ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ಮುಖ್ಯರಸ್ತೆಯ ಅಗಲೀಕರಣ ಕಾಮಗಾರಿ ನಿಮಿತ್ತ ಕಟ್ಟಡ ತೆರವು ಕಾರ್ಯ ಮಂಗಳವಾರವೂ ಭರದಿಂದ ಸಾಗಿತು. ನಗರದ ಮುಖ್ಯ ರಸ್ತೆಯ ರಾಮಮಂದಿರ, ಮಸೀದಿ, ಕ್ರಿಶ್ಚಿಯನ್ ರುದ್ರಭೂಮಿ ತಡೆಗೋಡೆ ಸೇರಿದಂತೆ ರಸ್ತೆಯ ಇಕ್ಕೆಲಗಳಲ್ಲೂ ಜೆಸಿಬಿ ಯಂತ್ರ ಅಬ್ಬರಿಸಿದೆ. ತಾಲೂಕು ಕಚೇರಿ ಕಾಂಪೌಂಡ್ , ಅನಿಲ್ ಲಾಡ್ಜ್ ಮುಂಭಾಗದ ಕಟ್ಟೆ, ತಾಲೂಕು ಕಚೇರಿ, ಮಾರುತಿ ಡಾಬಾ ಪಕ್ಕ ಮಂಗಳವಾರ ರಸ್ತೆ ವಿಸ್ತರಣೆ ಕಾರ್ಯಕ್ಕೆ ತೆರವು ಕಾರ್ಯ ನಡೆಯಿತು.ರಸ್ತೆ ಮಧ್ಯದಿಂದ 70 ಅಡಿಯವರೆಗೂ ಕಟ್ಟಡ ತೆರವು ಕಾರ್ಯ ನಡೆಯಲಿದ್ದು, ಸೋಮವಾರವಷ್ಟೇ ಸಚಿವ ಡಿ. ಸುಧಾಕರ್ ₹12.5 ಕೋಟಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು. ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಪೌರಾಯುಕ್ತರು, ಸದಸ್ಯರು, ಸಿಬ್ಬಂದಿಗಳು ರಸ್ತೆ ವಿಸ್ತರಣೆ ಕಾಮಗಾರಿಯ ಕಟ್ಟಡ ತೆರವು ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಮಂಗಳವಾರವೂ ಸಹ ಒಂದಾದರೊಂದಂತೆ ಕಟ್ಟಡಗಳ ಮುಂಭಾಗದ ತಡೆಗೋಡೆಗಳನ್ನು ತೆರವುಗೊಳಿಸಲಾಯಿತು.
ಕಟ್ಟಡ ತೆರವು ಕಾರ್ಯಾಚರಣೆಯ ಬಗ್ಗೆ ಪೌರಾಯುಕ್ತ ಎ. ವಾಸಿಂ ಪ್ರತಿಕ್ರಿಯಿಸಿ, ನಗರದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಭರದಿಂದ ಸಾಗಿದ್ದು ಈಗಾಗಲೇ ಕೆಲವು ಕಟ್ಟಡಗಳ ತಡೆಗೋಡೆ ಹಾಗೂ ಮುಂಭಾಗವನ್ನು ತೆರವು ಮಾಡಲಾಗಿದೆ. ಕೆಲವು ಕಟ್ಟಡ ಮಾಲೀಕರ ಮನವಿ ಮೇರೆಗೆ ಕಾಲಾವಕಾಶ ನೀಡಲಾಗಿದೆ. ಜತೆಗೆ ಕಟ್ಟಡ ಮಾಲೀಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಕೆಲವರು ಸ್ವಯಂ ಪ್ರೇರಿತರಾಗಿ ಅವರೇ ತೆರವುಗೊಳಿಸಿಕೊಳ್ಳುತ್ತಿದ್ದಾರೆ. ನಿಗದಿತ ಅವಧಿಯೊಳಗೆ ತೆರವು ಕಾರ್ಯಾಚರಣೆ ಮುಗಿಸಲಾಗುವುದು ಎಂದರು.ಕಟ್ಟಡ ತೆರವು ಕಾರ್ಯ ಅಭಿನಂದನಾರ್ಹ
ನಗರ ಭಾಗದ ಜನರು ಬೆಳಿಗ್ಗೆ ಮತ್ತು ಸಂಜೆ ರಸ್ತೆ ದಾಟಲು ಹರಸಾಹಸ ಪಡುತ್ತಿದ್ದರು. ಅದರಲ್ಲೂ ಸಂಜೆ ಹೊತ್ತು ಶಾಲೆಗಳು ಬಿಟ್ಟಾಗ ಅರ್ಧ ಗಂಟೆ ಗಾಂಧಿ ವೃತ್ತ ದಾಟಿ ಹೋಗಲು ಮಕ್ಕಳು, ಮಹಿಳೆಯರು, ವೃದ್ಧರಿಗೆ ತ್ರಾಸದಾಯಕವಾಗಿತ್ತು. ಇದೀಗ ದಿಟ್ಟ ಹೆಜ್ಜೆ ಇಟ್ಟಿರುವ ಆಡಳಿತದವರು ಮತ್ತು ಅಧಿಕಾರಿಗಳು ರಸ್ತೆ ವಿಸ್ತರಣೆಗೆ ಕಟ್ಟಡ ತೆರವು ಮಾಡುತ್ತಿರುವುದು ಅಭಿನಂದನಾರ್ಹ.ಎಂಎಲ್. ಗಿರಿಧರ್ ತಾಲೂಕು ಅಧ್ಯಕ್ಷ ವಂದೇಮಾತರಂ ಸಂಘಟನೆ