ಬಿಎಂಟಿಸಿ ಸಾಮಾನ್ಯ ಮಾಸಿಕ ಪಾಸಿನ ದರದಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ. ಆದರೆ, ಬಿಎಂಟಿಸಿಯ ದೂರದ ಮಾರ್ಗಗಳ ಪ್ರಯಾಣಿಕರ ಅನುಕೂಲಕ್ಕಾಗಿ ಸಾಮಾನ್ಯ ‘ವಿಸ್ತಾರ ಪಾಸು’ಗಳನ್ನು ಪರಿಚಯಿಸಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

ಬೆಂಗಳೂರು : ಬಿಎಂಟಿಸಿ ಸಾಮಾನ್ಯ ಮಾಸಿಕ ಪಾಸಿನ ದರದಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ. ಆದರೆ, ಬಿಎಂಟಿಸಿಯ ದೂರದ ಮಾರ್ಗಗಳ ಪ್ರಯಾಣಿಕರ ಅನುಕೂಲಕ್ಕಾಗಿ ಸಾಮಾನ್ಯ ‘ವಿಸ್ತಾರ ಪಾಸು’ಗಳನ್ನು ಪರಿಚಯಿಸಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

ಕಾರ್ಯಾಚರಣೆ ವ್ಯಾಪ್ತಿಯನ್ನು 65ರಿಂದ 70 ಕಿಮೀವರೆಗೆ

ಬಿಎಂಟಿಸಿ ಸಂಸ್ಥೆಯ ಕಾರ್ಯಾಚರಣೆ ವ್ಯಾಪ್ತಿಯನ್ನು 65ರಿಂದ 70 ಕಿಮೀವರೆಗೆ ವಿಸ್ತರಿಸಲಾಗಿದೆ. ಅದರಿಂದ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ, ಮಾಲೂರು ಸೇರಿದಂತೆ ಬೆಂಗಳೂರು ನಗರ ಸುತ್ತಮುತ್ತಲಿನ ಪ್ರಮುಖ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಬಿಎಂಟಿಸಿ ಬಸ್‌ ಸೇವೆ ನೀಡುತ್ತಿದೆ. ಹೊಸ ಕಾರ್ಯಾಚರಣೆ ವ್ಯಾಪ್ತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನಗರದ ಕೇಂದ್ರಭಾಗದಿಂದ 40 ಕಿಮೀ ವರೆಗಿನ ಪ್ರದೇಶವನ್ನು ಸೀಮಿತ ವ್ಯಾಪ್ತಿಯಲ್ಲಿ ಅದರಾಚೆಗಿನ ಪ್ರದೇಶವನ್ನು ‘ವಿಸ್ತಾರ ವ್ಯಾಪ್ತಿ’ ಎಂದು ವರ್ಗೀಕರಿಸಲಾಗಿದೆ.

ಜೂ. 2ರಿಂದ ಸಾಮಾನ್ಯ ವಿಸ್ತಾರ ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸ್‌

ವಿಸ್ತಾರ ವ್ಯಾಪ್ತಿಯ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಜೂ. 2ರಿಂದ ಸಾಮಾನ್ಯ ವಿಸ್ತಾರ ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸ್‌ಗಳನ್ನು ಪರಿಚಯಿಸಲಾಗಿದೆ. ಪ್ರಸ್ತುತ 1819 ಮಾರ್ಗಗಳಲ್ಲಿ 6295 ಅನುಸೂಚಿಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಅವುಗಳಲ್ಲಿ 96 ಮಾರ್ಗಗಳ 216 ಅನುಸೂಚಿಗಳು ವಿಸ್ತಾರ ವ್ಯಾಪ್ತಿಯಲ್ಲಿ ಸೇವೆ ನೀಡುತ್ತಿವೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಾಮಾನ್ಯ ವಿಸ್ತಾರ ದೈನಿಕ ಪಾಸುಗಳ ಬೆಲೆ 120 ರು., ಸಾಮಾನ್ಯ ವಿಸ್ತಾರ ಮಾಸಿಕ ಪಾಸು ದರ 550 ರು., ಸಾಮಾನ್ಯ ಮಾಸಿಕ ಪಾಸು 1200 ಹಾಗೂ ಸಾಮಾನ್ಯ ವಿಸ್ತಾರ ಮಾಸಿಕ ಪಾಸು 1500 ರು. ನಿಗದಿ ಮಾಡಲಾಗಿದೆ.