ಪಂಪಿನ ಕೆರೆಯಿಂದ ನಾಲ್ಕು ಶಕ್ತಿ ದೇವತೆಗಳ ಕರಗ ಸಂಚಾರ ಆರಂಭ । ನಾಳೆಯಿಂದ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವಿಘ್ನೇಶ್ ಎಂ. ಭೂತನಕಾಡು
ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಮಡಿಕೇರಿ ದಸರಾ ಜನೋತ್ಸವಕ್ಕೆ ಸೋಮವಾರ ಸಂಜೆ ನಗರದ ಪಂಪಿನ ಕರೆಗೆಯ ಬಳಿ ನಾಲ್ಕು ಶಕ್ತಿ ದೇವತೆಗಳ ಕರಗಗಳು ಸಂಚಾರ ಆರಂಭಿಸುವ ಮೂಲಕ ಚಾಲನೆ ದೊರಕಲಿದೆ.
ಮೈಸೂರು ದಸರಾ ಜಂಬೂಸವಾರಿಗೆ ಖ್ಯಾತಿ ಗಳಿಸಿದ್ದರೆ, ಮಡಿಕೇರಿ ದಸರಾ ದಶ ಮಂಟಪಗಳ ಶೋಭಾಯಾತ್ರೆ ಪ್ರಮುಖ ಆಕರ್ಷಣೆಯಾಗಿದೆ. ಇದರಿಂದಲೇ ವಿಜಯದಶಮಿಯಂದು ಕೊಡಗಿಗೆ ದಸರಾ ವೀಕ್ಷಿಸಲು ಲಕ್ಷಾಂತರ ಜನರು ಸೇರುತ್ತಾರೆ. ದಸರಾ ಅಂಗವಾಗಿ ಕಾಫಿ ದಸರಾ, ಬಹುಭಾಷಾ ಕವಿಗೋಷ್ಠಿ, ಮಕ್ಕಳ ದಸರಾ, ಮಹಿಳಾ ದಸರಾ, ಜಾನಪದ ದಸರಾ, ಯುವ ದಸರಾ ಸೇರಿದಂತೆ ಹಲವು ಕಾರ್ಯಕ್ರಮಗಳು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜಿತಗೊಂಡಿದೆ.ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳಾದ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಿ ಹಾಗೂ ಕೋಟೆ ಮಾರಿಯಮ್ಮ ದೇವತೆಗಳ ಕರಗವು ನಗರದ ಪಂಪಿನ ಕೆರೆಯಲ್ಲಿ ಪೂಜೆ ಸಲ್ಲಿಸಿ ಕರಗ ಸಂಚಾರವನ್ನು ಆರಂಭಿಸಲಿದೆ. ಒಂಬತ್ತು ದಿನಗಳ ಕಾಲ ಕೂಡ ನಗರ ಪ್ರದಕ್ಷಿಣೆ ಕರಗ ಸಂಚರಿಸಲಿದೆ. ಈ ಬಾರಿ ಮಡಿಕೇರಿ ದಸರಾ ಉತ್ಸವಕ್ಕೆ ಸರ್ಕಾರದಿಂದ ರು.1.50 ಕೋಟಿ ಅನುದಾನ ಘೋಷಣೆಯಾಗಿದ್ದು, ಅದ್ದೂರಿಯಾಗಿ ದಸರಾ ಉತ್ಸವ ನಡೆಯಲಿದೆ. ಮಡಿಕೇರಿ ನಗರ ದಸರಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಸೆ.23ರಿಂದ ಅ.2ರ ವರೆಗೆ ನಗರದ ಗಾಂಧಿ ಮೈದಾನದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
*ಸೆ.22 ಪಂಪಿನ ಕೆರೆಯಿಂದ ಕರಗ ಉತ್ಸವ ಆರಂಭ
*24ರಂದು ಬೆಳಗ್ಗೆ 10 ಗಂಟೆಗೆ ಕಾಫಿ ದಸರಾ
*27ರಂದು ಯುವ ದಸರಾ
*29ರಂದು ಜಾನಪದ ದಸರಾ
*ಅ.1ರ ಆಯುಧಾ ಪೂಜಾ ಸಮಾರಂಭ
----------------------------------------
ಸೆ.23ರಿಂದ ಅಕ್ಟೋಬರ್ 2ರವರೆಗೆ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಸಂಜೆ 6 ಗಂಟೆಯಿಂದ ಕಾರ್ಯಕ್ರಮಗಳು ಜರುಗಲಿವೆ. ಈ ಬಾರಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿದಿನ ಇತರ ಸ್ಥಳೀಯ ಹಾಗೂ ಹೊರ ಜಿಲ್ಲಾ ಕಲಾವಿದರುಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.-ಕುಡೆಕಲ್ ಸಂತೋಷ್, ಅಧ್ಯಕ್ಷ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ
ಸೆ.22 ರಂದು ಕರಗೋತ್ಸವ ಆರಂಭಗೊಳ್ಳಲಿದೆ. ಆದ್ದರಿಂದ ಸಂಜೆ ಮನೆ ಮತ್ತು ಅಂಗಡಿಗಳನ್ನು ಹಣತೆ, ಕಾಲುದೀಪ, ತೂಗುದೀಪಗಳಿಂದ ಅಲಂಕರಿಸಬೇಕು. ಅಲ್ಲದೆ ಮನೆಗಳ ಮುಂದೆ ಸುಂದರವಾದ ವರ್ಣರಂಜಿತ ಚುಕ್ಕಿ ರಂಗೋಲಿಯನ್ನು ಬಿಡಿಸಬೇಕು. ಈ ಎರಡೂ ಸ್ಪರ್ಧೆಗಳ ವಿಜೇತರಿಗೆ ವಿಶೇಷ ಬಹುಮಾನವನ್ನು ನೀಡಲಾಗುವುದು. ಈ ಬಾರಿ ವಿಶೇಷ ಆಕರ್ಷಣೆಯಾಗಿ ಸೆಲ್ಫಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ.ಬಿ.ಎಂ.ಹರೀಶ್ ಅಣ್ವೇಕರ್,ಅಧ್ಯಕ್ಷ ದಸರಾ ದಶಮಮಂಟಪ ಸಮಿತಿ
------------------------------------------------------------------