ದುಬಾರೆ ಆನೆ ಶಿಬಿರ: 19 ವರ್ಷದ ಗಂಡಾನೆ ಸಾವು

KannadaprabhaNewsNetwork |  
Published : Sep 30, 2026, 02:45 AM IST
 | Kannada Prabha

ಸಾರಾಂಶ

ದುಬಾರೆ ಆನೆ ಶಿಬಿರದಲ್ಲಿ ಕಳೆದ ಏಪ್ರಿಲ್‌ನಿಂದ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದೆ.

ಕುಶಾಲನಗರ : ದುಬಾರೆ ಆನೆ ಶಿಬಿರದಲ್ಲಿ ಕಳೆದ ಏಪ್ರಿಲ್‌ನಿಂದ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದೆ.

ಕಾದಾಟದ ವೇಳೆ ಗಾಯಗೊಂಡು, ಮುರಿದ ದಂತದೊಂದಿಗೆ ಆನೆ ದುಬಾರೆ ಶಿಬಿರಕ್ಕೆ ಬಂದಿತ್ತು. ಅರಣ್ಯ ಇಲಾಖೆಯ ಪಶುವೈದ್ಯರು ಆನೆಯನ್ನು ಪ್ರತ್ಯೇಕವಾಗಿರಿಸಿ, ಯಾವುದೇ ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ವಿಶೇಷ ಕಾಳಜಿ ವಹಿಸಿದ್ದರು. ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರವಾಗಿ ಆ್ಯಂಟಿಬಯೋಟಿಕ್ಸ್, ನೋವು ನಿವಾರಕಗಳು, ಗಾಯಗಳಿಗೆ ಔಷಧೋಪಚಾರ ಹಾಗೂ ಅಗತ್ಯ ಪೋಷಕಾಂಶಗಳನ್ನು ನೀಡಲಾಗುತ್ತಿತ್ತು.

ಹೆಚ್ಚಿನ ತಜ್ಞ ಚಿಕಿತ್ಸೆಗಾಗಿ ‘ವೈಲ್ಡ್‌ಲೈಫ್ ಎಸ್‌ಒಎಸ್’ ಸಂಸ್ಥೆಯ ನುರಿತ ವನ್ಯಜೀವಿ ಪಶುವೈದ್ಯರ ತಂಡವನ್ನು ಕರೆಸಿ ಜಂಟಿ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಡಿಜಿಟಲ್ ಎಕ್ಸ್‌ರೇ ಪರೀಕ್ಷೆಯಲ್ಲಿ ಆನೆಯ ಎಡ ಮೊಣಕೈ ಮೂಳೆಯಲ್ಲಿ ಬಿರುಕು ಇರುವುದು ದೃಢಪಟ್ಟಿತ್ತು.

ತಜ್ಞ ವೈದ್ಯರ ಸಲಹೆಯಂತೆ ಸುಧಾರಿತ ಚಿಕಿತ್ಸೆಯನ್ನು ಮುಂದುವರಿಸಲಾಗಿದ್ದು, ಕಾಲಿನ ಮೇಲಿನ ಒತ್ತಡ ಕಡಿಮೆ ಮಾಡಲು ಆನೆಯನ್ನು ಕ್ರಾಲ್‌ನಿಂದ ಹೊರಗೆ ಬಿಡಲಾಗಿತ್ತು. ಗಾಯಗೊಂಡ ಕಾಲನ್ನು ಸ್ಥಿರವಾಗಿಡಲು ಸೆಪ್ಟೆಂಬರ್ 27ರಂದು ತಜ್ಞರ ಮೂಲಕ ಫೈಬರ್ ಕ್ಯಾಸ್ಟಿಂಗ್ ಮಾಡಲಾಗಿತ್ತು.

ಆದರೆ ಮಂಗಳವಾರ ಆನೆ ಏಕಾಏಕಿ ಕುಸಿದು ಬಿದ್ದಿದ್ದು, ತಕ್ಷಣವೇ ಐವಿ ದ್ರವ ಚಿಕಿತ್ಸೆ ಹಾಗೂ ತೀವ್ರ ನಿಗಾ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.ಆನೆಯ ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಪ್ರಾಥಮಿಕ ಪಶುವೈದ್ಯಕೀಯ ವರದಿಗಳ ಪ್ರಕಾರ ದೀರ್ಘಕಾಲದ ಮೂಳೆ ಮುರಿತದ ತೊಂದರೆ, ನಿರಂತರ ಅನಾರೋಗ್ಯ ಹಾಗೂ ದೈಹಿಕ ದೌರ್ಬಲ್ಯದಿಂದಾಗಿ ಆನೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಎಲ್‌ಇ ಫಿಸಿಯೋಥೆರಪಿ ವಿಭಾಗಕ್ಕೆ ಪ್ರಶಸ್ತಿ ಗೌರವ
ಸರ್ಕಾರ ಮಾಡಲಾಗದ ಸಾಧನೆ ಎಕ್ಸೆಲ್ ವಿದ್ಯಾ ಸಂಸ್ಥೆ ಮಾಡಿವೆ: ಭೋಜೆ ಗೌಡ