ಕೆಲಸದ ಒತ್ತಡದಿಂದ ಬೇಸತ್ತು ಪ್ರತಿಭಟನೆ

KannadaprabhaNewsNetwork |  
Published : Sep 27, 2024, 01:27 AM IST
26ಎಚ್ಎಸ್ಎನ್7 : ಕೈಗೆ ಕಪ್ಪು ಪಟ್ಟಿ ಧರಿಸಿ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ಆರಂಭಿಸಿದ ಗ್ರಾಮ ಆಡಳಿತಾಧಿಕಾರಿಗಳು. | Kannada Prabha

ಸಾರಾಂಶ

ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಸೇವಾ ಸೌಲಭ್ಯಗಳನ್ನು ನೀಡುವಂತೆ, ಮೊಬೈಲ್ ಆ್ಯಪ್‌ಗಳಲ್ಲಿ ನಿರಂತರವಾಗಿ ಕೆಲಸ ಮಾಡುವಂತೆ ಹೇರಲಾಗಿರುವ ಒತ್ತಡವನ್ನು ನಿಲ್ಲಿಸಲು ಆಗ್ರಹಿಸಿ ತಮ್ಮ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ನಗರದ ತಹಸೀಲ್ದಾರ್‌ ಕಚೇರಿ ಮುಂದೆ ಕೈ ತೋಳಿಗೆ ಕಪ್ಪು ಪಟ್ಟಿ ಧರಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದಿಂದ ಗುರುವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಸೇವಾ ಸೌಲಭ್ಯಗಳನ್ನು ನೀಡುವಂತೆ, ಮೊಬೈಲ್ ಆ್ಯಪ್‌ಗಳಲ್ಲಿ ನಿರಂತರವಾಗಿ ಕೆಲಸ ಮಾಡುವಂತೆ ಹೇರಲಾಗಿರುವ ಒತ್ತಡವನ್ನು ನಿಲ್ಲಿಸಲು ಆಗ್ರಹಿಸಿ ತಮ್ಮ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ನಗರದ ತಹಸೀಲ್ದಾರ್‌ ಕಚೇರಿ ಮುಂದೆ ಕೈ ತೋಳಿಗೆ ಕಪ್ಪು ಪಟ್ಟಿ ಧರಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದಿಂದ ಗುರುವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾಧ್ಯಕ್ಷ ಜೆ.ಪಿ. ವಿಶ್ವನಾಥ್ ಮಾಧ್ಯಮದೊಂದಿಗೆ ಮಾತನಾಡಿ, ಮೊಬೈಲ್ ತಂತ್ರಾಂಶಗಳ ಕೆಲಸದ ವಿಚಾರವಾಗಿ ಇದುವರೆಗೂ ಆಗಿರುವ ಎಲ್ಲಾ ಅಮಾನತುಗಳನ್ನು ತಕ್ಷಣವೆ ರದ್ದುಪಡಿಸಿ ಹಿಂಪಡೆಯಬೇಕು. ಚುನಾವಣೆಗಳ ಸಂದರ್ಭದಲ್ಲಿ, ಹಾಸನಾಂಬೆ ದೇವಿ ಬಾಗಿಲು ತೆರೆದಾಗ ನಮ್ಮ ಸೇವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಹಗಲು ರಾತ್ರಿ ಎನ್ನದೆ ತಿಂಗಳಾನುಗಟ್ಟಲೆ ಕೆಲಸ ಮಾಡುವುದರಿಂದ ತಿಂಗಳ ವೇತನ ಕೊಡಬೇಕು. ಗ್ರಾಮ ಸಹಾಯಕರಿಗೆ ಸೇವಾ ಭದ್ರತೆಯೊಂದಿಗೆ ವೇತನ ನಿಗದಿ ಮಾಡಿ ಅವರ ಹುದ್ದೆಯನ್ನು ಖಾಯಂ ಮಾಡಬೇಕು ಎಂದು ಆಗ್ರಹಿಸಿದರು.

ಸರಕಾರ ತಾಂತ್ರಿಕ ಕೆಲಸ ಮಾಡಲು ಹುದ್ದೆ ನಿಗದಿ ಮಾಡಿದ್ದು, ನಿಗದಿತ ಶ್ರೇಣಿ ಆದೇಶ ಮಾಡಿಲ್ಲ. ಏಕಕಾಲದಲ್ಲಿ ಸುಮಾರು ೧೫-೨೦ ಆ್ಯಪ್‌ಗಳಲ್ಲಿ ಕೆಲಸ ಮಾಡುತ್ತಿದೇವೆ. ಹಾಗಾಗಿ ಮೂಲಭೂತ ಸೌಕರ್ಯಗಳಾದ ಸುಸಜ್ಜಿತ ಕಚೇರಿ, ಕುರ್ಚಿ, ಟೇಬಲ್, ಲ್ಯಾಪ್‌ಟಾಪ್, ಆಲ್ಮೇರಾ, ಮೊಬೈಲ್, ಸಿಮ್, ಸ್ಕ್ಯಾನರ್‌ ಸೌಲಭ್ಯ ಒದಗಿಸಬೇಕು. ಸೌಲಭ್ಯಗಳನ್ನು ನೀಡದೆ ನಿಗದಿತ ಸಮಯದಲ್ಲಿ ಕೆಲಸ ಮಾಡಿ ರ‍್ಯಾಂಕ್ ಗುರಿ ತಲುಪಬೇಕು ಎಂದು ಒತ್ತಡ ಹೇರುತ್ತಿದ್ದು, ಸೇವಾ ಸೌಲಭ್ಯ ಮತ್ತು ಭದ್ರತೆ ನೀಡುತ್ತಿಲ್ಲ. ಅಲ್ಲದೇ ಕೌಟುಂಬಿಕ, ಆರೋಗ್ಯದ ಹಿತದೃಷ್ಟಿಯಿಂದ ರದ್ದುಗೊಳಿಸಿರುವ ಅಂತರ ಜಿಲ್ಲಾ ವರ್ಗಾವಣೆಯನ್ನು ವಾಪಾಸು ಪಡೆಯಬೇಕು ಎಂದರು.

ಪೊಲೀಸ್ ಮತ್ತು ಅರಣ್ಯ ಇಲಾಖೆಯಲ್ಲಿ ಕೊಡುತ್ತಿರುವ ರಿಸ್ಕ್ ಅಲೋಯನ್ಸ್‌ ನಮಗೂ ಕೊಡಬೇಕು. ಕೆಲಸಗಳ ಒತ್ತಡದಿಂದ ರಾಜ್ಯದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಗ್ರಾಮ ಆಢಳಿತಾಧಿಕಾರಿಗಳು ಹೃದಯ ಕಾಯಿಲೆಗೆ ತುತ್ತಾಗಿ ಮರಣ ಹೊಂದಿದ್ದಾರೆ. ಕೆಲಸಕ್ಕೆ ಒತ್ತಡ ಮಾಡದೆ ಕಾಲಾವಕಾಶ ನೀಡಿದರೆ ಗುಣಮಟ್ಟದ ಕೆಲಸ ಮಾಡುತ್ತೇವೆ. ರಜೆ ದಿನಗಳನ್ನು ನಮ್ಮ ಕುಟುಂಬದೊಡನೆ ಕಳೆಯಲು, ಹಬ್ಬಗಳನ್ನು ಆಚರಿಸಲು ಅವಕಾಶ ಕಲ್ಪಿಸಬೇಕು. ರಜೆ ದಿನಗಳಲ್ಲೂ ಸರಕಾರಿ ಕೆಲಸಗಳನ್ನು ಮಾಡುತ್ತಿರುವುದರಿಂದ ಅನೇಕ ಕುಟುಂಬಗಳಲ್ಲಿ ಕಲಹ ಉಂಟಾಗಿ ಅಶಾಂತಿ ನಿರ್ಮಾಣವಾಗಿದೆ ಎಂದರು. ಸರ್ಕಾರ ಕೂಡಲೆ ನಮ್ಮ ಅಹವಾಲನ್ನು ಪರಿಗಣಿಸದಿದ್ದರೆ, ರಾಜ್ಯ ಸಂಘದ ನಿರ್ದೇಶನದಂತೆ ಮುಂದಿನ ಪ್ರತಿಭಟನೆಯನ್ನು ಸೆ. ೨೭ರ ಶುಕ್ರವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಗ್ರಾಮ ಲೆಕ್ಕಾಧಿಕಾರಿಗಳು ಕೈ ತೋಳಿಗೆ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಉಪಾಧ್ಯಕ್ಷೆ ಶ್ರೀಲಕ್ಷ್ಮಿ, ಬಸವರಾಜು ಮಾದಾರ್, ಕೃಷ್ಣಪ್ಪ, ಹರೀಶ್ ರಾಜ್ ಅರಸ್, ಸುಹಾಸ್, ವಸಂತ ಕುಮಾರ್ ಇತರರು ಉಪಸ್ಥಿತರಿದ್ದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್