ಮಕ್ಕಳ ರಕ್ಷಣಾ ಕಾಯಿದೆ ಅನುಷ್ಠಾನ ಅಧಿಕಾರಿಗಳ ಕರ್ತವ್ಯ: ಡಾ.ತಿಪ್ಪೇಸ್ವಾಮಿ ಕೆ.ಟಿ.

KannadaprabhaNewsNetwork |  
Published : Jan 04, 2025, 12:31 AM IST
03ಮಕ್ಕಳು | Kannada Prabha

ಸಾರಾಂಶ

ಶುಕ್ರವಾರ ಉಡುಪಿ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಸಹಭಾಗೀದಾರರಿಗೆ ಪೋಕ್ಸೋ, ಬಾಲ್ಯವಿವಾಹ, ಆರ್.ಟಿ.ಇ, ಭ್ರೂಣಹತ್ಯೆ, ವಲಸೆ ಕುಟುಂಬಗಳಲ್ಲಿ ಮಕ್ಕಳ ರಕ್ಷಣೆ, ಮಕ್ಕಳ ಸಾಗಾಣಿಕೆ ಹಾಗೂ ಮಾರಾಟ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳ ಪುನರ್ವಸತಿ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಮಕ್ಕಳ ರಕ್ಷಣೆಗಿರುವ ಕಾಯಿದೆಗಳು, ಯೋಜನೆಗಳು ಹಾಗೂ ನಿಯಮಾವಳಿಗಳು ಕೇವಲ ಸುತ್ತೋಲೆಗಳಿಗಷ್ಟೇ ಸೀಮಿತವಾಗಿರದೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ ಹೇಳಿದರು.

ಅವರು ಶುಕ್ರವಾರ ಉಡುಪಿ ತಾಪಂ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಉಡುಪಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸಹಯೋಗದಲ್ಲಿ ತಾಲೂಕು ಮಟ್ಟದ ಸಹಭಾಗೀದಾರರಿಗೆ ನಡೆದ ಪೋಕ್ಸೋ, ಬಾಲ್ಯವಿವಾಹ, ಆರ್.ಟಿ.ಇ, ಭ್ರೂಣಹತ್ಯೆ, ವಲಸೆ ಕುಟುಂಬಗಳಲ್ಲಿ ಮಕ್ಕಳ ರಕ್ಷಣೆ, ಮಕ್ಕಳ ಸಾಗಾಣಿಕೆ ಹಾಗೂ ಮಾರಾಟ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳ ಪುನರ್ವಸತಿ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಮಕ್ಕಳ ರಕ್ಷಣಾ ಕಾಯಿದೆಗಳು ಆಗಾಗ್ಗೆ ತಿದ್ದುಪಡಿಯಾಗುತ್ತವೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಹಭಾಗೀದಾರರು ಇದರ ಬಗ್ಗೆ ಅರಿವು ಹೊಂದಿದ್ದು, ಇಲಾಖೆಗಳ ಜೊತೆ ಸಮನ್ವಯತೆಯಿಂದ ತಮ್ಮ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣಗಳನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕು ಎಂದರು.

ಶಾಲೆಗಳು ಕೇವಲ ಶಿಕ್ಷಣ ಸಂಸ್ಥೆಗಳಲ್ಲದೇ ಮಕ್ಕಳಿಗೆ ರಕ್ಷಣಾ ಸಂಸ್ಥೆಗಳಾಗಿ ರೂಪುಗೊಳ್ಳಬೇಕು, ಮಕ್ಕಳ ಸಹಾಯವಾಣಿ ಸಂಖ್ಯೆ 1098ನ್ನು ಪ್ರತಿಯೊಂದು ಸರ್ಕಾರಿ ಕಟ್ಟಡಗಳಲ್ಲಿ ಪ್ರದರ್ಶಿಸಬೇಕು, ಏಕಪೋಷಕ, ಅನಾಥ, ಹೆತ್ತವರಿಂದ ನಿರ್ಲಕ್ಷಿತ, ವಿಕಲಚೇತನ, ಆರ್ಥಿಕವಾಗಿ ಹಿಂದುಳಿದ, ಸಂಕಷ್ಟಕ್ಕೊಳಗಾದ ಮಕ್ಕಳನ್ನು ಗುರುತಿಸಿ, ಹುರಿದುಂಬಿಸಿ, ಪ್ರೋತ್ಸಾಹಿಸಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ.ಆರ್ ಮಾತನಾಡಿ, ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಪ್ರಬುದ್ಧತೆ ಇಲ್ಲದೆ, ಸೂಕ್ತ ನಿರ್ಧಾರ ಕೈಗೊಳ್ಳುವ ಶಕ್ತಿ ಇರುವುದಿಲ್ಲ. ಅಂತಹ ಮಕ್ಕಳ ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಹಾಗೂ ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲ ಸಿ.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಯುನಿಸೆಫ್‌ನ ಸಿಸ್ಟರ್ ದುಲ್ಸಿನಾ ಕ್ರಾಸ್ತಾ ಆಗಮಿಸಿದ್ದದರು. ಮಕ್ಕಳ ವಿಶೇಷ ಪೊಲೀಸ್ ಘಟಕದ ಹಿರಿಯ ಮಕ್ಕಳ ಕಲ್ಯಾಣಾಧಿಕಾರಿ ಪ್ರಭು ಡಿ.ಟಿ, ಉಡುಪಿ ತಾಪಂನ ವ್ಯವಸ್ಥಾಪಕ ಫರ್ಝಾನ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು, ಜ್ಯೋತಿ ನಿರೂಪಿಸಿ, ವಂದಿಸಿದರು.

PREV

Recommended Stories

ಮುಸುಕುಧಾರಿ ಯಾರು ? ಸ್ನೇಹಿತನಿಂದ ವಿವರ ಸಂಗ್ರಹಿಸಿದ ಎಸ್‌ಐಟಿ
ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!