ಕನ್ನಡಪ್ರಭ ವಾರ್ತೆ ಮಂಗಳೂರು
ಯಕ್ಷಗಾನ ಅಭ್ಯಾಸ ಕೇಂದ್ರ ದುಬೈ ಯುಎಇ ವತಿಯಿಂದ 9ರಂದು ಮಧ್ಯಾಹ್ನ 2ರಿಂದ ದುಬೈನ ಕರಮ ಶೇಖ್ ರಷೀದ್ ಸಭಾಂಗಂದಲ್ಲಿ ದುಬೈ ಯಕ್ಷೋತ್ಸವ ಆಯೋಜಿಸಲಾಗಿದೆ.ಯಕ್ಷಗಾನ ಅಭ್ಯಾಸ ಕೇಂದ್ರ, ಯುಎಇಯ ಬಾಲ-ಯುವ- ಪರಿಣತ-ಪ್ರೌಢ ಕಲಾವಿದರಿಂದ ದಾಶರಥಿ ದರ್ಶನ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಗಾನಸಾರಥ್ಯ, ಯುವ ಭಾಗವತರಾದ ಭವ್ಯಶ್ರೀ ಹರೀಶ ಕುಲ್ಕುಂದ ಭಾಗವತಿಕೆಯಲ್ಲಿ ಪ್ರಸಂಗ ಮೂಡಿಬರಲಿದೆ. ಹಿಮ್ಮೇಳದಲ್ಲಿ ಸವಿನಯ ನೆಲ್ಲಿತೀರ್ಥ, ಮಯೂರ ನಾಯ್ಗ ಭಾಗವಹಿಸುವರು. ಚಕ್ರತಾಳದಲ್ಲಿ ಭವ್ಯಶ್ರೀ ಅವರ ಪುತ್ರ ಅಗಸ್ತ್ಯ ಕುಲ್ಕುಂದ ಕಾಣಿಸಿಕೊಳ್ಳುವರು ಸ್ಥಳೀಯ ಕಲಾವಿದರು ಹಿಮ್ಮೇಳದಲ್ಲಿ ಇರಲಿದ್ದಾರೆ.ಯಕ್ಷ ಶ್ರೀ ರಕ್ಷ ಗೌರವ ಪ್ರಶಸ್ತಿ 2024:
ಈ ಬಾರಿಯ ''''''''ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿ''''''''ಯನ್ನು ಸ್ಥಳೀಯ ಹಿರಿಯ ಕಲಾವಿದ ವೆಂಕಟೇಶ ಶಾಸ್ತ್ರಿ ಪುತ್ತಿಗೆ ಅವರಿಗೆ ಪ್ರದಾನ ಮಾಡಲಾಗುವುದು. ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಧಾನ ಸಂಚಾಲಕ ಶಶಿಧರ ಶೆಟ್ಟಿ ಬರೋಡ ಮತ್ತು ಯುಎಇ ಯ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.ಅಭ್ಯಾಸ ಕೇಂದ್ರದ ಸಂಚಾಲಕ ದಿನೇಶ ಶೆಟ್ಟಿ ಕೊಟ್ಟಿಂಜ ನೇತೃತ್ವದಲ್ಲಿ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಮತ್ತು ಶರತ್ ಕುಡ್ಲ ನಿರ್ದೇಶನದಲ್ಲಿ, ಕೇಂದ್ರದ ಎಲ್ಲಾ ಹಿರಿಯ -ಕಿರಿಯ ಕಲಾವಿದರು ಪೂರ್ಣ ಪ್ರಮಾಣದ ಪ್ರದರ್ಶನಕ್ಕೆ ಸರ್ವಸಿದ್ಧತೆಯಲ್ಲಿದ್ದಾರೆ.
ಪ್ರಸಾಧನ ಕಲೆಯಲ್ಲಿ ಸಿದ್ಧಹಸ್ತರಾದ ಕಿನ್ನಿಗೋಳಿ ಮೋಹಿನೀ ಕಲಾ ಸಂಪದದ ಕಲಾವಿದ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ನಿತಿನ್ ಕುಂಪಲ, ಮನೋಜ್ ಶೆಟ್ಟಿಗಾರ್ ಹಳೆಯಂಗಡಿ ಮೊದಲಾದವರು ಈಗಾಗಲೇ ದುಬೈ ತಲುಪಿ ಭರದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಭ್ಯಾಸ ಕೇಂದ್ರದ ಮಾಧ್ಯಮ ಪ್ರಚಾರ ಸಂಯೋಜಕ ಗಿರೀಶ್ ನಾರಾಯಣ್ ಕಾಟಿಪಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.