ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಕ್ಕಿಜ್ವರ ಭೀತಿ - ಇಳಿದ ಚಿಕನ್‌, ಏರಿದ ಮಟನ್ ದರ!

KannadaprabhaNewsNetwork | Updated : Mar 04 2025, 12:39 PM IST

ಸಾರಾಂಶ

ಹಕ್ಕಿಜ್ವರ ಭೀತಿಯು ಚಿಕನ್‌ ವಹಿವಾಟಿನ ಮೇಲೆ ಕೊಂಚ ಪರಿಣಾಮ ಬೀರಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಕ್ಕಿಜ್ವರ ಭೀತಿಯು ಈಗ ಧಾರವಾಡ ಜಿಲ್ಲೆ ಮೇಲೂ ಪರಿಣಾಮ ಬೀರಿದೆ. ಇದರಿಂದಾಗಿ ಚಿಕನ್‌ ವಹಿವಾಟಿನ ಮೇಲೆ ಕೊಂಚ ಪರಿಣಾಮ ಬಿದ್ದಿದೆ. ಜತೆಗೆ ಮಾಂಸ ಪ್ರಿಯರು ಚಿಕನ್‌ ಖರೀದಿಸುವುದನ್ನು ಕಡಿಮೆ ಮಾಡಿ ಮಟನ್‌ ಖರೀದಿಗೆ ಮುಂದಾಗುತ್ತಿರುವುದರಿಂದ ಮಟನ್‌ ಬೆಲೆಯಲ್ಲೂ ಏರಿಕೆ ಕಂಡಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದ ಬಳಿಕ ನಮ್ಮ ರಾಜ್ಯದಲ್ಲೂ ದಿನೇ ದಿನೇ ಹಕ್ಕಿಜ್ವರ ಪ್ರಕರಣಗಳು ಹೆಚ್ಚಾಗುತ್ತಿರುವುದು ಮಾಂಸಪ್ರಿಯರ ಆತಂಕಕ್ಕೆ ಕಾರಣವಾಗಿದೆ.

ಹೆಚ್ಚಿದ ಬೇಡಿಕೆ

ಹಕ್ಕಿಜ್ವರದ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ ಚಿಕನ್‌ ಮಾರಾಟ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಇದು ಚಿಕನ್ ವ್ಯಾಪಾರದ ಮೇಲೆ ಪರಿಣಾಮ ಬೀರಿದ್ದು, ಕಳೆದ 2-3 ದಿನಗಳಿಂದ ಮಾರಾಟ ಕುಸಿದಿದೆ. ಮಾಂಸಪ್ರಿಯರು ಚಿಕನ್‌ ಬಿಟ್ಟು ಮಟನ್‌ಗೆ ಮೊರೆಹೋಗುತ್ತಿರುವುದು ಕುರಿ, ಮೇಕೆ ಮಾಂಸ ಬೆಲೆ ಏರಿಕೆಯಾಗಲು ಕಾರಣವಾಗಿದೆ.

ಜಿಲ್ಲೆಯಲ್ಲಿ ಎಲ್ಲಿಯೂ ಹಕ್ಕಿಜ್ವರದ ಪ್ರಕರಣ ಕಂಡುಬರದಿದ್ದರೂ ಮಾಂಸಪ್ರಿಯರು ಚಿಕನ್‌ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. 2-3 ದಿನಗಳ ಹಿಂದೆ ಕೆಜಿ ಚಿಕನ್‌ ₹220-₹230ಕ್ಕೆ ಮಾರಾಟವಾಗುತ್ತಿತ್ತು. ಆದರೆ, ಈಗ ₹200 ಕೆಜಿಗೆ ಮಾರಾಟವಾಗುತ್ತಿದ್ದರೂ ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ. ಇನ್ನು ಕೆಜಿಗೆ ₹700-720ಕ್ಕೆ ದೊರೆಯುತ್ತಿದ್ದ ಕುರಿ, ಮೇಕೆ ಮಾಂಸವನ್ನು ಈಗ ₹710-750 ಕೊಟ್ಟು ಖರೀದಿಸುವಂತಾಗಿದೆ.

14.60 ಲಕ್ಷ ಕೋಳಿಗಳು

ಧಾರವಾಡ ಜಿಲ್ಲೆಯಲ್ಲಿ 14.60 ಲಕ್ಷ ಕೋಳಿ ಸಾಕಲಾಗುತ್ತಿದೆ. ಕಲಘಟಗಿ, ದುಮ್ಮವಾಡ, ಸಾಣಾಪುರ, ಕಿತ್ತೂರು, ರಾಯನಾಳ ಸೇರಿದಂತೆ ಧಾರವಾಡದ ಅಕ್ಕಪಕ್ಕದ ಹಳ್ಳಿಗಳಲ್ಲಿ ಕೋಳಿ ಫಾರ್ಮ್‌ಗಳಿಂದ ಜಿಲ್ಲಾದ್ಯಂತ ಇರುವ ಚಿಕನ್‌ ಶಾಪ್‌ಗಳಿಗೆ ಕೋಳಿ ಸರಬರಾಜು ಮಾಡಲಾಗುತ್ತದೆ. ಹು-ಧಾ ಮಹಾನಗರದಲ್ಲಿಯೇ 800ಕ್ಕೂ ಅಧಿಕ ಚಿಕನ್‌ ಅಂಗಡಿಗಳಲ್ಲಿ ನಿತ್ಯವೂ 35-40 ಸಾವಿರ ಕೋಳಿಗಳು ಮಾರಾಟವಾಗುತ್ತಿದೆ. 

ಹಕ್ಕಿಜ್ವರದ ಬರೆ:

ಮಾ. 2ರಿಂದ ರಂಜಾನ್‌ ಉಪವಾಸ ವ್ರತಾಚರಣೆ ಆರಂಭವಾಗಿದೆ. ಬಹುತೇಕ ಮುಸಲ್ಮಾನ್ ಬಾಂಧವರು ಮಾಂಸಪ್ರಿಯರು. ಅದರಲ್ಲೂ ಚಿಕನ್‌ ಪ್ರಿಯರೇ ಹೆಚ್ಚು. ಈಗ ಹಕ್ಕಿಜ್ವರದ ಸುದ್ದಿ ಎಲ್ಲೆಡೆ ಹರಡಿರುವುದು ರಂಜಾನ್‌ ಉಪವಾಸ ನಿರತರಲ್ಲೂ ಕೊಂಚ ಭಯವನ್ನುಂಟು ಮಾಡಿದೆ. ಹಾಗಾಗಿ ಶೇ. 30ಕ್ಕೂ ಅಧಿಕ ಮುಸಲ್ಮಾನ ಬಾಂಧವರು ಚಿಕನ್‌ ಬಿಟ್ಟು ಮಟನ್‌ ಖರೀದಿಗೆ ಮುಂದಾಗುತ್ತಿರುವುದು ನಗರದಲ್ಲಿ ಕಂಡುಬರುತ್ತಿದೆ.

ಬೇಸಿಗೆಯಲ್ಲಿ ಸಾಕಾಣಿಕೆ ಕಡಿಮೆ

ಬಿಸಿಲಿನ ಬೇಗೆ ತಡೆದುಕೊಳ್ಳದೇ ಕೋಳಿಗಳು ಅಸು ನೀಗುವುದು ಸರ್ವೇ ಸಾಮಾನ್ಯ. ಈ ವೇಳೆ ಫಾರ್ಮ್‌ಗಳಲ್ಲೂ ಕೋಳಿ ಸಾಕಾಣಿಕೆ ತುಂಬಾ ಕಡಿಮೆಯಾಗಿರುತ್ತದೆ. ಈ ವೇಳೆ ಪ್ರತಿ ವರ್ಷ ಬೆಲೆ ಏರಿಕೆಯಾಗುತ್ತಿತ್ತು. ಆದರೆ, ಈಗ ಎಲ್ಲೆಡೆ ಹಕ್ಕಿಜ್ವರ ಸುದ್ದಿ ಹಬ್ಬಿರುವುದರಿಂದ 2-3 ದಿನಗಳಿಂದ ಕೋಳಿಗಳನ್ನು ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಕೋಳಿ ಫಾರ್ಮ್‌ನ ಮಾಲೀಕ ಮನೋಹರ "ಕನ್ನಡಪ್ರಭ "ಕ್ಕೆ ತಿಳಿಸಿದರು.

ಇಳಿಕೆ...

ಹಕ್ಕಿಜ್ವರ ಭೀತಿ ಆರಂಭವಾದಾಗಿನಿಂದ ಚಿಕನ್‌ ಖರೀದಿಸುವವರ ಸಂಖ್ಯೆ ಅಲ್ಪಪ್ರಮಾಣದಲ್ಲಿ ಇಳಿಕೆಯಾಗಿದೆ. ಅಂಗಡಿಗೆ ಆಗಮಿಸುವ ಹಲವು ಗ್ರಾಹಕರು ಹಕ್ಕಿಜ್ವರದ ಕುರಿತು ಕೇಳುತ್ತಾರೆ. ಜಿಲ್ಲೆಯಲ್ಲಿ ಈ ಸಮಸ್ಯೆಯಾಗಿಲ್ಲ ಎಂದು ಹೇಳಿ ಹೇಳಿ ಸಾಕಾಗಿದೆ.

- ಮಲ್ಲಿಕ್ ಮುಲ್ಲಾ, ಚಿಕನ್‌ ಅಂಗಡಿ ಮಾಲೀಕಮಟನ್ ಖರೀದಿ

ರಂಜಾನ್‌ ಉಪವಾಸ ವ್ರತಾಚರಣೆ ಆರಂಭವಾಗಿದ್ದು ಈ ವೇಳೆ ಹಕ್ಕಿಜ್ವರದ ಭೀತಿ ಎದುರಾಗಿದೆ.

ಮುಸಲ್ಮಾನರು ಚಿಕನ್‌ ಪ್ರಿಯರು. ಹಕ್ಕಿಜ್ವರದಿಂದ ಅನಿವಾರ್ಯವಾಗಿ ಚಿಕನ್‌ ಬಿಟ್ಟು ಮಟನ್‌ ಖರೀದಿಸುತ್ತಿದ್ದೇವೆ.

- ಉಮರಫಾರೂಖ್ ನದಾಫ, ಗ್ರಾಹಕ

ಕೋಳಿ ಜ್ವರದ ಕುರಿತು ಹೆಚ್ಚಿನ ಆತಂಕ ಬೇಡ

ಧಾರವಾಡ: ಜಿಲ್ಲೆಯಲ್ಲಿ ಕೋಳಿ ಜ್ವರದ ಬಗ್ಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಕೋಳಿಗಳಲ್ಲಿ ಮತ್ತು ಇತರೆ ಪಕ್ಷಿಗಳಲ್ಲಿ ಅಸಹಜ ಸಾವು ಕಂಡು ಬಂದಲ್ಲಿ ತಕ್ಷಣ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗಳಿಗೆ ಮಾಹಿತಿ ನೀಡಬೇಕೆಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ. ರವಿ ಸಾಲಿಗೌಡರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಈಗಾಗಲೇ ಕೋಳಿ ಜ್ವರ ಕಂಡುಬಂದಿದೆ. ಇದು ಪಕ್ಷಿಗಳಲ್ಲಿನ ಮಾರಣಾಂತಿಕ ಕಾಯಿಲೆಯಾಗಿದ್ದು, ಶೇ. 50ರಷ್ಟು ಕೋಳಿಗಳು ಸಾಯುವ ಸಂಭವ ಇದೆ. ಇದು ಇನ್ಫ್ಲೂಯನ್ಸ ವೈರಸ್ ( ಎಚ್ 5 ಎನ್ 1) ಸೋಂಕು. ಕೋಳಿಗಳಿಂದ ಮನುಷ್ಯರಿಗೆ ಈ ವೈರಸ್ ಹರಡುವ ಸಂಭವ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಕೋಳಿ ಮತ್ತು ಮೊಟ್ಟೆ ಸೇವಿಸಲು ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ, ಮೊಟ್ಟೆ ಮತ್ತು ಕೋಳಿ ಮಾಂಸ ಚೆನ್ನಾಗಿ ಬೇಯಿಸಿ ಆಹಾರವಾಗಿ ಉಪಯೋಗಿಸಬಹುದು ಎಂದಿರುವ ಅವರು, ಭಾರತೀಯ ಅಡುಗೆ ಪದ್ಧತಿಯಲ್ಲಿ ಈ ವೈರಸ್ ಜೀವಂತವಾಗಿರಲು ಸಾಧ್ಯವಿಲ್ಲ. ಹಾಗಾಗಿ, ಸಾರ್ವಜನಿಕರು ಕೋಳಿ ಜ್ವರದ ಬಗ್ಗೆ ಹೆಚ್ಚಿನ ಆತಂಕಪಡುವ ಅವಶ್ಯಕತೆ ಇಲ್ಲ. ಧಾರವಾಡ ಜಿಲ್ಲೆಯಲ್ಲಿ 14.60 ಲಕ್ಷ ಕೋಳಿ ಸಾಕಲಾಗುತ್ತಿದೆ. ಇಲ್ಲಿಯ ವರೆಗೆ ಯಾವುದೇ ಪ್ರಕರಣಗಳು ಜಿಲ್ಲಾದ್ಯಂತ ಕಂಡು ಬಂದಿರುವುದಿಲ್ಲ. ಆದರೂ ಮುನ್ನೆಚ್ಚರಿಕೆಯಾಗಿ ಜೈವಿಕ ನಿಯಂತ್ರಣ ಕ್ರಮ ಕೈಗೊಳ್ಳಲು ಎಲ್ಲ ವಾಣಿಜ್ಯ ಕೋಳಿ ಸಾಕಾಣಿಕೆ ಕೇಂದ್ರಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Share this article