾಮಾಜಿಕ ಚಟುವಟಿಕೆಗಳು ನಾಗರಿಕರ ನೆಮ್ಮದಿಗೆ ಧಕ್ಕೆ ತರುತ್ತಿವೆ. ಬಳ್ಳಾರಿ ನಗರದಲ್ಲಿ ಇತ್ತೀಚೆಗೆ ರಸ್ತೆಬದಿ, ಉದ್ಯಾನಗಳು, ಬಸ್ ನಿಲ್ದಾಣಗಳ ಬಳಿ, ಶಾಲಾ ಮೈದಾನಗಳು, ನಗರ ಹೊರವಲಯದ ಖಾಲಿ ಲೇಔಟ್‌ಗಳು ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವವರ ಹಾವಳಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ಸಂಜೆಯಾಗುತ್ತಿದ್ದಂತೆಯೇ ಕೆಲವು ಪ್ರದೇಶಗಳು ಕುಡುಕರ ತಾಣಗಳಾಗಿ ಮಾರ್ಪಡುತ್ತಿದ್ದು, ಸಾರ್ವಜನಿಕರು ಮುಕ್ತವಾಗಿ ಸಂಚರಿಸಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಮದ್ಯ ಸೇವನೆ ದುಬಾರಿ ಎನ್ನುವ ಕಾರಣದಿಂದ ಅನೇಕರು ಎಂಎಸ್‌ಐಎಲ್ ಮಳಿಗೆಗಳಿಂದ ಮದ್ಯ ಖರೀದಿಸಿ ಹೊರಗಡೆಯೇ ಕುಡಿಯುವ ಪ್ರವೃತ್ತಿಗೆ ಮುಂದಾಗುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ. ಮದ್ಯ ಮಾರಾಟ ಕಾನೂನುಬದ್ಧವಾಗಿದ್ದರೂ ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ಸೇವಿಸುವುದು ಕಾನೂನುಬಾಹಿರ ಎಂಬ ಅರಿವು ಅನೇಕ ಮಂದಿಯಲ್ಲಿ ಕಾಣುತ್ತಿಲ್ಲ. ಪರಿಣಾಮ ರಸ್ತೆಬದಿ ಮದ್ಯದ ಬಾಟಲಿ, ಪ್ಲಾಸ್ಟಿಕ್ ಗ್ಲಾಸ್‌, ಆಹಾರದ ತ್ಯಾಜ್ಯ ಬಿದ್ದಿರುವುದು ನಗರ ಸ್ವಚ್ಛತೆಯ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ.

ಮತ್ತಷ್ಟು ಆತಂಕಕಾರಿ ಸಂಗತಿ ಎಂದರೆ ಬೆಳಿಗ್ಗೆ ನೂರಾರು ವಿದ್ಯಾರ್ಥಿಗಳು, ವೃದ್ಧರು ವಾಕಿಂಗ್ ಮತ್ತಿತರ ದೈಹಿಕ ಚಟುವಟಿಕೆಗಳನ್ನು ನಡೆಸುವ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಕುಡುಕರ ಹಾವಳಿ ಹೆಚ್ಚಾಗುತ್ತಿದೆ. ಮೈದಾನದಲ್ಲಿ ಮೂಲೆಯ ಕತ್ತಲಲ್ಲಿ ಕುಳಿತು ಮದ್ಯಸೇವಿಸುತ್ತಾರೆ. ಕುಡಿದ ಮತ್ತಿನಲ್ಲಿ ಬಾಟಲ್‌ಗಳನ್ನು ಒಡೆದು ಹಾಕುವುದರಿಂದ ಬೆಳಿಗ್ಗೆ ಕ್ರೀಡೆ ಚಟುವಟಿಕೆಗಳಿಗೆ ಬರುವ ವಿದ್ಯಾರ್ಥಿಗಳು ಹಾಗೂ ಯುವಜನರು ತೊಂದರೆ ಅನುಭವಿಸುವಂತಾಗಿದೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಸೂಕ್ತದ ಕ್ರಮದ ಹೆಜ್ಜೆ ಇರಿಸಬೇಕಾಗಿದೆ.

ಕುಡುಕರಿಗೆ ಬೆಂಡೆತ್ತಿದ ಪೊಲೀಸರು:

ಸಾರ್ವಜನಿಕ ಸ್ಥಳಗಳಾದ ಶಾಲಾ ಮೈದಾನ, ಪಾರ್ಕ್, ರಸ್ತೆ ಬದಿಯ ಜಾಗಗಳಲ್ಲಿ ಯುವಕರು ಮದ್ಯ ಹಾಗೂ ಮಾದಕ ವಸ್ತು ಸೇವನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 174 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಪೈಕಿ 111 ಜನರು ಮದ್ಯ ಸೇವಿಸಿದ್ದು, ನಾಲ್ವರು ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಎಸ್ಪಿ ಸುಮನ್ ಡಿ.ಪನ್ನೇಕರ್ ಅವರ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ನಗರದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಸಂಜೆಯಾಗುತ್ತಿದ್ದಂತೆಯೇ ಬೀಡು ಬಿಡುವ ಕುಡುಕರ ಹಾವಳಿ ನಿಯಂತ್ರಿಸಲು ಪೊಲೀಸರು ಕಾರ್ಯಾಚರಣೆ ಮುಂದುವರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಜನ ಸಂಚಾರ ಸ್ಥಳಗಳಲ್ಲಿ ಮದ್ಯಪಾನ, ಮಾದಕ ವಸ್ತು ಸೇವನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವುದು ಶ್ಲಾಘನೀಯ ಹೆಜ್ಜೆಯಾಗಿದೆ. ಪೊಲೀಸ್ ಸಿಬ್ಬಂದಿಯಿಂದ ರಾತ್ರಿ ಗಸ್ತು ಹೆಚ್ಚಿಸುವುದು, ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ನಿಗಾ ವಹಿಸುವುದು ಸೇರಿದಂತೆ ಕುಡುಕರ ಹಾವಳಿ ನಿಯಂತ್ರಣಕ್ಕೆ ಬೇಕಾದ ಪೂರಕ ಕ್ರಮ ವಹಿಸಲು ಪೊಲೀಸರು ಮುಂದಾಗಿರುವುದು ಸಾರ್ವಜನಿಕರು ನಿಟ್ಟಿಸಿರು ಬಿಟ್ಟಂತಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವನ ನಿರ್ವಹಣೆಗೆ ಪದವಿ ಮುಖ್ಯವಲ್ಲ, ಕೌಶಲ್ಯ ಬೇಕು
ಹೂಳು ತುಂಬಿದ ಚರಂಡಿ ದುರಸ್ತಿ ಮಾಡಿ: ಡಂಬಳ ಗ್ರಾಮಸ್ಥರ ಆಗ್ರಹ