ಕನ್ನಡಪ್ರಭ ವಾರ್ತೆ, ಭದ್ರಾವತಿ
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2 ತಿಂಗಳಿನಿಂದ ಶಾಸಕರು ಕ್ಷೇತ್ರದಲ್ಲಿ ಕಾಣುತ್ತಿಲ್ಲ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಅವರ ಕುಟುಂಬದವರು ಪಾಲ್ಗೊಂಡು ಉದ್ಘಾಟಿಸುತ್ತಿದ್ದಾರೆ. ಶಾಸಕರು ಮಾಡಬೇಕಾಗಿರುವ ಎಲ್ಲ ಕೆಲಸಗಳನ್ನು ಅವರ ಸಹೋದರರು, ಮಕ್ಕಳು ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಕ್ಷೇತ್ರದಲ್ಲಿ ಒಸಿ, ಇಸ್ಪೀಟ್ ಸೇರಿದಂತೆ ಅಕ್ರಮ ಚಟುವಟಿಕೆಗಳು ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕುವವರು ಯಾರು ಇಲ್ಲದಂತಾಗಿದೆ. ಅಧಿಕಾರಿಗಳು, ಶಾಸಕರ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದಾರೆ. ತಮ್ಮ ಜವಾಬ್ದಾರಿಗಳನ್ನು ಮರೆತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆಂದು ಆರೋಪಿಸಿ ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಸರ್ಕಾರಿ ಕಚೇರಿಗಳಲ್ಲಿ ನಡೆಯಬೇಕಾದ ಕೆಲಸ ಕಾರ್ಯಗಳು ಶಾಸಕರ ಮನೆಯಲ್ಲಿ ನಡೆಯುತ್ತಿರುವುದು ವಿಪರ್ಯಾಸ. ಶಾಸಕರ ಕುಟುಂಬದವರು ಎಲ್ಲವನ್ನು ನಿಭಾಯಿಸುವುದಾದರೆ ಶಾಸಕರ ಅಗತ್ಯವೇನು? ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿ ಎಂದು ಆಗ್ರಹಿಸಿದರು.
ಪಕ್ಷದ ತಾಲೂಕು ಅಧ್ಯಕ್ಷ ಆರ್.ಕರುಣಾಮೂರ್ತಿ ಮಾತನಾಡಿ, ಖಾಸಗಿ ಕಾರ್ಯಕ್ರಮಗಳನ್ನು ಹೇಗಾದರೂ ಮಾಡಿಕೊಳ್ಳಲಿ. ಆದರೆ, ಸರ್ಕಾರಿ ಕಾರ್ಯಕ್ರಮಗಳನ್ನು ನಿಯಮ ಪ್ರಕಾರ ಮಾಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜೆ.ಪಿ. ಯೋಗೇಶ್, ಎಚ್.ಬಿ. ರವಿಕುಮಾರ್, ಮಧುಸೂದನ್, ನಗರಸಭೆ ಸದಸ್ಯರಾದ ಉದಯ್ ಕುಮಾರ್, ಸವಿತಾ ಉಮೇಶ್, ರೇಖಾ ಪ್ರಕಾಶ್, ಧರ್ಮೇಗೌಡ, ಎಂ.ರಾಜು, ಸುಬ್ಬಣ್ಣ, ರಾಮಕೃಷ್ಣ, ಭಾಗ್ಯಮ್ಮ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿಯಲ್ಲಿ ಬುಧವಾರ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.