ಹಿರಿಯರನ್ನು ಗೌರವಿಸುವುದು ಕರ್ತವ್ಯ: ನ್ಯಾ. ಎಚ್.ಆರ್.ಹೇಮಾ

KannadaprabhaNewsNetwork | Published : Oct 21, 2024 12:40 AM

ಸಾರಾಂಶ

ಹಲವಾರು ವರ್ಷ ಸಾರ್ವಜನಿಕರ ಹಿತ, ಸಮಾಜದ ಸರ್ವತೋಮುಖ ಬೆಳವಣಿಗೆಗೆ ಪ್ರಾಮಾಣಿಕವಾಗಿ ದುಡಿದ ಅನೇಕ ಹಿರಿಯರು ನಮ್ಮೊಂದಿಗಿದ್ದಾರೆ. ಅವರ ಆದರ್ಶ ನಾವೆಲ್ಲರೂ ಪಾಲಿಸಬೇಕು. ಹಿರಿಯರ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ ಉತ್ತಮ ಬದುಕು ಸಾಧ್ಯವೆಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಚ್.ಆರ್. ಹೇಮಾ ತಿಳಿಸಿದರು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಹಲವಾರು ವರ್ಷ ಸಾರ್ವಜನಿಕರ ಹಿತ, ಸಮಾಜದ ಸರ್ವತೋಮುಖ ಬೆಳವಣಿಗೆಗೆ ಪ್ರಾಮಾಣಿಕವಾಗಿ ದುಡಿದ ಅನೇಕ ಹಿರಿಯರು ನಮ್ಮೊಂದಿಗಿದ್ದಾರೆ. ಅವರ ಆದರ್ಶ ನಾವೆಲ್ಲರೂ ಪಾಲಿಸಬೇಕು. ಹಿರಿಯರ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ ಉತ್ತಮ ಬದುಕು ಸಾಧ್ಯವೆಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಚ್.ಆರ್. ಹೇಮಾ ತಿಳಿಸಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಇಂದಿಗೂ ನಾವು ಹಿರಿಯರ ಮುಂದಾಲೋಚನೆ ಮತ್ತು ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದಾಗ ನಮಗೆ ಆಶ್ಚರ್ಯವಾಗುವುದು ಸಹಜ. ನಾವೆಲ್ಲರೂ ನಮ್ಮ ಬದುಕನ್ನು ಅರ್ಥಗರ್ಭಿತವಾಗಿ ನಡೆಸಲಿ ಎಂಬ ಸದುದ್ದೇಶದಿಂದ ಅನೇಕ ತ್ಯಾಗಗಳನ್ನು ಅವರು ಮಾಡಿದ್ದಾರೆ. ಶೈಕ್ಷಣಿಕ ಸೌಲಭ್ಯವಿಲ್ಲದ ವೇಳೆ ತಮ್ಮದೇಯಾದ ಬುದ್ದಿವಂತಿಕೆಯಿಂದ ಸಮಾಜದಲ್ಲಿ ಪರಿವರ್ತನೆ ತಂದಿದ್ದಾರೆ ಎಂದರು.

ಇದೇ ಸಂದರ್ಭ ಅವರು ಕಂದಾಯ ಇಲಾಖೆಯಿಂದ ಗ್ರಾಮೀಣ ಭಾಗದ ಅನೇಕ ಹಿರಿಯರಿಗೆ ಮಂಜೂರಾದ ವಿಧಾನವೇತನ, ವೃದ್ದಾಪ್ಯವೇತನ ಮುಂತಾದ ಯೋಜನೆಗಳ ಮಂಜೂರಾತಿ ಪತ್ರ ವಿತರಿಸಿ, ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಹಿರಿಯರಿಗೆ ಗೌರವ ಕೊಡಬೇಕು. ಯಾವ ವ್ಯಕ್ತಿ ಹಿರಿಯರಿಗೆ ಅಗೌರವ ಉಂಟು ಮಾಡುತ್ತಾನೋ ಅಂತಹ ವ್ಯಕ್ತಿಯನ್ನು ಎಲ್ಲರೂ ಸೇರಿ ದೂರವಿಡಬೇಕಾಗುತ್ತದೆ. ಹಿರಿಯ ನಾಗರಿಕರು ಸಮಾಜದ ಆಸ್ತಿ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ತಳಕು ನಾಡಕಚೇರಿ ಉಪತಹಸೀಲ್ದಾರ್ ಮಹಮ್ಮದ್‌ ರಫೀ, ಹಿರಿಯರ ಸೇವೆಯ ಬಗ್ಗೆ ಕಂದಾಯ ಇಲಾಖೆಗೆ ಅಪಾರ ಗೌರವವಿದೆ ಎಂದರು.

ತಹಸೀಲ್ದಾರ್ ಪರವಾಗಿ ಅಧ್ಯಕ್ಷತೆ ವಹಿಸಿದ್ದ ಗಿರೀಶ್ ಮಾತನಾಡಿ, ಹಿರಿಯರ ಬಗ್ಗೆ ಉದಾಸೀನ, ಅಸಡ್ಡೆ ಸರಿಯಲ್ಲ. ನಾವೆಲ್ಲರೂ ಹಿರಿಯರ ಆದರ್ಶ ಬದುಕಿನಲ್ಲಿ ಅಳವಡಿಸಿಕೊಳ್ಳೋಣವೆಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು, ಉಪಾಧ್ಯಕ್ಷ ಬಿ.ಪಾಲಯ್ಯ, ಪ್ರಧಾನ ಕಾರ್ಯದರ್ಶಿ ಎಂ.ಸಿದ್ದರಾಜು, ಖಜಾಂಚಿ ಟಿ.ರುದ್ರಯ್ಯ, ಮಧುಮತಿ, ನಾಯಕನಹಟ್ಟಿ ನಾಡಕಚೇರಿ ಉಪತಹಸೀಲ್ದಾರ್ ಶಕುಂತಲಾ, ಪರಶುರಾಮಪುರ ನಾಡಕಚೇರಿ ಉಪತಹಸೀಲ್ದಾರ್ ಅನ್ನಪೂರ್ಣಮ್ಮ ಉಪಸ್ಥಿತರಿದ್ದರು.

೨೦ಸಿಎಲ್‌ಕೆ೧

ಚಳ್ಳಕೆರೆ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಚ್.ಆರ್. ಹೇಮಾ ಉದ್ಘಾಟಿಸಿ ಮಾತನಾಡಿದರು.

Share this article