ಕನ್ನಡಪ್ರಭ ವಾರ್ತೆ ಸೊರಬ
ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಶ್ರೀ ರೇಣುಕಾಂಬಾ ದೇವಿಯ ಹೆಸರಿನಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆ ಎನ್ನುವ ಅನಿಷ್ಟ ಪದ್ಧತಿಯ ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮೊದಲು ಧ್ವನಿ ಎತ್ತಿ ಹೋರಾಟ ನಡೆಸಿತು. ಇದರ ಫಲವಾಗಿ ಅಲ್ಲಿ ಬೆತ್ತಲೆ ಸೇವೆ ನಿಷೇಧಕ್ಕೊಳಗಾಗಿದೆ ಎಂದು ಡಿಎಸ್‌ಎಸ್ ಜಿಲ್ಲಾ ಮಹಿಳಾ ಸಂಚಾಲಕಿ ಗಂಗಾಮಾಳಮ್ಮ ಹೇಳಿದರು. ತಾಲೂಕಿನ ಚಂದ್ರಗುತ್ತಿ ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 67ನೇ ಮಹಾಪರಿನಿರ್ವಾಣ ದಿನ ಅಂಗವಾಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.1982-83ರಲ್ಲಿ ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಬೆತ್ತಲೆಸೇವೆ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಬಿ.ಕೃಷ್ಣಪ್ಪ ಅವರ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಜೊತೆಗೂಡಿ, ಬೀದಿನಾಟಕಗಳನ್ನು ನಡೆಸಲಾಯಿತು. ಆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಧಾರ್ಮಿಕತೆ ಹೆಸರಿನಲ್ಲಿ ನಡೆಯುತ್ತಿರುವ ಬೆತ್ತಲೆಸೇವೆಯನ್ನು ತಕ್ಷಣ ನಿಷೇಧಿಸುವಂತೆ ಹೋರಾಟ ನಡೆಸಲಾಗಿತ್ತು ಎಂದು ಸ್ಮರಿಸಿದರು.
ನಾಗರಿಕ ಸಮಾಜ ತಲೆತಗ್ಗಿಸುವಂತ ಅನಿಷ್ಠ ಪದ್ಧತಿ ಇಂದು ಸಂಪೂರ್ಣ ನಿಷೇಧಕ್ಕೊಳಗಾಗಿ ಭಕ್ತರು ನಿರಾಳವಾಗಿ ದೇವಿಯ ದರ್ಶನ, ಪೂಜಾ ಕೈಂಕರ್ಯಗಳಲ್ಲಿ ತೊಡಗಿದ್ದಾರೆ. ದಲಿತರಿಗೆ ಸಾಮಾಜಿಕ ಹೋರಾಟದ ಕಣ್ಣು ನೀಡಿದ ಅಂಬೇಡ್ಕರ್ ಹಾಕಿಕೊಟ್ಟ ಹಾದಿಯಲ್ಲಿ ದಲಿತ ಸಂಘರ್ಷ ಸಮಿತಿ ನಡೆಯುತ್ತಿದೆ ಎಂದರು.ದಸಂಸ ತಾಲೂಕು ಸಂಚಾಲಕ ಎಸ್.ಕೃಷ್ಣಪ್ಪ ಮಾತನಾಡಿ, ಅಂಬೇಡ್ಕರ್ ಅವರ 67ನೇ ಮಹಾ ಪರಿನಿರ್ವಾಣ ದಿನವನ್ನು ದಲಿತ ಸಂಘರ್ಷ ಸಮಿತಿ ವತಿಯಿಂದ ಆಚರಿಸಿದ್ದೇವೆ. ಈ ವೇಳೆಯಲ್ಲಿ ದಲಿತ ಸಂಘರ್ಷ ಮಹಿಳಾ ಸಮಿತಿಯನ್ನು ರಚಿಸಲಾಗಿದೆ ಎಂದರು.
ನ್ಯಾರ್ಶಿ ಗ್ರಾಮ ಪಂಚಾಯಿತಿ ಸಂಪನ್ಮೂಲ ವ್ಯಕ್ತಿ ರೇಖಾ ಸತೀಶ್, ಡಿ.ಎಸ್.ಎಸ್. ಮಹಿಳಾ ಸದಸ್ಯರಾದ ಅನುರಾಧ, ಸಾಕಮ್ಮ, ಲಲಿತಾ, ಲಕ್ಷ್ಮಮ್ಮ, ಗಿರಿಜಾ, ಇಂದ್ರ, ನಾಗರತ್ನ, ಭೂಮಿಕ, ಪೂಜಾ, ಪವಿತ್ರ, ಮಹಿಳೆಯರು ಉಪಸ್ಥಿತರಿದ್ದರು.- - - -06ಕೆಪಿಸೊರಬ01:
ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 67ನೇ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು.