ಜಲಕ್ಷಾಮದ ಕಾಟ, ಕೊಡ ನೀರಿಗೂ ಪರದಾಟ

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ಗ್ರಾಮೀಣ ಭಾಗಗಳಲ್ಲಿ ನೀರಿಗಾಗಿ ನೀರೆಯರ ಸಾಹಸ, ಅಫಜಲ್ಪುರ ಪಟ್ಟಣದಲ್ಲಿ ಕುಡಿಯುವ ನೀರಲ್ಲಿ ಕಸ, ಜಲಕ್ಷಾಮದ ಕಾಟ, ಕೊಡ ನೀರಿಗೂ ಪರದಾಟ ಅನುಭವಿಸಬೇಕಾಗಿದೆ.

ಕನ್ನಡಪ್ರಭ ವಾರ್ತೆ ಚವಡಾಪುರ

ಪ್ರಸಕ್ತ ವರ್ಷದ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಮಳೆಗಳು ಬಾರದೆ ಅಫಜಲ್ಪುರ ತಾಲೂಕಿನಾದ್ಯಂತ ಅಂತರ್ಜಲ ಮಟ್ಟ ತಗ್ಗಿದ್ದು ಜಲಕ್ಷಾಮದ ಕಾಟದಿಂದಾಗಿ ಈಗ ಎಲ್ಲಿ ನೋಡಿದರೂ ಕೊಡ ಬಿಂದಿಗೆ ಹಿಡಿದು ನೀರಿಗಾಗಿ ಪರದಾಟ ನಡೆಸುವಂತಾಗುತ್ತಿದೆ.

ಪ್ರತಿ ವರ್ಷದ ವಾಡಿಕೆಯಂತೆ ಈ ವರ್ಷವು ಮಳೆಯಾಗಿದ್ದರೆ ಬೇಸಿಗೆ ಆರಂಭಕ್ಕೆ ಇನ್ನೂ 4 ತಿಂಗಳಿರುವಾಗಲೇ ಜಲಕ್ಷಾಮ ಉಂಟಾಗುತ್ತಿರಲಿಲ್ಲ. ಅಫಜಲ್ಪುರ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿ ಜನ ಪರದಾಡುವಂತಾಗುತ್ತಿರಲಿಲ್ಲ. ಆದರೆ ವಾಡಿಕೆಗಿಂತಲೂ ತೀರಾ ಕಮ್ಮಿ ಮಳೆಯಾದ ಪರಿಣಾಮದಿಂದಾಗಿ ಭೀಮಾ ನದಿಗೆ ನೀರು ಹರಿದು ಬಂದಿಲ್ಲ, ತಾಲೂಕಿನಾದ್ಯಂತ ಜಲ ಮೂಲಗಾದ ಕೆರೆ, ಕುಂಟೆಗಳಲ್ಲಿ ನೀರು ತುಂಬಿಲ್ಲ, ಕೊಳವೆ ಬಾವಿ, ತೆರೆದ ಬಾವಿಗಳಲ್ಲಿ ನೀರು ಖಾಲಿಯಾಗಿ ಒಣಗಿ ನಿಂತಿವೆ. ಹೀಗಾಗಿ ಬೇಸಿಗೆ ಆರಂಭಕ್ಕೂ ಮುನ್ನವೇ ಜಲಕ್ಷಾಮ ಉಂಟಾಗಿದೆ.

ಗ್ರಾಮೀಣ ಭಾಗಗಳಲ್ಲಿ ನೀರಿಗಾಗಿ ನೀರೆಯರ ಸಾಹಸ: ತಾಲೂಕಿನ ಸ್ಟೇಷನ್ ಗಾಣಗಾಪೂರ, ಮಲ್ಲಾಬಾದ, ಮಾತೋಳಿ, ಚಿಂಚೋಳಿ, ರೇವೂರ, ಚಿಣಮಗೇರಾ, ಗೊಬ್ಬೂರ(ಬಿ) ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಈಗ ಜಲಕ್ಷಾಮದ ದುಷ್ಪರಿಣಾಮವನ್ನು ಜನ ಅನುಭವಿಸುತ್ತಿದ್ದು ನಿತ್ಯ ಬಿಂದಿಗೆ ನೀರಿಗಾಗಿ ನೀರೆಯರು ಮನೆಗೆಲಸ ತೊರೆದು ಸಾಸಹ ಪಡುವಂತಾಗಿದೆ. ಯುವಕರು ತಳ್ಳು ಬಂಡಿ, ದ್ವಿಚಕ್ರ ವಾಹನಗಳಲ್ಲಿ ಕೊಡಗಳನ್ನು ಕಟ್ಟಿಕೊಂಡು ದೂರದ ಹೊಲ ಗದ್ದೆಗಳೆಲ್ಲ ಸುತ್ತಾಡಿ ನೀರು ತುಂಬಿಸಿಕೊಂಡು ಮನೆಗಾಸರೆಯಾಗುತ್ತಿದ್ದಾರೆ. ಆದರೆ ನೀರು ತುಂಬುವ ಕೆಲಸದಿಂದಾಗಿ ಬೇರೆ ಕೆಲಸ ಕಾರ್ಯಗಳಿಗೆ ಅಣಿಯಾಗಲು ಸಾದ್ಯವಾಗುತ್ತಿಲ್ಲ.

ಅಫಜಲ್ಪುರ ಪಟ್ಟಣದಲ್ಲಿ ಕುಡಿವ ನೀರಲ್ಲಿ ಕಸ: ಇನ್ನೂ ತಾಲೂಕು ಕೇಂದ್ರವಾದ ಅಫಜಲ್ಪುರ ಪಟ್ಟಣದಲ್ಲೂ ಕುಡಿವ ನೀರು ಪೂರೈಕೆ ಸಮಸ್ಯೆಯಾಗಿದೆ. ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಭೀಮಾ ನದಿಯಲ್ಲೇ ನೀರಿನ ಅಭಾವ ಉಂಟಾಗಿ ನದಿ ಬರೀದಾಗಿದೆ. ಸೊನ್ನದ ಭೀಮಾ ಜಲಾಶಯದಿಂದ ನೀರನ್ನು ಭೀಮಾ ನದಿಗೆ ಹರಿಸಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಜಾಕ್‌ವಾಲ್‌ಗೆ ತಲುಪುವ ನೀರು ಶುದ್ಧೀಕರಣವಾಗದೆ ನೇರವಾಗಿ ನಲ್ಲಿ ಮೂಲಕ ಪಟ್ಟಣದ 23 ಬಡಾವಣೆಗಳಿಗೆ ಸರಬರಾಜು ಆಗುವುದರಿಂದ ಕಲುಷಿತ ಕಸ ಮಿಶ್ರಿತ ಹಾಗೂ ಲಾರ್ವಾ ಬೆಳೆದ ನೀರನ್ನು ಜನ ಕುಡಿದು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಇಂದು ಶಾಸಕರ ದಿಢೀರ ಸಭೆ: ಒಟ್ಟಾರೆ ಅಫಜಲ್ಪುರ ತಾಲೂಕಿನಾದ್ಯಂತ ಅಂತರ್ಜಲ ಮಟ್ಟ ತಗ್ಗಿದ್ದು ಬೇಸಿಗೆ ಆರಂಭಕ್ಕೂ ಮೊದಲೇ ಭೀಕರ ಜಲಕ್ಷಾಮದ ಮುನ್ಸೂಚನೆ ಸಿಕ್ಕಂತಾಗಿದೆ. ಹೀಗಾಗಿ ಕ್ಷೇತ್ರದ ಶಾಸಕ ಎಂ.ವೈ. ಪಾಟೀಲ್ ಅವರು ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ದಿಢೀರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಏನೆಲ್ಲಾ ಚರ್ಚೆಗಳು ನಡೆಯುತ್ತವೆ, ತಾಲೂಕಿನ ಜನರ ನೀರಿನ ಬವಣೆ ನೀಗಿಸಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಾರೋ ಕಾದು ನೋಡಬೇಕಾಗಿದೆ.

Share this article