ಕನ್ನಡಪ್ರಭ ವಾರ್ತೆ ಸಿಂಧನೂರು
ನಾಡಹಬ್ಬವೆಂದೇ ಕರೆಯಲ್ಪಡುವ ದಸರಾ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಹಬ್ಬವಾಗಿದೆ ಎಂದು ಸಣ್ಣ ಕೈಗಾರಿಕೆಗಳ ಹಾಗೂ ಸಾರ್ವಜನಿಕ ಉದ್ಯಮಗಳ ಇಲಾಖೆಯ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.ತಾಲೂಕಿನ ಶ್ರೀಕ್ಷೇತ್ರ ಸಿದ್ಧಪರ್ವತ ಅಂಬಾಮಠದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸಿಂಧನೂರು ದಸರಾ ಉತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಮೀಣ ದಸರಾ, ಅಂಬಾದೇವಿ ನವರಾತ್ರಿ ದಸರಾ ಉತ್ಸವ ಉದ್ಘಾಟನೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಶಾಸಕ ಹಂಪನಗೌಡ ಬಾದರ್ಲಿ ಅವರು ಅತ್ಯಂತ ಉತ್ಸಾಹದಿಂದ ಕಳೆದ ವರ್ಷ ಹಾಗೂ ಈ ವರ್ಷ ದಸರಾ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಲು ಮುಂದಾಗಿರುವುದು ಸಂತಸ ತಂದಿದೆ. ವಿಶೇಷವಾಗಿ ಪಕ್ಷಾತೀತವಾಗಿ ಎಲ್ಲರನ್ನು ಕೂಡಿಸಿಕೊಂಡು ಹಬ್ಬ ಆಚರಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ. ಮೈಸೂರು ದಸರಾ ನೆನಪು ಮಾಡಿಕೊಳ್ಳುವಷ್ಟು ಇಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಪರಿಸರ ಜಾಗೃತಿ, ಮನೋರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶ್ಲಾಘಿಸಿದರು.
ತಾಯಿ ತುಂಗಭದ್ರೆಯ ಆಶೀರ್ವಾದದಿಂದ ಈ ಭಾಗದ ರೈತರು ಕೃಷಿಯಲ್ಲಿ ತೊಡಗಿ ದೇಶದಲ್ಲೇ ನಂ.1 ಸೋನಾ ಮಸೂರಿ ಅಕ್ಕಿ ಬೆಳೆಯುತಿದ್ದಾರೆ. ಇಲ್ಲಿ ಅಷ್ಟೇ ಜ್ವಲಂತ ಸಮಸ್ಯೆಗಳು ಕಾಡುತ್ತಿವೆ. ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಸಿಂಪಡಣೆಯಿಂದ ತಿನ್ನುವ ಆಹಾರಗಳು ವಿಷವಾಗುತ್ತವೆ. ಭೂಮಿ ಫಲವತ್ತತೆ ಕಳೆದುಕೊಂಡು ಸಾಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿ ಕಡೆ ರೈತರು ಮುಂದಾಗಿರುವುದು ಸಂತಸ ತಂದಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿದರು. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಅಂಬಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಸೋಮಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಮ್ಮ ಹುಸೇನಪ್ಪ, ಸಾಲಗುಂದಾ ಗ್ರಾ.ಪಂ ಅಧ್ಯಕ್ಷೆ ಶರಣಮ್ಮ, ರೌಡಕುದಾ ಗ್ರಾ.ಪಂ. ಅಧ್ಯಕ್ಷೆ ಅನ್ನಪೂರ್ಣಮ್ಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಇದ್ದರು. ತಹಸೀಲ್ದಾರ್ ಅರುಣ್ ಎಚ್.ದೇಸಾಯಿ ಸ್ವಾಗತಿಸಿದರು. ಜೀ ಕನ್ನಡ ಸರಿಗಪಮ ಖ್ಯಾತಿಯ ಗಾಯಕಿ ಶಿವಾಜಿ ಪ್ರಾರ್ಥನೆ ಗೀತೆ ಹಾಡಿದರು. ವೀರೇಶ ಸಾಲಿಮಠ ರೈತಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಗ್ರಾಮಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನ ಬಂದಿದ್ದರು.
ಅದ್ಧೂರಿ ಮೆರವಣಿಗೆ: ಸಿಂಧನೂರು ತಾಲೂಕಿನ ಸಿದ್ಧಪರ್ವತ ಅಂಬಾಮಠದಲ್ಲಿ ಗ್ರಾಮೀಣ ದಸರಾ ಉತ್ಸವ ಉದ್ಘಾಟನೆ ಕಾರ್ಯಕ್ರಮಕ್ಕೂ ಮುನ್ನ ಅದ್ದೂರಿ ಮೆರವಣಿಗೆ ನಡೆಯಿತು.ನೂರಾರು ಮಹಿಳೆಯರು ಕುಂಭ-ಕಳಸ ಹಿಡಿದು ಸಾಗಿದರು. ಗೊಂಬೆ ಕುಣಿತ, ಲಂಬಾಣಿ ನೃತ್ಯ, ಮಂಗಳಮುಖಿಯರ ನೃತ್ಯ, ವೀರಗಾಸೆ, ಡೊಳ್ಳು ಕುಣಿತ, ಭಾಜಾ-ಭಜಂತ್ರಿಗಳ ವಾದ್ಯ ಮೆರವಣಿಗೆಗೆ ಮೆರಗು ತಂದವು. ದೇವಸ್ಥಾನದವರೆಗೂ ಮೆರವಣಿಗೆ ನಡೆಯಿತು. ಅಂಬಾದೇವಿ ದೇವಸ್ಥಾನದ ನೂತನ ಶಿಲಾಮಂಟಪದ ಸ್ತಬ್ದ ಚಿತ್ರ ಆಕರ್ಷಕವಾಗಿತ್ತು.