ದೇವಸ್ಥಾನದಲ್ಲಿ ಅನ್ನಸಂತರ್ಪಣೆಯಲ್ಲಿ ಊಟ ಮಾಡಿದ 60ಕ್ಕೂ ಹೆಚ್ಚು ಮಂದಿಗೆ ವಾಂತಿಭೇದಿ

KannadaprabhaNewsNetwork | Updated : Mar 04 2025, 12:12 PM IST

ಸಾರಾಂಶ

ಗ್ರಾಮದ ಶ್ರೀಚನ್ನಬೀರೇಶ್ವರಸ್ವಾಮಿ ದೇವಸ್ಥಾನದಲ್ಲಿ ಹಬ್ಬದ ಅಂಗವಾಗಿ ಭಕ್ತರಿಗೆ ಅನ್ನಸಂತರ್ಪಣೆ(ಪರ) ನಡೆದಿದೆ. ನೂರಾರು ಮಂದಿ ಜನರು ಅವರೆಕಾಳು, ರಾಗಿಮುದ್ದೆ ಊಟ ಮಾಡಿದ್ದಾರೆ. ಅದಾದ ಬಳಿಕ ಫುಡ್ ಫಾಯಿಜನ್‌ನಿಂದ ಶನಿವಾರ ಮೂರ್‍ನಾಲ್ಕು ಮಂದಿಗೆ ವಾಂತಿಭೇದಿ ಕಾಣಿಸಿಕೊಂಡಿದೆ.

 ಪಾಂಡವಪುರ : ಶ್ರೀಚನ್ನಬೀರೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆದ ಅನ್ನಸಂತರ್ಪಣೆಯಲ್ಲಿ ಊಟ ಮಾಡಿದ ಸುಮಾರು 60ಕ್ಕೂ ಹೆಚ್ಚು ಮಂದಿ ಭಕ್ತರಲ್ಲಿ ವಾಂತಿ ಭೇದಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಭಾನುವಾರ ರಾತ್ರಿ ತಾಲೂಕಿನ ನರಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಶ್ರೀಚನ್ನಬೀರೇಶ್ವರಸ್ವಾಮಿ ದೇವಸ್ಥಾನದಲ್ಲಿ ಹಬ್ಬದ ಅಂಗವಾಗಿ ಭಕ್ತರಿಗೆ ಅನ್ನಸಂತರ್ಪಣೆ(ಪರ) ನಡೆದಿದೆ. ನೂರಾರು ಮಂದಿ ಜನರು ಅವರೆಕಾಳು, ರಾಗಿಮುದ್ದೆ ಊಟ ಮಾಡಿದ್ದಾರೆ. ಅದಾದ ಬಳಿಕ ಫುಡ್ ಫಾಯಿಜನ್‌ನಿಂದ ಶನಿವಾರ ಮೂರ್‍ನಾಲ್ಕು ಮಂದಿಗೆ ವಾಂತಿಭೇದಿ ಕಾಣಿಸಿಕೊಂಡಿದೆ.

ಭಾನುವಾರ ಸಂಜೆ ವೇಳೆಗೆ ಅದೇ ಗ್ರಾಮದ ಸುಮಾರು 60ಕ್ಕೂ ಅಧಿಕ ಮಂದಿಗೆ ವಾಂತಿಭೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ 24ಕ್ಕೂ ಅಧಿಕ ಮಂದಿಯನ್ನು ಚಿಕಿತ್ಸೆಗಾಗಿ ಪಾಂಡವಪುರ ಆಸ್ಪತ್ರೆಗೆ ರವಾನಿಸಿ ಚಿಕತ್ಸೆ ಕೊಡಿಸಲಾಗಿದೆ.

ವಿಷಯ ತಿಳಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ತಹಸೀಲ್ದಾರ್ ಸಂತೋಷ್‌ಕುಮಾರ್, ಇಒ ಲೋಕೇಶ್‌ಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಸೇರಿದಂತೆ ಅಧಿಕಾರಿಗಳ ತಂಡ ನರಹಳ್ಳಿ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಗ್ರಾಮದಲ್ಲೂ ಹಲವು ಮಂದಿಗೆ ತೀವ್ರ ವಾಂತಿಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮದ ಅಂಬೇಡ್ಕರ್ ಭವನದಲ್ಲಿಯೇ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭಿಸಿ ಅಸ್ವಸ್ಥಗೊಂಡಿದ್ದ 30ಕ್ಕೂ ಅಧಿಕ ಮಂದಿಗೆ ಚಿಕಿತ್ಸೆಕೊಡಿಸಿದ್ದಾರೆ.

ಜತೆಗೆ ದೇವಸ್ಥಾನದ ಬಳಿ ನಡೆದ ಅನ್ನಸಂತರ್ಪಣೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಆದರೆ, ಅನ್ನಸಂತರ್ಪಣೆ ನಡೆದು ಎರಡು ದಿನ ಕಳೆದಿರುವ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ಭಕ್ತರಿಗೆ ಮಾಡಿದ್ದ ಊಟ ದೊರೆತಿಲ್ಲ. ಇದ್ದರಿಂದಾಗಿ ಗ್ರಾಮದಲ್ಲಿ ನೀರಿನ ಮಾದರಿ ಪರೀಕ್ಷೆ ನಡೆಸಿದ್ದಾರೆ.

ಗ್ರಾಮದಲ್ಲಿ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಜೊತೆಗೆ ತಾಲೂಕಿನಲ್ಲಿ ಎಲ್ಲೆಲ್ಲಿ ಪರ ನಡೆಸಲಾಗುತ್ತಿದೆಯೋ ಎಲ್ಲಾ ಕಡೆ ತೆರಳಿ ಅರಿವು ಮೂಡಿಸಲಾಗುವುದು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಭೇಟಿ:

ನರಹಳ್ಳಿಯಲ್ಲಿ ಫುಡ್‌ ಫಾಯಿಜನ್ ನಿಂದ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ತಿಳಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಪಾಂಡವಪುರ ಸಾರ್ವಜನಿಕ ಆಸ್ಪತ್ರೆಗೆ ಭೇಟಿಕೊಟ್ಟು ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.

ಬಳಿಕ ವೈದ್ಯರ ಬಳಿ ಅಸ್ವಸ್ಥಗೊಂಡವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಸರಿಯಾದ ಚಿಕಿತ್ಸೆ ನೀಡಬೇಕು. ಹೆಚ್ಚಿನ ಚಿಕಿತ್ಸೆಗೆ ಅಗತ್ಯಬಿದ್ದರೆ ಮಂಡ್ಯ, ಮೈಸೂರಿಗೆ ರವಾನಿಸುವಂತೆಯೂ ವೈದ್ಯರಿಗೆ ಸೂಚಿಸಿದ್ದಾರೆ.

Share this article