- ಮುಂಜಾನೆ 5 ಗಂಟೆಗೆ ಬನ್ನಿವೃಕ್ಷಕ್ಕೆ ಪೂಜೆ ಸಲ್ಲಿಸಿ ಹಬ್ಬ ಆಚರಣೆ
- - -ಕನ್ನಡಪ್ರಭ ವಾರ್ತೆ ನ್ಯಾಮತಿ
ತಾಲೂಕಿನ ಮಾದನಬಾವಿ ಗ್ರಾಮದ ದೊಡ್ಡ ಕಲ್ಲುಕಟ್ಟೆಯ ಶ್ರೀ ಗವಿ ಸಿದ್ದೇಶ್ವರಸ್ವಾಮಿ ಮತ್ತು ಬೀರಲಿಂಗೇಶ್ವರ ಸೇರಿದಂತೆ ವಿವಿಧ ದೇವರುಗಳ ದಸರಾ ಬನ್ನಿ ಉತ್ಸವ, ಮೆರವಣಿಗೆ ನಡೆಯಿತು. 18 ಹಳ್ಳಿ ಕಟ್ಟೆಮನೆ ಕ್ಷೇತ್ರದ ದೊಡ್ಡ ಕಲ್ಲುಕಟ್ಟೆಯ ಶ್ರೀಗವಿ ಸಿದ್ದೇಶ್ವರಸ್ವಾಮಿಗೆ ಬ್ರಾಹ್ಮೀ ಮುಹೂರ್ತದಲ್ಲಿ ಅರ್ಚಕರು ಪೂಜೆ ಸಲ್ಲಿಸಿ, ದಸರಾ ಬನ್ನಿ ಉತ್ಸವಕ್ಕೆ ಚಾಲನೆ ನೀಡಿದರು. ಅಲಂಕೃತ ಪಲ್ಲಕ್ಕಿಗಳಲ್ಲಿ ಬೆನಕನಹಳ್ಳಿ, ಹರಳಹಳ್ಳಿ, ಮಾದನಬಾವಿ ಗ್ರಾಮಗಳ ಶ್ರೀ ಬೀರಲಿಂಗೇಶ್ವರ ಸ್ವಾಮಿ, ಶ್ರೀ ಮರುಡ ಬಸವೇಶ್ವರ ಸ್ವಾಮಿ ಮೂರ್ತಿಗಳ ಹೊತ್ತ ಭಕ್ತರು ಸುಮಾರು 35ರಿಂದ 40 ಅಡಿ ಎತ್ತರವಿರುವ ದೊಡ್ಡ ಕಲ್ಲುಕಟ್ಟೆಯ ಬೆಟ್ಟವನ್ನು ಮುಮ್ಮುಖವಾಗಿ ಏರಿದದರೆ, ಅಣಜಿ ಗ್ರಾಮದ ಶ್ರೀ ಬೀರಲಿಂಗೇಶ್ವರ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಹೊತ್ತ ಭಕ್ತರು ಹಿಮ್ಮುಖವಾಗಿ ಬೆಟ್ಟವನ್ನು ಏರಿದರು. ಇದು ಇಲ್ಲಿಯ ದಸರಾ ಬನ್ನಿ ಉತ್ಸವದ ಪದ್ಧತಿಯಾಗಿರುವುದು ವಿಶೇಷ.ಗ್ರಾಮದ ವೀರಭದ್ರೇಶ್ವರ ಸ್ವಾಮಿ, ಶ್ರೀ ರಂಗನಾಥ ಸ್ವಾಮಿ, ಶ್ರೀ ಗವಿಸಿದ್ದೇಶ್ವರ ಸ್ವಾಮಿ, ಶ್ರೀ ಬೀರಲಿಂಗೇಶ್ವರ ಸ್ವಾಮಿ, ಬೆನಕನಹಳ್ಳಿ ಗ್ರಾಮದ ಬೀರಲಿಂಗೇಶ್ವರ ಸ್ವಾಮಿ, ಅರಬಗಟ್ಟೆಯ ಚಿಕ್ಕಪ್ಪ ದೇವರು, ಶ್ರೀ ಮುರುಡ ಬಸವೇಶ್ವರ ಸ್ವಾಮಿ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮಾದನಬಾವಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಡೊಳ್ಳು, ಭಜನೆ, ಕಹಳೆ ಇನ್ನಿತರೆ ಜಾನಪದ ವಾದ್ಯ ಮೇಳಗಳು ಮೆರವಣಿಗೆಗೆ ಕಳೆ ತಂದವು. ಸಹಸ್ರಾರು ಭಕ್ತರ ಸಮ್ಮುಖ ಉತ್ಸವ ಅದ್ಧೂರಿಯಾಗಿ ನಡೆಯಿತು. ಮುಂಜಾನೆ 5 ಗಂಟೆಗೆ ಬನ್ನಿವೃಕ್ಷಕ್ಕೆ ಪೂಜೆ ಸಲ್ಲಿಸುವ ಬನ್ನಿಯನ್ನು ಮುಡಿಯಲಾಯಿತು.ಮಾದನಬಾವಿ ದೊಡ್ಡಕಲ್ಲುಕಟ್ಟೆಯ ಬನ್ನಿ ಉತ್ಸವಕ್ಕೆ ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳ ಸಾವಿರಾರು ಭಕ್ತರು ಆಗಮಿಸಿದ್ದರು. ಡೊಳ್ಳು ತಂಡದ ಸದ್ದಿಗೆ ಯುವಜನರು ಕುಣಿದು ಕುಪ್ಪಳಿಸಿ, ಸಂಭ್ರಮಿಸಿದರು.
- - - (-ಫೋಟೋ)