ಲಕ್ಷ್ಮೇಶ್ವರ: ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಯುವಕರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸದೆ ಇರುವ ಹಿನ್ನೆಲೆಯಲ್ಲಿ ಕ್ರೀಡಾ ಆಯೋಜಕರನ್ನು ಶಾಸಕ ಡಾ. ಚಂದ್ರು ಲಮಾಣಿ ತರಾಟೆಗೆ ತೆಗೆದುಕೊಂಡು ಘಟನೆ ಶನಿವಾರ ನಡೆಯಿತು.
ದಸರಾ ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಕ್ರೀಡಾಪಟುಗಳು ಭಾಗವಹಿಸಬೇಕಾಗಿತ್ತು. ಆದರೆ ತಾಲೂಕಿನ ಕ್ರೀಡಾ ಇಲಾಖೆಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಪ್ರಚಾರ ಮತ್ತು ಮಾಹಿತಿ ನೀಡದ ಹಿನ್ನೆಲೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ಕ್ರೀಡಾಪಟುಗಳು ಆಗಮಿಸಿದ್ದಾರೆ. ಇದು ತಾಲೂಕು ಮಟ್ಟದ ಕ್ರೀಡಾಕೂಟ ಹೀಗೆ ಬೇಕಾಬಿಟ್ಟಿ ಕ್ರೀಡಾಕೂಟ ಆಯೋಜಿಸಿದ್ದು ಸರಿಯಲ್ಲ ಎಂದು ಹೇಳಿದ ಶಾಸಕರು ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಯುವಕರು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸದೃಢ ಅರೋಗ್ಯ ಹೊಂದಲು ಸಾಧ್ಯ, ಯುವಕರು ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ದೈಹಿಕ ಅರೋಗ್ಯ ಕಾಪಾಡಿಕೊಳ್ಳುವುದು ಅಗತ್ಯವಿದೆ ಎಂದರು.ಖೋಖೋ ಪಂದ್ಯಾವಳಿ ವೇಳೆ ಯುವಕರ ಮಾರಾಮಾರಿ: ಪಟ್ಟಣದ ಉಮಾ ವಿದ್ಯಾಲಯದಲ್ಲಿ ಶನಿವಾರ ಮಧ್ಯಾಹ್ನ ನಡೆದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಬಾಲೆಹೊಸೂರ ಹಾಗೂ ಬಟ್ಟೂರ ಗ್ರಾಮದ ಯುವಕರು ಖೋ ಖೋ ಪಂದ್ಯಾವಳಿ ವೇಳೆ ಪರಸ್ಪರ ರಕ್ತ ಬರುವಂತೆ ಹೊಡೆದಾಡಿಕೊಂಡಿದ್ದಾರೆ. ಹೀಗಾಗಿ ಕ್ರೀಡಾಕೂಟ ಮುಂದೂಡಲಾಗಿದೆ.
ಅವ್ಯವಸ್ಥೆಯ ಆಗರವಾದ ದಸರಾ ಕ್ರೀಡಾಕೂಟ:ಲಕ್ಷ್ಮೇಶ್ವರ ತಾಲೂಕಿನ ಕ್ರೀಡಾಕೂಟ ಹಲವು ಅವ್ಯವಸ್ಥೆಗಳ ಆಗರವಾಗಿತ್ತು. ನೀರಿನ ವ್ಯವಸ್ಥೆ ಇರಲಿಲ್ಲ. ಪೊಲೀಸ್ ಭದ್ರತೆಯೂ ಇರಲಿಲ್ಲ. ಕ್ರೀಡಾಕೂಟದಲ್ಲಿ ಕ್ರೀಡಾಪಟು ಗಾಯಗೊಂಡರೆ ಅವರಿಗೆ ಪ್ರಥಮ ಚಿಕಿತ್ಸೆ ನೀಡುವ ವೈದ್ಯಕೀಯ ವ್ಯವಸ್ಥೆ ಇರಲಿಲ್ಲ. ಏನಾದರೂ ಅನಾಹುತವಾದರೆ ಹೊಣೆ ಯಾರು ಎಂದು ಬಾಲೆಹೊಸೂರಿನ ಮಲ್ಲಿಕಾರ್ಜುನ ದೊಡ್ಡಮನಿ ಪ್ರಶ್ನಿಸಿದರು.