ರೈಲ್ವೆ ಪ್ರಯಾಣ ದರ ಹೆಚ್ಚಳಕ್ಕೆ ಆಕ್ರೋಶ

KannadaprabhaNewsNetwork |  
Published : Dec 28, 2025, 02:15 AM IST
27ಕೆಡಿವಿಜಿ1-ದಾವಣಗೆರೆಯಲ್ಲಿ ಶನಿವಾರ ರೈಲ್ವೇ ಪ್ರಯಾಣ ದರ ಏರಿಕೆಯನ್ನು ಹಿಂಪಡೆಯಲು ಒತ್ತಾಯಿಸಿ ಎಸ್‌ಯುಸಿಐ(ಸಿ) ಜಿಲ್ಲಾ ಘಟಕದಿಂದ ರೈಲ್ವೇ ನಿಲ್ದಾಣದ ಎದುರು ಪ್ರತಿಭಟಿಸಲಾಯಿತು. | Kannada Prabha

ಸಾರಾಂಶ

ದೇಶಾದ್ಯಂತ ಎಲ್ಲಾ ವರ್ಗಗಳ ರೈಲುಗಳ ಪ್ರಯಾಣ ದರವನ್ನು ಡಿ.26ರಿಂದಲೇ ಅನ್ವಯವಾಗುವಂತೆ ಹೆಚ್ಚಿಸಿರುವುದನ್ನು ಹಿಂಪಡೆಯಲು ಒತ್ತಾಯಿಸಿ ಎಸ್‌ಯುಸಿಐ ಪಕ್ಷದ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಪ್ರತಿಭಟಿಸಲಾಯಿತು.

ದಾವಣಗೆರೆ: ದೇಶಾದ್ಯಂತ ಎಲ್ಲಾ ವರ್ಗಗಳ ರೈಲುಗಳ ಪ್ರಯಾಣ ದರವನ್ನು ಡಿ.26ರಿಂದಲೇ ಅನ್ವಯವಾಗುವಂತೆ ಹೆಚ್ಚಿಸಿರುವುದನ್ನು ಹಿಂಪಡೆಯಲು ಒತ್ತಾಯಿಸಿ ಎಸ್‌ಯುಸಿಐ ಪಕ್ಷದ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಪ್ರತಿಭಟಿಸಲಾಯಿತು.

ನಗರದ ರೈಲ್ವೆ ನಿಲ್ದಾಣದ ಎದುರು ಎಸ್‌ಯುಸಿಐ ಜಿಲ್ಲಾ ಘಟಕದ ಪದಾಧಿಕಾರಿಗಳ ನೇತೃತ್ವದಲ್ಲಿ ರೈಲ್ವೆ ಪ್ರಯಾಣ ದರ ಹೆಚ್ಚಿಸಿರುವುದನ್ನು ವಿರೋಧಿಸಿ ಪ್ರತಿಭಟಿಸಿದ ಮುಖಂಡರು, ಕಾರ್ಯಕರ್ತರು ನಂತರ ರೈಲ್ವೆ ಸ್ಟೇಷನ್ ಮಾಸ್ಟರ್ ಮುಖಾಂತರ ಪ್ರಧಾನಿಗೆ ಮನವಿ ಅರ್ಪಿಸಿದರು.

ಇದೇ ವೇಳೆ ಮಾತನಾಡಿದ ಪಕ್ಷದ ರಾಜ್ಯ ಸಮಿತಿ ಮುಖಂಡ ಡಾ.ಟಿ,ಎಸ್.ಸುನಿತ್‌ಕುಮಾರ, ಡಿ.26ರಿಂದಲೇ ಅನ್ವಯವಾಗುವಂತೆ ರೈಲ್ವೆ ಪ್ರಯಾಣ ದರ ಹೆಚ್ಚಿಸಿರುವ ಕೇಂದ್ರ ಸರ್ಕಾರ ತಕ್ಷಣ ಅದನ್ನು ಹಿಂಪಡೆಯಲಿ. ರೈಲ್ವೇ ಪ್ರಯಾಣಿಕರು, ಕಾರ್ಮಿಕರು, ಉದ್ಯೋಗಸ್ಥರು, ವಿದ್ಯಾರ್ಥಿಗಳು, ಜನ ಸಾಮಾನ್ಯರ ಪರವಾಗಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕೇ ಹೊರತು, ಆರ್ಥಿಕ ಹೊರೆಯಾಗುವಂತೆ ಮಾಡಬಾರದು ಎಂದರು.

ಪ್ರಸಕ್ತ ಸಾಲಿನಲ್ಲಿ 2ನೇ ಬಾರಿಗೆ ಸಾಮಾನ್ಯ ವರ್ಗದಿಂದ ಎಸಿ ವರ್ಗದವರೆಗಿನ ಎಲ್ಲಾ ಶ್ರೇಣಿಗಳ ರೈಲ್ವೆ ಪ್ರಯಾಣ ದರವನ್ನು ಏಕಪಕ್ಷೀಯ, ಅನಿಯಂತ್ರಿಕ ಏರಿಕೆಯನ್ನು ಕೇಂದ್ರ ಮಾಡಿರುವುದು ಸರಿಯಲ್ಲ. ಭಾರತೀಯ ರೈಲ್ವೆ ದೇಶದ ಅತೀ ದೊಡ್ಡ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿದೆ. ನಿತ್ಯವೂ 2.3 ಕೋಟಿ ಪ್ರಯಾಣಿಕರು ರೈಲ್ವೆ ಸೇವೆಯನ್ನು ಅವಲಂಬಿಸಿದ್ದಾರೆ. ಈ ಪ್ರಯಾಣಿಕರಲ್ಲಿ ಶೇ.90ಕ್ಕಿಂತ ಹೆಚ್ಚು ಮಂದಿ ಸಾಮಾನ್ಯ, ದ್ವಿತೀಯ ದರ್ಜೆ, ಸ್ಲೀಪರ್ ವರ್ಗದ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಬಡ, ಮಧ್ಯಮ ವರ್ಗದವರು ಎಂದು ತಿಳಿಸಿದರು.

ರೈಲ್ವೆ ಪ್ರಯಾಣ ದರ ಏರಿಕೆ ಜನರ ಮೇಲೆ ನೇರ ಆರ್ಥಿಕ ದಾಳಿಯಾಗಿದೆ. ಈಗಾಗಲೇ ದುಬಾರಿ ಆಹಾರ ಪದಾರ್ಥಗಳು, ಇಂಧನ, ಆರೋಗ್ಯ ಹಾಗೂ ಶಿಕ್ಷಣ ವೆಚ್ಚಗಳಿಂದ ನಲುಗಿರುವ ಜನರಿಗೆ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ನೂಕಿದೆ. ರೈಲ್ವೇ ಆರ್ಥಿಕ ಹೊರೆ, ಸಿಬ್ಬಂದಿ ವೆಚ್ಚವೇ ರೈಲ್ವೇ ಪ್ರಯಾಣ ದರ ಹೆಚ್ಚಳಕ್ಕೆ ಕಾರಣವೆನ್ನಲಾಗುತ್ತಿದೆ. ಆದರೆ, ಲಭ್ಯವಿರುವ ಅಧಿಕೃತ ಅಂಕಿ ಅಂಶಗಳೇ ಈ ವಾದವನ್ನು ಖಂಡಿಸುತ್ತವೆ ಎಂದರು.

ಪ್ಲಾಟ್‌ಫಾರ್ಮ್‌ಗಳು ಕೊಳಕಾಗಿಗದ್ದು, ವಿಶ್ರಾಂತಿ ಕೊಠಡಿ ಶಿಥಿಲಾವಸ್ಥೆಯಲ್ಲಿವೆ. ಆಹಾರಕ್ಕೆ ದುಬಾರಿ ದರ ವಸೂಲಿ ಮಾಡಲಾಗುತ್ತಿದೆ. ಆಹಾರದ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಮಹಿಳೆ, ಹಿರಿಯ ನಾಗರೀಕರು, ಮಕ್ಕಳ ಸುರಕ್ಷತೆ ಗಂಭೀರ ಅಪಾಯದಲ್ಲಿದೆ ಎಂದು ಆಕ್ಷೇಪಿಸಿದರು.

ತಕ್ಷಣ ಎಲ್ಲಾ ವರ್ಗಗಳ ರೈಲು ಪ್ರಯಾಣ ದರ ಏರಿಕೆ ಹಿಂಪಡೆಯಬೇಕು. ಸರಕು ಸಾಗಣೆಯಿಂದಲೇ ಸಾಕಷ್ಟು ಆದಾಯ ಹೊಂದಿರುವ ರೈಲ್ವೆ, ಪ್ರಯಾಣಿಕರ ಮೇಲೆ ದರ ಏರಿಕೆಯ ಹೊರೆ ಹಾಕುವ ನೀತಿ ಕೈಬಿಡಬೇಕು. ಸಾಮಾನ್ಯ, ಸ್ಲೀಪರ್ ವರ್ಗದ ಪ್ರಯಾಣ ದರ ಕಡಿಮೆ ಮಾಡಬೇಕು. ಪ್ರಯಾಣಿಕರ ಸುರಕ್ಷತೆ, ಸಮಯಪಾಲನೆ ಮತ್ತು ಮೂಲಭೂತ ಸೌಲಭ್ಯಗಳಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಡಾ.ಸುನಿತ್‌ಕುಮಾರ ಒತ್ತಾಯಿಸಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕೈದಾಳೆ, ಸದಸ್ಯರಾದ ಮಂಜುನಾಥ ಕುಕ್ಕವಾಡ, ಟಿ.ವಿ.ಎಸ್.ರಾಜು, ತಿಪ್ಪೇಸ್ವಾಮಿ, ಮಧು ತೊಗಲೇರಿ, ಭಾರತಿ, ಪರಶುರಾಮ, ಅನಿಲ್, ಶಿವಾಜಿ ರಾವ್‌, ನಾಗಸ್ಮಿತಾ, ಹಿರೇಮಠ, ರಾಘವೇಂದ್ರ, ಟಿ.ರಾಜು, ಕವಿತಾ, ಬೀರಲಿಂಗಪ್ಪ, ಯತೀಶ ಇತರರು ಇದ್ದರು. 27ಕೆಡಿವಿಜಿ1: ದಾವಣಗೆರೆಯಲ್ಲಿ ಶನಿವಾರ ರೈಲ್ವೆ ಪ್ರಯಾಣ ದರ ಏರಿಕೆಯನ್ನು ಹಿಂಪಡೆಯಲು ಒತ್ತಾಯಿಸಿ ಎಸ್‌ಯುಸಿಐ ಜಿಲ್ಲಾ ಘಟಕದಿಂದ ರೈಲ್ವೆ ನಿಲ್ದಾಣದ ಎದುರು ಪ್ರತಿಭಟಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ